Thursday, 26th December 2024

Sanjiv Khanna: ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿಯ ಅರ್ಜಿ; ವಿಚಾರಣೆಯಿಂದ ಹಿಂದಕ್ಕೆ ಸರಿದ ಸಿಜೆಐ ಸಂಜೀವ್ ಖನ್ನಾ

Sanjiv Khanna

ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ (Sanjiv Khanna) ಅವರು ಮಂಗಳವಾರ (ಡಿ. 3) ಹಿಂದೆ ಸರಿದಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯ್ದೆ 2023ರ ಸೆಕ್ಷನ್ 7 ಮತ್ತು 8ರ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರೊನ್ನಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ಅರ್ಜಿ ವಿಚಾರಣೆ 2025ರ ಜ. 6ರಂದು ಮತ್ತೊಂದು ನ್ಯಾಯಪೀಠದ ಮುಂದೆ ನಡೆಯಲಿದೆ. ಜತೆಗೆ ನ್ಯಾಯಪೀಠವು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಹೊಸ ಕಾನೂನಿನಲ್ಲಿ ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಇತರ ಚುನಾವಣಾ ಆಯುಕ್ತರನ್ನು ನೇಮಿಸುವ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ ಅವರನ್ನು ಕೈಬಿಡಲಾಗಿದೆ. ಪ್ರಧಾನಿ, ಕ್ಯಾಬಿನೆಟ್ ಸಚಿವರು ಮತ್ತು ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಅವರನ್ನು ನೇಮಕ ಮಾಡಲಾಗುತ್ತದೆ.

ಲೋಕಸಭಾ ಚುನಾವಣಾ ಮುನ್ನ ಚುನಾವಣಾ ಆಯುಕ್ತರ ನೇಮಕಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕಸಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಹಾಗೂ ದೀಪಾಂಕರ್‌ ದತ್ತಾ ನೇತೃತ್ವದ ನ್ಯಾಯಪೀಠವು, “ಚುನಾವಣಾ ಆಯೋಗವು ಶಾಸಕಾಂಗದ ಹೆಬ್ಬೆರಳಿನ ಕೆಳಗಿದೆ ಎಂದು ಹೇಳಲು ಆಗುವುದಿಲ್ಲ. ಈಗ ನೇಮಕಕ್ಕೆ ತಡೆಯಾಜ್ಞೆ ನೀಡಿದರೆ ಗೊಂದಲ ಸೃಷ್ಟಿಯಾಗುತ್ತದೆ” ಎಂದು ಸ್ಪಷ್ಟಪಡಿಸಿತ್ತು.

2023ರ ಡಿಸೆಂಬರ್‌ನಲ್ಲಿ ಅಂಗೀಕರಿಸಲಾದ ಚುನಾವಣಾ ಆಯುಕ್ತರ ಕಾಯ್ದೆಯು ಚುನಾವಣಾ ಆಯೋಗ (ಚುನಾವಣಾ ಆಯುಕ್ತರ ಸೇವಾ ಷರತ್ತುಗಳು ಮತ್ತು ವ್ಯವಹಾರದ ವಹಿವಾಟು) ಕಾಯ್ದೆ 1991 ಅನ್ನು ಬದಲಾಯಿಸುತ್ತದೆ. ಹೊಸ ಕಾಯ್ದೆಯ ಪ್ರಕಾರ ಕೇಂದ್ರ ಕಾನೂನು ಸಚಿವರ ನೇತೃತ್ವದ ಶೋಧನಾ ಸಮಿತಿಯು ಪ್ರಸ್ತಾಪಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಪರಿಗಣಿಸಿದ ನಂತರ ಆಯ್ಕೆ ಸಮಿತಿಯ ಶಿಫಾರಸಿನ ಬಲದ ಮೇಲೆ ರಾಷ್ಟ್ರಪತಿಯವರು ಚುನಾವಣಾ ಆಯುಕ್ತರನ್ನು ನೇಮಕ ಮಾಡುತ್ತಾರೆ. ಸೆಕ್ಷನ್ 7ರ ಪ್ರಕಾರ ಆಯ್ಕೆ ಸಮಿತಿಯು ಪ್ರಧಾನಿ, ಕೇಂದ್ರ ಕ್ಯಾಬಿನೆಟ್ ಸಚಿವರು ಮತ್ತು ವಿರೋಧ ಪಕ್ಷದ ನಾಯಕರನ್ನು ಒಳಗೊಂಡಿರುತ್ತದೆ.

ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯ ಸಲಹೆಯ ಮೇರೆಗೆ ಭಾರತದ ರಾಷ್ಟ್ರಪತಿ ಚುನಾವಣಾ ಆಯುಕ್ತರನ್ನು ನೇಮಿಸಬೇಕೆಂದು ನ್ಯಾಯಮೂರ್ತಿ (ನಿವೃತ್ತ) ಕೆ.ಎಂ.ಜೋಸೆಫ್ ನೇತೃತ್ವದ ಸಂವಿಧಾನ ಪೀಠ ನಿರ್ದೇಶಿಸಿದ ನಂತರ ಬದಲಾವಣೆ ತರಲಾಗಿದೆ.

2023ರ ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರ ಆಯುಕ್ತರ (ನೇಮಕ, ಸೇವಾ ಷರತ್ತುಗಳು ಹಾಗೂ ಕಚೇರಿಯ ಸೇವಾವಧಿ) ಕಾಯ್ದೆ ಜಾರಿಗೂ ಮೊದಲು ಪ್ರಧಾನಿ ಹಾಗೂ ಸಚಿವರು ಸೇರಿ ಮುಖ್ಯ ಚುನಾವಣಾ ಆಯುಕ್ತ ಹಾಗೂ ಇತರ ಚುನಾವಣೆ ಆಯುಕ್ತರ ಹೆಸರನ್ನು ಶಿಫಾರಸು ಮಾಡುತ್ತಿದ್ದರು. ಶಿಫಾರಸಿಗೆ ರಾಷ್ಟ್ರಪತಿಯವರು ಅಂಕಿತ ಹಾಕುತ್ತಿದ್ದರು.

ಈ ಸುದ್ದಿಯನ್ನೂ ಓದಿ: Sanjiv Khanna: ಸುಪ್ರೀಂ ಕೋರ್ಟ್‌ ಮುಂದಿನ ಸಿಜೆಐ ನ್ಯಾ. ಸಂಜೀವ್ ಖನ್ನಾ ಹಿನ್ನೆಲೆ ಏನು?