Friday, 20th September 2024

ಶಿವಸೇನಾ ಶಾಸಕರ ಅನರ್ಹತೆ ಪ್ರಕ್ರಿಯೆಗೆ ತಡೆ

ನವದೆಹಲಿ: ಶಿವಸೇನಾದ ಶಾಸಕರ ಅನರ್ಹತೆಗೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆ ಮುಂದುವರಿಸಬಾರದು ಎಂದು ಮಹಾರಾಷ್ಟ್ರದ ವಿಧಾನಸಭೆ ಸ್ಪೀಕರ್‌ ರಾಹುಲ್‌ ನಾರ್ವೇಕರ್‌ ಅವರಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೆ ಅನರ್ಹತೆ ಪ್ರಕ್ರಿಯೆ ನಡೆಸದಂತೆ ಮನವಿ ಮಾಡುತ್ತೇನೆ ಎಂದು ಕಪಿಲ್‌ ಸಿಬಲ್‌ ನೇತೃತ್ವದ ಹಿರಿಯ ವಕಿಲರ ತಂಡ, ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಹಾಗೂ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠದೆದುರು ಮನವಿ ಮಾಡಿದೆ.

ಇದೇ ವೇಳೆ, ಸಿಬಲ್‌ ಅವರು, ಬಂಡಾಯ ಶಾಸಕರ ಅನರ್ಹಗೊಳಿಸುವಂತೆ ಈ ಹಿಂದೆ ಅರ್ಜಿಗಳು ಸಲ್ಲಿಕೆಯಾಗಿದ್ದಾಗ ಅವರನ್ನು ನ್ಯಾಯಾಲಯ ರಕ್ಷಿಸಿದೆ ಎಂದು ಹೇಳಿದ್ದಾರೆ.

ವಾದ ಆಲಿಸಿದ ಪೀಠವು, ಅನರ್ಹತೆಗೆ ಸಂಬಂಧಿಸಿದ ಪ್ರಕ್ರಿಯೆ ಆರಂಭಿಸಬಾರದು ಎಂದು ವಿಧಾನಸಭೆ ಸ್ಪೀಕರ್‌ಗೆ ತಿಳಿಸುವಂತೆ ರಾಜ್ಯಪಾಲರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಹೇಳಿದೆ.