Thursday, 3rd October 2024

Theft Case: ಟೊಮೆಟೊ ಬೆಳೆ ನಷ್ಟ ತುಂಬಲು 50ಕ್ಕೂ ಹೆಚ್ಚು ಲ್ಯಾಪ್‌ಟಾಪ್‌ ಕದ್ದು ಸಿಕ್ಕಿಬಿದ್ದ ಟೆಕ್ಕಿ!

laptop theft case

ಬೆಂಗಳೂರು: ಟೊಮೆಟೊ ಬೆಳೆ (tomato crop) ನಷ್ಟದಿಂದ ಉಂಟಾದ ಹಣಕಾಸಿನ ನಷ್ಟವನ್ನು (loss) ತುಂಬಿಕೊಳ್ಳಲು ಟೆಕ್ಕಿಯೊಬ್ಬ ಲ್ಯಾಪ್‌ಟಾಪ್‌ ಕದಿಯಲು (laptop theft case) ಆರಂಭಿಸಿದ್ದು, 50ಕ್ಕೂ ಹೆಚ್ಚು ಲ್ಯಾಪ್‌ಟಾಪ್‌ ಕದ್ದು ಸಿಕ್ಕಿಬಿದ್ದಿದ್ದಾನೆ.

ತನ್ನ ಕೆಲಸದ ಸ್ಥಳದಿಂದ 50ಕ್ಕೂ ಹೆಚ್ಚು ಲ್ಯಾಪ್‌ಟಾಪ್‌ಗಳನ್ನು ಕದ್ದಿರುವ ಆರೋಪದಲ್ಲಿ ಮುರುಗೇಶ್ ಎಂಬಾತನನ್ನು ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಈತ ವೈಟ್‌ಫೀಲ್ಡ್‌ನ ಕಂಪನಿಯೊಂದರಲ್ಲಿ ಸಿಸ್ಟಮ್ ಅಡ್ಮಿನಿಸ್ಟ್ರೇಟರ್‌ ಆಗಿದ್ದ. ಜೊತೆಗೆ ಕೃಷಿಯೋಜನೆಗಾಗಿ ಸಾಲ ಪಡೆದು ಹೊಸೂರಿನಲ್ಲಿ ಆರು ಎಕರೆ ಭೂಮಿಯಲ್ಲಿ ಟೊಮೆಟೊ ಬೆಳೆದಿದ್ದ. ಟೊಮೆಟೊ ಬೆಳೆ ಕೈಕೊಟ್ಟ ಪರಿಣಾಮ ಹಣಕಾಸಿನ ನಷ್ಟ ಉಂಟಾಗಿತ್ತು.

ಸಾಲ ತೀರಿಸುವ ಪ್ರಯತ್ನದಲ್ಲಿ ಮುರುಗೇಶ್ ಈ ವರ್ಷದ ಫೆಬ್ರ ವರಿಯಿಂದ ತಾನು ಕೆಲಸ ಮಾಡುತ್ತಿದ್ದ ಕಂಪನಿಯಿಂದ ಲ್ಯಾಪ್‌ಟಾಪ್‌ಗಳನ್ನು ಕದಿಯಲು ಪ್ರಾರಂಭಿಸಿದ್ದ. ಲ್ಯಾಪ್‌ಟಾಪ್ ಸೇವೆ ಮತ್ತು ರಿಪೇರಿ ಒದಗಿಸುವ ಸೋಗಿನಲ್ಲಿ ಆತ ಹಲವಾರು ಸಾಧನಗಳನ್ನು ಕದಿಯುವಲ್ಲಿ ಯಶಸ್ವಿಯಾಗಿದ್ದ. ಆಗಸ್ಟ್ ಕೊನೆಯಲ್ಲಿ ಆತ ಕಂಪನಿಯನ್ನು ಬಿಟ್ಟಿದ್ದ.

ಲೆಕ್ಕ ಪರಿಶೋಧನೆಯ ಸಮಯದಲ್ಲಿ ಕಾಣೆಯಾದ ಲ್ಯಾಪ್‌ಟಾಪ್‌ಗಳ ಬಗ್ಗೆ ಕಂಪನಿಗೆ ಗೊತ್ತಾಗಿತ್ತು. ಕಂಪನಿಯು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿದಾಗ ಮುರುಗೇಶ್ ಲ್ಯಾಪ್‌ಟಾಪ್‌ಗಳನ್ನು ಕದಿಯುತ್ತಿರುವುದು ಕಂಡುಬಂದಿದೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ತಮಿಳುನಾಡಿನ ಹೊಸೂರಿನಲ್ಲಿರುವ ಅವನ ಊರಿನಲ್ಲಿ ಪತ್ತೆ ಹಚ್ಚಿ, ಕದ್ದ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡರು.

ಮುರುಗೇಶ್ ಒಟ್ಟು 57 ಲ್ಯಾಪ್‌ಟಾಪ್ ಕದ್ದು 45 ಲ್ಯಾಪ್‌ಟಾಪ್‌ಗಳನ್ನು ಹೊಸೂರಿನ ರಿಪೇರಿ ಸ್ಟೋರ್‌ಗೆ ಮಾರಾಟ ಮಾಡಿದ್ದ. “ನಾವು 22 ಲಕ್ಷ ರೂಪಾಯಿ ಮೌಲ್ಯದ 50 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದೇವೆ” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ಸೆಪ್ಟೆಂಬರ್ 9ರಂದು ಮುರುಗೇಶ್‌ನನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಇದನ್ನೂ ಓದಿ: ಮಾನ್ವಿ: ಲಕ್ಷಾಂತರ ರೂ. ಮೌಲ್ಯದ ಸಿಗರೇಟು ಕಳವು