Tuesday, 5th November 2024

School Principal Shot Dead: ನಡುರಸ್ತೆಯಲ್ಲೇ ಪ್ರಿನ್ಸಿಪಾಲ್ ಮೇಲೆ ಗುಂಡಿನ ದಾಳಿ; ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ಕೃತ್ಯ

ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ (Moradabad) ನಡೆದ ಶಾಕಿಂಗ್ ಘಟನೆಯೊಂದರಲ್ಲಿ ಶಾಲಾ ಪ್ರಿನ್ಸಿಪಾಲ್ ಒಬ್ಬರನ್ನು ಹಾಡಹಗಲೇ ನಡು ರಸ್ತೆಯಲ್ಲಿ ಗುಂಡಿಕ್ಕಿ (School Principal Shot Dead) ಸಾಯಿಸಲಾಗಿದೆ. ಈ ದುರ್ಘಟನೆಯ ವಿಡಿಯೋ ಸಮೀಪದಲ್ಲೇ ಇದ್ದ ಸಿಸಿ ಕೆಮರಾದಲ್ಲಿ ದಾಖಲುಗೊಂಡಿದ್ದು, ಇದೀಗ ಎಲ್ಲೆಡೆ ಇದು ವೈರಲ್ ಆಗಿದೆ.

ಸಾಯಿ ವಿದ್ಯಾಮಂದಿರ ಶಾಲೆಯ (Sai Vidya Mandir School) ಪ್ರಿನ್ಸಿಪಾಲ್ ಶಬಾಬ್-ಉಲ್-ಹಸನ್ (Shabab-ul-Hasan) ಅವರು ಬೆಳಗ್ಗೆ ಶಾಲೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಮಜ್ ಹೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಲಖ್ ಡೀ ಪ್ರದೇಶದಲ್ಲಿ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಆದರೆ, ಸಮೀಪದಲ್ಲಿದ್ದ ಸಿಸಿ ಕೆಮೆರಾದಲ್ಲಿ ಒಬ್ಬ ಆರೋಪಿಯ ಮುಖ ಚಹರೆ ದಾಖಲಾಗಿದ್ದು, ಇನ್ನೊಬ್ಬ ಆರೋಪಿ ಹೆಲ್ಮೆಟ್ ಧರಿಸಿದ್ದ.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹಸನ್ ಅವರ ಮೇಲೆ ಹಿಂಬದಿಯಿಂದ ಬೈಕಿನಲ್ಲಿ ಬಂದ ಆರೋಪಿಗಳು ನೇರವಾಗಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ರಸ್ತೆಗುರುಳಿದ ಹಸನ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರೂ, ಅದಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಶಬಾಬ್-ಉಲ್-ಹಸನ್ ಅವರು ಇನ್ನೇನು ಶಾಲೆಯನ್ನು ತಲುಪಲು 50 ಮೀಟರ್ ಗಳಷ್ಟೇ ಬಾಕಿಯಿತ್ತು, ದೇನಿಕ್ ಭಾಸ್ಕರ್ ಮಾಧ್ಯಮ ಮೂಲಗಳ ಪ್ರಕಾರ ಈ ಶಾಲೆಯು ಬಿಜೆಪಿಯ ಮೆಟ್ರೋಪಾಲಿಟನ್ ಸಚಿವ ಶಮ್ಮಿ ಭಟ್ನಾಗರ್ (Shammi Bhatnagar) ಅವರಿಗೆ ಸೇರಿದ್ದು ಎನ್ನಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ರಾಜೀವ್ ಸಿಂಗ್ ಅವರು, ಈ ಘಟನೆಗೆ ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ ಎಂದಿದ್ದಾರೆ. ಆದರೆ, ನಾಲ್ಕು ತಿಂಗಳ ಹಿಂದೆಯಷ್ಟೇ, ಈ ಶಾಲೆಯಲ್ಲಿ ನಡೆದಿದ್ದ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣದಲ್ಲಿ ಶಬಾಬ್-ಉಲ್-ಹಸನ್ ಹೆಸರು ಕೇಳಿಬಂದಿತ್ತು. ಮತ್ತು ಹಸನ್ ಅವರು ವಿದ್ಯಾರ್ಥಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ, ಸಂತ್ರಸ್ತ ವಿದ್ಯಾರ್ಥಿಯ ಕುಟುಂಬಸ್ಥರು ಹಸನ್ ವಿರುದ್ಧ ಎಪ್.ಐ.ಆರ್ ಸಹ ದಾಖಲಿಸಿದ್ದರು. ಆ ಪ್ರಕರಣಕ್ಕೂ ಈ ಶೂಟೌಟಿಗೂ ಏನಾದರೂ ಸಂಬಂಧವಿದೆಯೇ ಎಂಬ ಜಾಡಿನಲ್ಲಿ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಈ ಪ್ರಕರಣದ ತನಿಖೆಗಾಗಿ ಮೊರಾದಾಬಾದ್ ಎಸ್.ಪಿ. ಸತ್ಪಾಲ್ ಅಂಟಿಲ್ ಐದು ತಂಡಗಳನ್ನು ರಚಿಸಿದ್ದು, ಇದರಲ್ಲಿ ಒಂದು ವಿಶೇಷ ಕಾರ್ಯಾಚರಣೆ ಪಡೆ ಹಾಗೂ ವಿಚಕ್ಷಣ ಪಡೆಯೂ ಸೇರಿದೆ. ಇದರೊಂದಿಗೆ ಘಟನಾ ಸ್ಥಳದ ಹಾಗೂ ಆಸುಪಾಸಿನ ಸ್ಥಳಗಳ ಸಿಸಿ ಕೆಮರಾ ದೃಶ್ಯಾವಳಿಗಳನ್ನು ಪರಿಶೀಲಿಸಲು ಒಂದು ತಜ್ಞರ ತಂಡವನ್ನೂ ಸಹ ಇದರೊಂದಿಗೆ ಸೇರಿಸಲಾಗಿದೆ. ಈ ಮೂಲಕ ಶೂಟೌಟ್ ನಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನು ಶೀಘ್ರದಲ್ಲೇ ಪತ್ತೆಹಚ್ಚಲು ಮೊರಾದಾಬಾದ್ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.