ನವದೆಹಲಿ: ಹಿರಿಯ ರಾಜಕಾರಣಿ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಮುಖ್ಯಸ್ಥ ಶರದ್ ಪವಾರ್(Sharad Pawar) ಅವರು ರಾಜಕೀಯದಿಂದ ನಿವೃತ್ತಿ ಪಡೆಯುವ ಸೂಚನೆ ನೀಡಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ ಬಾರಾಮತಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶರದ್ ಪವಾರ್, ರಾಜ್ಯಸಭೆ ಸದಸ್ಯರಾಗಿ ತಮ್ಮ ಅಧಿಕಾರಾವಧಿ ಒಂದೂವರೆ ವರ್ಷ ಉಳಿದಿದೆ. ಮತ್ತೆ ರಾಜ್ಯಸಭೆಗೆ ಹೋಗಬೇಕೇ ಅಥವಾ ಬೇಡವೇ ಎಂದು ನಾನು ಯೋಚಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ನವೆಂಬರ್ 20 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಾರಾಮತಿ ಕ್ಷೇತ್ರದಿಂದ ಕಣಕ್ಕಿಳಿದಿರುವ ತಮ್ಮ ಮೊಮ್ಮಗ ಯುಗೇಂದ್ರ ಪವಾರ್ ಪರ ಪ್ರಚಾರ ನಡೆಸಿ ಮಾತನಾಡಿದ 84 ವರ್ಷದ ಶರದ್ ಪವಾರ್ ಅವರು ಮೇಲ್ಮನೆಯಿಂದ ಸಂಭವನೀಯ ನಿರ್ಗಮನದ ಸುಳಿವು ನೀಡಿದರು. ಇನ್ನು ಈ ಕ್ಷೇತ್ರದಲ್ಲಿ ಯುಗೇಂದ್ರ ಪವಾರ್ ತಮ್ಮ ಚಿಕ್ಕಪ್ಪ ಅಜಿತ್ ಪವಾರ್ ವಿರುದ್ಧ ಕಣಕ್ಕಿಳಿದಿದ್ದಾರೆ.
ನಾನು ಅಧಿಕಾರದಲ್ಲಿಲ್ಲ, ರಾಜ್ಯಸಭಾ ಸದಸ್ಯ. ಆದರೆ ಈಗ ಕೇವಲ 1.5 ವರ್ಷಗಳ ನನ್ನ ಅಧಿಕಾರಾವಧಿ ಉಳಿದಿದೆ. 1.5 ವರ್ಷಗಳ ನಂತರ, ನಾನು ಮತ್ತೆ ರಾಜ್ಯಸಭೆಗೆ ಹೋಗಬೇಕೇ ಅಥವಾ ಬೇಡವೇ ಎಂದು ನಾನು ಯೋಚಿಸಬೇಕಾಗಿದೆ. ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾನು ಈಗ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನಾನು ಇದುವರೆಗೆ 14 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. ಈ ಯಾವುದೇ ಚುನಾವಣೆಗಳಲ್ಲಿ ನನ್ನನ್ನು ಮನೆಗೆ ಹೋಗಲು ಬಿಡಲಿಲ್ಲ, ಎಲ್ಲಾ ಚುನಾವಣೆಗಳಲ್ಲೂ ನನ್ನನ್ನು ಗೆಲ್ಲಿಸಿದ್ದೀರಿ. ನೀವು ನನ್ನನ್ನು ಪ್ರತಿ ಚುನಾವಣೆಯಲ್ಲಿ ಗೆಲ್ಲಿಸಿದ್ದೀರಿ. ಇವೆಲ್ಲದಕ್ಕೆ ಕೊನೆ ಅನ್ನೋದು ಬೇಕಲ್ಲವೇ? ಹೊಸ ಪೀಳಿಗೆಯನ್ನು ತರಬೇಕು. ಆದರೆ ಇದರರ್ಥ ನಾನು ಸಮಾಜ ಸೇವೆಯನ್ನು ಬಿಡಲ್ಲ. ನನಗೆ ಅಧಿಕಾರ ಬೇಡ, ಆದರೆ ಜನರ ಸೇವೆ ಮಾಡುವುದನ್ನು ಬಿಡಲ್ಲ ಎಂದಿದ್ದಾರೆ.
#MaharashtraAssemblyElection | In Baramati, NCP-SCP chief Sharad Pawar says, "I am not in power, I am a member of the Rajya Sabha. But now just 1.5 years of my tenure remains. After 1.5 years, I will have to deliberate whether I will go to Rajya Sabha again or not. I will not… pic.twitter.com/AAGRGz9dhL
— ANI (@ANI) November 5, 2024
ಭಾರತದ ರಾಜಕೀಯದಲ್ಲಿ ಧೀಮಂತ ವ್ಯಕ್ತಿಯಾಗಿ, ಶರದ್ ಪವಾರ್ ಅವರು ಮಹಾರಾಷ್ಟ್ರದಲ್ಲಿ ಮಾತ್ರವಲ್ಲದೆ ರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದವರು. ಸಂಸದೀಯ ರಾಜಕೀಯದಿಂದ ಶರದ್ ಪವಾರ್ ಅವರ ನಿರ್ಗಮನವು ಮಹಾರಾಷ್ಟ್ರದ ರಾಜಕೀಯ ರಂಗದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಬಹುದು.
ಇನ್ನು ಬಾರಾಮತಿಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಶರದ್ ಪವಾರ್ ಅವರು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬಾರಾಮತಿಗೆ ನೀಡಿದ ಕೊಡುಗೆ ಬಗ್ಗೆ ಮಾತನಾಡಿದರು. ಆದರೆ ಮುಂದಿನ ಮೂರು ದಶಕಗಳಲ್ಲಿ ಈ ಪ್ರದೇಶವು ಅದರ ಅಭಿವೃದ್ಧಿಗೆ ಹೊಸ ನಾಯಕನ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಈ ಸುದ್ದಿಯನ್ನೂ ಓದಿ: Supreme Court: ಎಲ್ಲಾ ಖಾಸಗಿ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳುವ ಅಧಿಕಾರ ಸರ್ಕಾರಿಗಳಿಗಿಲ್ಲ: ಸುಪ್ರೀಂ ಮಹತ್ವದ ತೀರ್ಪು