ಚಂಡೀಗಢ: ಅಕ್ಟೋಬರ್ 5ರಂದು ಹರಿಯಾಣ ವಿಧಾನಸಭಾ ಚುನಾವಣೆ (Haryana Assembly Elections 2024) ನಡೆಯಲಿದ್ದು, ರಾಜಕೀಯ ಪಕ್ಷಗಳು ಕೊನೆ ಕ್ಷಣದ ಕಸರತ್ತಿನಲ್ಲಿ ತೊಡಗಿವೆ. ವಿಶೇಷ ಎಂದರೆ ದೇಶದ ಅತ್ಯಂತ ಶ್ರೀಮಂತ ಮಹಿಳೆ ಎನಿಸಿಕೊಂಡಿರುವ ಸಾವಿತ್ರಿ ಜಿಂದಾಲ್ (Savitri Jindal) ಈ ಬಾರಿ ಕಣಕ್ಕಿಳಿದಿದ್ದಾರೆ. ಉದ್ಯಮಿ ಓಂ ಪ್ರಕಾಶ್ ಜಿಂದಾಲ್ (O.P. Jindal) ಅವರ ಪತ್ನಿ, 74 ವರ್ಷದ ಸಾವಿತ್ರಿ ಜಿಂದಾಲ್ ಸ್ವತಂತ್ರ ಅಭ್ಯರ್ಥಿಯಾಗಿ ಹಿಸಾರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಹಿರಿಯ ಅಭ್ಯರ್ಥಿಗಳಲ್ಲಿ ಸಾವಿತ್ರಿ ಜಿಂದಾಲ್ ಕೂಡ ಒಬ್ಬರು. ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿರುವ ಅವರು ಮನೆ ಮನೆಗೆ ತೆರಳಿ ಮತ ಯಾಚಿಸಿದ್ದಾರೆ. ವಯಸ್ಸು, ಶ್ರೀಮಂತಿಕೆಯನ್ನು ಮರೆತು ಅವರು ಜನರೊಂದಿಗೆ ಬೆರೆತಿದ್ದಾರೆ.
आज क्रांति नगर में अपने #Hisar परिवार से मिलकर अत्यंत खुशी हुई। आपका जोश और समर्थन देखकर विश्वास है कि 5 अक्टूबर को टॉर्च के निशान पर आपका वोट #Hisar को विकास की एक नई दिशा में ले जाएगा।
— Savitri Jindal (@SavitriJindal) October 1, 2024
हिसार का विश्वास, परिवर्तन और विकास। pic.twitter.com/FsvFpYYHld
ಹಿಸಾರ್‌ನಲ್ಲಿರುವ ತಮ್ಮ ನಿವಾಸ ಜಿಂದಾಲ್ ಹೌಸ್‌ನಲ್ಲಿ ಸೊಸೆ ಶಲ್ಲು ಅವರೊಂದಿಗೆ ಸಾವಿತ್ರಿ ಬೆಂಬಲಿಗರನ್ನು ಭೇಟಿ ಮಾಡಿದ್ದಾರೆ. ಜಿಂದಾಲ್ ಹೌಸ್‌ನ ಹಾಲ್‌ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಒ.ಪಿ. ಜಿಂದಾಲ್ ಅವರ ದೊಡ್ಡ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಒ.ಪಿ. ಜಿಂದಾಲ್ ಅವರು ಹರಿಯಾಣದ ಹಿಸಾರ್‌ನಲ್ಲಿ ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸಿದರು. ಬಳಿಕ ಜಿಂದಾಲ್ ತಮ್ಮ ಸಾಮ್ರಾಜ್ಯವನ್ನು ವಿದ್ಯುತ್, ಗಣಿಗಾರಿಕೆ, ಇಂಧನ ಮತ್ತು ಬಂದರು ಕ್ಷೇತ್ರಗಳಿಗೆ ವಿಸ್ತರಿಸಿದರು.
ಟಾರ್ಚ್ ಚಿಹ್ನೆ
ಸಾವಿತ್ರಿ ಜಿಂದಾಲ್ ಅವರು ಟಾರ್ಚ್ ಚಿಹ್ನೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. “ಅನುಯಾಯಿಗಳು ಮತ್ತು ಬೆಂಬಲಿಗರು ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಆಗ್ರಹಿಸಿದ್ದರಿಂದ ನಾನು ಕಣಕ್ಕೆ ಇಳಿದಿದ್ದೇನೆ” ಎಂದು ಅವರು ತಿಳಿಸಿದ್ದಾರೆ. ಸದ್ಯ ಅವರ ಸ್ಪರ್ಧೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಂತೂ ಸುಳ್ಳಲ್ಲ.
ಒ.ಪಿ. ಜಿಂದಾಲ್ ಕೂಡ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. 90ರ ದಶಕದಲ್ಲಿ ಅವರು ಮೊದಲ ಚುನಾವಣೆ ಗೆದ್ದಿದ್ದರು. ಬಳಿಕ 2004ರಲ್ಲಿ ಕಾಂಗ್ರೆಸ್ ಟಿಕಿಟ್‌ನಿಂದ ಹಿಸಾರ್ ಕ್ಷೇತ್ರದಲ್ಲಿ ಸ್ಪರ್ಧಿಸಿದ ಭೂಪಿಂದರ್ ಸಿಂಗ್ ಹೂಡಾ ಸರ್ಕಾರದಲ್ಲಿ ಸಚಿವರಾಗಿದ್ದರು. 2005ರಲ್ಲಿ ನಡೆದ ಹೆಲಿಕಾಫ್ಟರ್ ಅಪಘಾತದಲ್ಲಿ ಮೃತಪಟ್ಟರು. ಬಳಿಕ ಸಾವಿತ್ರಿ ಹಿಸಾರ್ ಕ್ಷೇತ್ರದಿಂದ ಸ್ಪರ್ಧಿಸಿ 2014ರವರೆಗೆ ಸಚಿವರಾಗಿದ್ದರು. 2014ರಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡರು.
ಸಾವಿತ್ರಿ ಜಿಂದಾಲ್ ಅವರ ಪುತ್ರ ನವೀನ್ ಲೋಕಸಭಾ ಕ್ಷೇತ್ರ ಕುರುಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. 2024ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ಅವರು ಈ ಬಾರಿಯೂ ಜಯ ಗಳಿಸಿದ್ದಾರೆ. ಈ ವರ್ಷದ ಮಾರ್ಚ್‌ನಲ್ಲಿ ತಮ್ಮ ಪುತ್ರ ನವೀನ್ ಜತೆಗೆ ಸಾವಿತ್ರಿ ಕೂಡ ಬಿಜೆಪಿಗೆ ಸೇರಿದ್ದರು. ಬಿಜೆಪಿಯಿಂದ ಈ ಬಾರಿ ಹಿಸಾರ್‌ನಿಂದ ಟಿಕೆಟ್ ದೊರೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಕೇಸರಿ ಪಾಳಯ ಡಾ. ಕಮಲ್ ಗುಪ್ತಾ ಅವರನ್ನು ಕಣಕ್ಕಿಳಿಸಿದ್ದರಿಂದ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ. ʼʼಹಿಸಾರ್ ಕ್ಷೇತ್ರದ ಟಿಕೆಟ್ ತಮ್ಮ ಕುಟುಂಬದ ಸದಸ್ಯನಿಗೆ ಸಿಗಬೇಕು ಎಂದು ಜಿಂದಾಲ್ ಕುಟುಂಬ ಬಯಸಿತ್ತು. ಆದರೆ ಬಿಜೆಪಿ ಇದಕ್ಕೆ ಒಪ್ಪಲಿಲ್ಲ. ಹೀಗಾಗಿ ಸಾವಿತ್ರಿ ಅವರು ಪಕ್ಷೇತರರಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆʼʼ ಎಂದು ಆಪ್ತ ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Haryana Polls: ಹರಿಯಾಣ ವಿಧಾನಸಭಾ ಚುನಾವಣೆ; ಕಣಕ್ಕಿಳಿದ ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್: ಯಾವ ಪಕ್ಷ?
ಪ್ರಬಲ ಸ್ಪರ್ಧೆ
ಈ ಚುನಾವಣೆಯಲ್ಲಿ ಸಾವಿತ್ರಿ ಅವರ ಪ್ರಮುಖ ಸ್ಪರ್ಧಿ ಹಾಲಿ ಶಾಸಕ ಮತ್ತು ಸಚಿವ ಡಾ. ಕಮಲ್ ಗುಪ್ತಾ. ಹಿಸಾರ್ ನಗರ ಕ್ಷೇತ್ರವಾಗಿದ್ದು, ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಅದಾಗ್ಯೂ ಸಾವಿತ್ರಿ ಅವರಿಗೆ ಗೆಲುವಿನ ಸಾಧ್ಯೆತೆ ಹೆಚ್ಚು ಎನ್ನಲಾಗಿದೆ. ಸದ್ಯ ಸಾವಿತ್ರಿ ಅವರು ಸ್ಥಳೀಯ ಸಮಸ್ಯೆಗಳನ್ನು ಚರ್ಚಿಸುತ್ತಿದ್ದಾರೆ.
ಹಿಸಾರ್‌ನಲ್ಲಿ ಕನಿಷ್ಠ 25 ಸಾವಿರ ಮಂದಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಜಿಂದಾಲ್ ಉದ್ಯಮದೊಂದಿಗೆ ಸಂಬಂಧ ಹೊಂದಿದ್ದಾರೆ. ಇದುವೇ ಸಾವಿತ್ರಿ ಜಿಂದಾಲ್ ಅವರಿಗಿರುವ ಬಹದೊಡ್ಡ ಬೆಂಬಲ. ಯಾವುದೇ ಸರ್ಕಾರ ಬರಲಿ ಸಾವಿತ್ರಿ ಜಿಂದಾಲ್ ಗೆದ್ದರೆ ಅವರಿಗೊಂದು ಸಚಿವ ಸ್ಥಾನ ಖಚಿತ ಎನ್ನಲಾಗುತ್ತಿದೆ.