ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಬುಧವಾರ ಹೊಸ ಇತಿಹಾಸ ಬರೆದಿದೆ. ವಹಿವಾಟು ಆರಂಭವಾದ ಕೂಡಲೇ ಸೆನ್ಸೆಕ್ಸ್ 570ಕ್ಕೂ ಅಧಿಕ ಅಂಕ ಗಳ ಜಿಗಿತ ಕಂಡು, ಇದೇ ಮೊದಲ ಬಾರಿಗೆ 80 ಸಾವಿರ ಅಂಕಗಳ ಗಡಿ ದಾಟಿದೆ. ನಿಫ್ಟಿ ಕೂಡ 24,291.75 ಅಂಕಗಳ ಹೊಸ ಶಿಖರ ಏರಿದೆ.
ಇಂದು ಸೆನ್ಸೆಕ್ಸ್ ಮೊದಲ ಬಾರಿಗೆ ಜೀವಮಾನದ ಗರಿಷ್ಠ ಪಾಯಿಂಟ್ 80,039 ಪಾಯಿಂಟ್ಗೆ ತಲುಪಿದರೆ, ನಿಫ್ಟಿ 169 ಪಾಯಿಂಟ್ಗಳ ಏರಿಕೆ ಕಂಡು 24,292ಕ್ಕೆ ತಲುಪಿದೆ. ಎಚ್ಡಿಎಫ್ಸಿ ಬ್ಯಾಂಕ್ ಸೆನ್ಸೆಕ್ಸ್ನಲ್ಲಿ ಗರಿಷ್ಠ ಲಾಭ ಗಳಿಸಿದ್ದು, 1,791.90 ರೂ.ಗೆ ತಲುಪಿದೆ. ಸೆನ್ಸೆಕ್ಸ್ನಲ್ಲಿ ಕೋಟಕ್ ಬ್ಯಾಂಕ್, ಬಜಾಜ್ ಫೈನಾನ್ಸ್, ಬಜಾಜ್ ಫಿನ್ಸರ್ವ್ ಮತ್ತು ಎಂ & ಎಂ ಲಾಭ ಗಳಿಸಿದರೆ, ಟೆಕ್ ಮಹೀಂದ್ರಾ, ಟಿಸಿಎಸ್, ಸನ್ ಫಾರ್ಮಾ, ಇನ್ಫೋಸಿಸ್ ಮತ್ತು ಭಾರ್ತಿ ಏರ್ಟೆಲ್ ನಷ್ಟ ಅನುಭವಿಸಿವೆ.
ಯುಎಸ್ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್ ಅವರು ಹಣದುಬ್ಬರ ನಿಯಂತ್ರಿಸುವಲ್ಲಿ ಪ್ರಗತಿ ಸಾಧಿಸಿದ್ದೇವೆ ಎಂದು ಹೇಳಿಕ ನೀಡಿದ ನಂತರ ಏಷ್ಯಾ-ಪೆಸಿಫಿಕ್ ಮಾರುಕಟ್ಟೆಗಳು ಬುಧವಾರ ಬೆಳಿಗ್ಗೆ ಧನಾತ್ಮಕ ಪ್ರದರ್ಶನ ತೋರಿದವು.
ಮಂಗಳವಾರ ವಹಿವಾಟು ಆರಂಭವಾದ ಕೆಲ ಹೊತ್ತಿನಲ್ಲಿ ಸೆನ್ಸೆಕ್ಸ್ ದಾಖಲೆಯ 79,653.21 ಅಂಕ ತಲುಪಿತ್ತು. ನಿಫ್ಟಿ ಕೂಡ ಹೊಸ ದಾಖಲೆ ಬರೆದಿದ್ದು 24,186.5 ಪಾಯಿಂಟ್ ಗಡಿ ಮುಟ್ಟಿತ್ತು. ಮಂಗಳವಾರ ಎನ್ಎಸ್ಇ ನಿಫ್ಟಿ ಶೇ.0.21ರಷ್ಟು ಏರಿಕೆ ಕಂಡು 24,186.5 ಪಾಯಿಂಟ್ಗೆ ತಲುಪಿದ್ದರೆ, ಬಿಎಸ್ಇ ಸೆನ್ಸೆಕ್ಸ್ ಶೇ.0.22ರಷ್ಟು ಹೆಚ್ಚಳ ದಾಖಲಿಸಿ 79,653.21 ಪಾಯಿಂಟ್ ಗಳಿಸಿತ್ತು.
ಹಿಂದಿನ ಸೆಷನ್ನಲ್ಲಿ ಶೇ.2ರಷ್ಟು ಏರಿಕೆ ಕಂಡಿದ್ದ ಐಟಿ ಷೇರುಗಳು ಮತ್ತೆ ಶೇ. 0.7ರಷ್ಟು ಹೆಚ್ಚಳ ದಾಖಲಿಸಿದ್ದವು.