Thursday, 12th December 2024

Small Savings Schemes: ಹನಿಗೂಡಿದರೆ ಹಳ್ಳ ; ಇಲ್ಲಿವೆ ನೋಡಿ ಆಕರ್ಷಕ ಬಡ್ಡಿಯ ಉಳಿತಾಯ ಯೋಜನೆಗಳು

Small Savings Schemes

ಉಳಿತಾಯ ಯೋಜನೆಗಳು (Small Savings Schemes) ಹಣ ಉಳಿಸಲು ಸುರಕ್ಷಿತ ಮತ್ತು ವಿಶ್ವಾಸಾರ್ಹ ದಾರಿ. ಹೀಗಾಗಿ ಹೆಚ್ಚಿನ ಜನರು ಭವಿಷ್ಯದ ಆರ್ಥಿಕ ಸುರಕ್ಷತೆಗೆ ಇದರಲ್ಲಿ ಉಳಿತಾಯ (savings) ಮಾಡಲು ಒಲವು ತೋರಿಸುತ್ತಾರೆ. ಸರ್ಕಾರದ ಕೆಲವು ಯೋಜನೆಗಳಿಗೆ ಆಕರ್ಷಕ ಬಡ್ಡಿ ದರ (Interest Rates) ನೀಡುತ್ತದೆ. ವಿವಿಧ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವ ಮೂಲಕ ಠೇವಣಿಗಳ ಮೇಲೆ ಬಡ್ಡಿ ಪಡೆಯಬಹುದು. ಇದರಿಂದ ಉಳಿತಾಯ ಖಾತೆಯ ಹಣ ಹೆಚ್ಚಿಸಬಹುದು.

ಕಳೆದ ಸೆಪ್ಟೆಂಬರ್ 30ರಂದು ಹಣಕಾಸು ಸಚಿವಾಲಯವು ಸಾರ್ವಜನಿಕ ಭವಿಷ್ಯ ನಿಧಿ (PPF), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (NSC) ಮತ್ತು ಕಿಸಾನ್ ವಿಕಾಸ್ ಪತ್ರ (KVP) ಸೇರಿದಂತೆ ಕೆಲವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಪರಿಷ್ಕರಿಸಿದೆ. ಅದು ಎಷ್ಟು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಬ್ಯಾಂಕ್‌, ಅಂಚೆ ಕಚೇರಿಗ ಸಣ್ಣ ಯೋಜನೆಗಳು ಇಂತಿವೆ.

Small Savings Schemes

ರಾಷ್ಟ್ರೀಯ ಉಳಿತಾಯ ಯೋಜನೆ

ಒಂದು ಖಾತೆಯಲ್ಲಿ ಕನಿಷ್ಠ 1000 ರೂ. ನಿಂದ ಗರಿಷ್ಠ 9 ಲಕ್ಷ ರೂ. ವರೆಗೆ ಮತ್ತು ಜಂಟಿ ಖಾತೆಯಲ್ಲಿ 15 ಲಕ್ಷ ರೂ. ವರೆಗೆ ಉಳಿತಾಯ ಮಾಡಬಹುದಾದ ಈ ಯೋಜನೆಯ ಖಾತೆಯ ಅವಧಿ 5 ವರ್ಷ. ಠೇವಣಿದಾರರು ಈ ಯೋಜನೆಯಡಿಯಲ್ಲಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯಬಹುದು. ಖಾತೆಯನ್ನು ತೆರೆದ ಒಂದು ವರ್ಷದ ಅನಂತರ ಅಕಾಲಿಕವಾಗಿ ವಾಪಸ್ ಪಡೆಯಬಹುದು. ಆದರೆ ಮೂರು ವರ್ಷಗಳ ಅವಧಿ ಮುಗಿಯುವ ಮೊದಲು ಖಾತೆ ಮುಚ್ಚಿದರೆ ಶೇ. 2ರಷ್ಟು ಠೇವಣಿ ಮೊತ್ತ ಸಿಗವುದಿಲ್ಲ. ಮೂರು ವರ್ಷಗಳ ಅವಧಿ ಮುಗಿದ ಅನಂತರ ಖಾತೆಯನ್ನು ಮುಚ್ಚಿದರೆ ಠೇವಣಿಯ ಶೇ. 1ರಷ್ಟು ಕಡಿತಗೊಳ್ಳುತ್ತದೆ. ರಾಷ್ಟ್ರೀಯ ಉಳಿತಾಯ ಖಾತೆ ಬಡ್ಡಿ ದರ ಶೇ. 7.4ರಷ್ಟಿದೆ.

ರಾಷ್ಟ್ರೀಯ ಉಳಿತಾಯ ಸಮಯ ಠೇವಣಿ ಖಾತೆ

ಇದರಲ್ಲಿ ಖಾತೆಯ ನಾಲ್ಕು ವಿಧಗಳಿವೆ. 1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷಗಳು. ಕನಿಷ್ಠ ಠೇವಣಿ ಮಿತಿ 1000 ರೂ. ಆದರೆ ಗರಿಷ್ಠ ಠೇವಣಿ ಮಿತಿ ಇಲ್ಲ. ಆರು ತಿಂಗಳ ಅನಂತರ ಖಾತೆ ಮುಚ್ಚಲು ಅವಕಾಶವಿದೆ. ಆರು ತಿಂಗಳ ಅನಂತರ ಅಂದರೆ ಒಂದು ವರ್ಷದ ಮೊದಲು ಖಾತೆಯಲ್ಲಿನ ಠೇವಣಿಗಳನ್ನು ಹಿಂತೆಗೆದುಕೊಂಡರೆ ಪೂಸಾ (POSA) ದರದಲ್ಲಿ ಸರಳ ಬಡ್ಡಿ ಪಾವತಿಸಲಾಗುತ್ತದೆ.

5 ವರ್ಷ ಸಮಯದ ಠೇವಣಿಗಳು ಆದಾಯ ತೆರಿಗೆ ಕಾಯಿದೆಯ 80 ಸಿ ಕಡಿತಕ್ಕೆ ಅರ್ಹತೆ ಪಡೆಯುತ್ತವೆ. ಇದರ ಬಡ್ಡಿ ದರಗಳು ಶೇ. 6.90- 1 ವರ್ಷ, ಶೇ. 7- 2 ವರ್ಷ, ಶೇ. 7.10- 3 ವರ್ಷ ಮತ್ತು ಶೇ. 7.5- 5 ವರ್ಷ.

Small Savings Schemes

ಹಿರಿಯ ನಾಗರಿಕರ ಉಳಿತಾಯ ಯೋಜನೆ

ಗರಿಷ್ಠ 30 ಲಕ್ಷ ರೂ. ಠೇವಣಿಯೊಂದಿಗೆ ಕನಿಷ್ಠ 1000 ರೂ. ಉಳಿತಾಯ ಮಾಡಬಹುದಾದ ಈ ಯೋಜನೆಯನ್ನು 55 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ತೆರೆಯಬಹುದು. 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವೃತ್ತ ಜೀವನ ನಡೆಸುತ್ತಿರುವವರು ಈ ಖಾತೆಯನ್ನು ತೆರೆಯಬಹುದು.

ರಕ್ಷಣಾ ಸೇವೆಗಳ ನಿವೃತ್ತ ಸಿಬ್ಬಂದಿಯನ್ನು ಹೊರತು ಪಡಿಸಿ ಇತರರಿಗೆ ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟು ಐವತ್ತು ವರ್ಷಗಳ ಬಳಿಕ ಈ ಖಾತೆಯನ್ನು ತೆರೆಯಲು ಅವಕಾಶವಿದೆ.

ಠೇವಣಿದಾರ ಪ್ರತ್ಯೇಕವಾಗಿ ಅಥವಾ ಸಂಗಾತಿಯೊಂದಿಗೆ ಜಂಟಿಯಾಗಿ ಖಾತೆ ತೆರೆಯಬಹುದು. ಠೇವಣಿ ಮಾಡಿದ ದಿನಾಂಕದಿಂದ 31ನೇ ಮಾರ್ಚ್ ಅಥವಾ 30ನೇ ಜೂನ್, 30ನೇ ಸೆಪ್ಟೆಂಬರ್ ಅಥವಾ 31ನೇ ಡಿಸೆಂಬರ್ ವರೆಗೆ ಬಡ್ಡಿ ಪಾವತಿಸಲಾಗುತ್ತದೆ. ಖಾತೆಯನ್ನು ತೆರೆದ ದಿನಾಂಕದಿಂದ 5 ವರ್ಷಗಳ ಅವಧಿ ಮುಗಿದ ಅನಂತರ ಖಾತೆಯನ್ನು ಮುಚ್ಚಬಹುದು ಮಾತ್ರವಲ್ಲದೆ 3 ವರ್ಷಗಳವರೆಗೆ ವಿಸ್ತರಿಸಬಹುದು. ಕೆಲವು ಷರತ್ತುಗಳ ಅನ್ವಯ ಅಕಾಲಿಕವಾಗಿ ಖಾತೆ ಮುಚ್ಚಲು ಅವಕಾಶವಿದೆ.

ಎಸ್ ಸಿಎಸ್ ಎಸ್ ನಲ್ಲಿನ ಠೇವಣಿಗಳು ಆದಾಯ ತೆರಿಗೆ ಕಾಯಿದೆಯ 80 ಸಿ ಕಡಿತಕ್ಕೆ ಅರ್ಹತೆ ಪಡೆಯುತ್ತವೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿ ದರ ಶೇ. 8.20 ರಷ್ಟಾಗಿದೆ.

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ

ಕನಿಷ್ಠ ಠೇವಣಿ 1000 ರೂ. ಆಗಿದ್ದು, ಗರಿಷ್ಠ ಠೇವಣಿಗೆ ಮಿತಿ ಇಲ್ಲ. ಖಾತೆಯು 5 ವರ್ಷಗಳಲ್ಲಿ ಮೆಚ್ಯೂರ್ ಆಗುತ್ತದೆ. ಈ ಖಾತೆಯನ್ನು ವಯಸ್ಕರು ತಮಗಾಗಿ ಅಥವಾ ಅಪ್ರಾಪ್ತ ವಯಸ್ಸಿನವರ ಪರವಾಗಿ ತೆರೆಯಬಹುದು. 10 ವರ್ಷ ಮೇಲ್ಪಟ್ಟ ಅಪ್ರಾಪ್ತರು ಕೂಡ ಇಲ್ಲಿ ಜಂಟಿ ಖಾತೆ ತೆರೆಯುವ ಅವಕಾಶ ಕೂಡ ಇದೆ. ಇದರ ಬಡ್ಡಿ ದರ ಶೇ. 7.7 ರಷ್ಟಾಗಿದೆ.

ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ

ಕನಿಷ್ಠ ಠೇವಣಿ 500 ರೂ. ಮತ್ತು ಗರಿಷ್ಠ ಠೇವಣಿ 1,50,000 ರೂ. ಅನ್ನು ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯಲ್ಲಿ ಉಳಿತಾಯ ಮಾಡಬಹುದು. ಈ ಯೋಜನೆಯಡಿ ಸಾಲ ಸೌಲಭ್ಯ ಲಭ್ಯವಿದೆ. ಖಾತೆ ತೆರೆದ ವರ್ಷದ ಅಂತ್ಯದಿಂದ ಹದಿನೈದು ಸಂಪೂರ್ಣ ಪೂರ್ಣಗೊಳಿಸಿದ ಮೇಲೆ ಖಾತೆ ಮೆಚ್ಯೂರ್‌ ಆಗುತ್ತದೆ. ಬಳಿಕ 5 ವರ್ಷಗಳ ಅವಧಿಗೆ ಖಾತೆ ವಿಸ್ತರಿಸಬಹುದು. 80 ಸಿ ಅಡಿಯಲ್ಲಿ ಠೇವಣಿ ಕಡಿತಕ್ಕೆ ಅರ್ಹತೆ ಪಡೆಯುತ್ತದೆ. ಖಾತೆಯಲ್ಲಿ ಗಳಿಸಿದ ಬಡ್ಡಿಯು ಸೆಕ್ಷನ್ 10 ರ ಅಡಿಯಲ್ಲಿ ಆದಾಯ ತೆರಿಗೆಯಿಂದ ಮುಕ್ತವಾಗಿದೆ. ಇದರ ಬಡ್ಡಿ ದರ ಶೇ. 7.1ರಷ್ಟಾಗಿದೆ.

Small Savings Schemes

ಸುಕನ್ಯಾ ಸಮೃದ್ಧಿ ಖಾತೆ

ಈ ಯೋಜನೆಯಡಿ ಕನಿಷ್ಠ ಠೇವಣಿ 250 ರೂ. ಮತ್ತು ಗರಿಷ್ಠ ಠೇವಣಿ 1.5 ಲಕ್ಷ ರೂ. ಗಳಾಗಿದೆ. ಹೆಣ್ಣು ಮಗುವಿನ ಹೆಸರಿನಲ್ಲಿ ಮಗುವಿಗೆ 10 ವರ್ಷ ತುಂಬುವವರೆಗೆ ಅವರ ಹೆಸರಿನಲ್ಲಿ ಖಾತೆ ತೆರೆಯಬಹುದು. ಇದು ಶಿಕ್ಷಣ ವೆಚ್ಚಗಳನ್ನು ಪೂರೈಸಲು ಖಾತೆಯಿಂದ ಹಣ ಪಡೆಯಲು ಅನುಮತಿ ಇದೆ. ಹೆಣ್ಣು ಮಗುವಿಗೆ 18 ವರ್ಷ ತುಂಬಿದ ಅನಂತರ ಆಕೆಯ ಮದುವೆಯ ಸಂದರ್ಭದಲ್ಲಿ ಖಾತೆಯನ್ನು ಅಕಾಲಿಕವಾಗಿ ಮುಚ್ಚಬಹುದು.

ಖಾತೆಯನ್ನು ತೆರೆದ ದಿನಾಂಕದಿಂದ ಮಗುವಿಗೆ 21 ವರ್ಷ ತುಂಬಿದಾಗ ಖಾತೆಯು ಮುಕ್ತಾಯಗೊಳ್ಳುತ್ತದೆ. ಇದು 80 ಸಿ ಅಡಿಯಲ್ಲಿ ಠೇವಣಿ ಕಡಿತಕ್ಕೆ ಅರ್ಹತೆ ಪಡೆಯುತ್ತದೆ. ಸೆಕ್ಷನ್ 10 ರ ಅಡಿಯಲ್ಲಿ ಇದು ಆದಾಯ ತೆರಿಗೆಯಿಂದ ಮುಕ್ತವಾಗಿದೆ. ಇದರ ಬಡ್ಡಿ ದರ ಶೇ. 8.20 ರಷ್ಟಾಗಿದೆ.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯು ಭಾರತ ಸರ್ಕಾರದ ಒಂದು ಬಾರಿಯ ಹೊಸ ಸಣ್ಣ ಉಳಿತಾಯ ಯೋಜನೆಯಾಗಿದ್ದು, 2023ರ ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಇದು ಭಾಗಶಃ ಹಿಂಪಡೆಯುವ ಆಯ್ಕೆಯೊಂದಿಗೆ ಶೇ. 7.5 ಸ್ಥಿರ ಬಡ್ಡಿದರದಲ್ಲಿ 2 ವರ್ಷಗಳ ಅವಧಿಗೆ ಮಹಿಳೆಯರು ಅಥವಾ ಹುಡುಗಿಯರ ಹೆಸರಿನಲ್ಲಿ 2 ಲಕ್ಷ ರೂ. ವರೆಗೆ ಠೇವಣಿ ಮಾಡುವ ಅವಕಾಶವನ್ನು ನೀಡುತ್ತದೆ.

Small Savings Schemes

ಕಿಸಾನ್ ವಿಕಾಸ್ ಪತ್ರ

ಈ ಯೋಜನೆಯಡಿ ಕನಿಷ್ಠ 1000 ರೂ. ನಿಂದ ಠೇವಣಿ ಮಾಡಬಹುದು. ಗರಿಷ್ಠ ಠೇವಣಿಗೆ ಮಿತಿ ಇಲ್ಲ. ವಯಸ್ಕರು ತಮಗಾಗಿ ಅಥವಾ ಅಪ್ರಾಪ್ತರ ಪರವಾಗಿ ತೆರೆಯಬಹುದು.

10 ವರ್ಷಗಳ ಬಳಿಕ ಅಪ್ರಾಪ್ತರೂ ಈ ಖಾತೆಯನ್ನು ತೆರೆಯಬಹುದು. ಜಂಟಿ ಖಾತೆ ತೆರೆಯಲು ಇದರಲ್ಲಿ ಅವಕಾಶವಿದೆ. ಕಿಸಾನ್ ವಿಕಾಸ್ ಪತ್ರವನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಮತ್ತು ಒಂದು ಅಂಚೆ ಕಚೇರಿಯಿಂದ ಇನ್ನೊಂದು ಕಚೇರಿಗೆ ವರ್ಗಾಯಿಸಬಹುದು. ಕಿಸಾನ್ ವಿಕಾಸ್ ಪತ್ರವನ್ನು ಹೂಡಿಕೆಯ ದಿನಾಂಕದಿಂದ 2 ಮತ್ತು ಅರ್ಧ ವರ್ಷಗಳ ಅನಂತರ ಈ ಕೆಳಗಿನ ದರಗಳಲ್ಲಿ ಬಡ್ಡಿ ಪಡೆಯಬಹುದು. ಮೆಚ್ಯೂರಿಟಿ ಆದ ಮೇಲೆ ಹಣ ದುಪ್ಪಟ್ಟಾಗುವ ಭರವಸೆಯನ್ನು ಇದು ನೀಡುತ್ತದೆ. ಇದರ ಬಡ್ಡಿ ದರ ಶೇ. 7.5ರಷ್ಟಿದೆ.

ಆರ್‌ಡಿ ಯೋಜನೆ

ಈ ಯೋಜನೆಯಲ್ಲಿ, ಗರಿಷ್ಠ ಮಿತಿಯನ್ನು ನಿಗದಿಪಡಿಸದೆ ತಿಂಗಳಿಗೆ ಕನಿಷ್ಠ 100 ರೂ. ಗಳನ್ನು ಠೇವಣಿ ಮಾಡಬಹುದು. 6 ತಿಂಗಳು ಅಥವಾ 12 ತಿಂಗಳವರೆಗೆ ಮುಂಗಡ ಠೇವಣಿಗಳನ್ನು ಠೇವಣಿದಾರರ ಆಯ್ಕೆ ಮಾಡಬಹುದು. ಯೋಜನೆಯ ಖಾತೆಯು 5 ವರ್ಷಗಳಲ್ಲಿ ಪಕ್ವವಾಗುತ್ತದೆ. ಖಾತೆಯನ್ನು ತೆರೆದ ಒಂದು ವರ್ಷದ ಅನಂತರ ಅಸ್ತಿತ್ವದಲ್ಲಿರುವ ಬಾಕಿ ಮೊತ್ತದ ಶೇ. 50ರಷ್ಟು ಹಿಂಪಡೆಯಲು ಅವಕಾಶವಿದೆ. ಪೋಸ್ಟ್ ಆಫೀಸ್ ಉಳಿತಾಯ ಖಾತೆ ದರದಲ್ಲಿ ಸರಳ ಬಡ್ಡಿಯೊಂದಿಗೆ 3 ವರ್ಷಗಳ ಅನಂತರ ಖಾತೆಯನ್ನು ಅಕಾಲಿಕವಾಗಿ ಮುಚ್ಚಬಹುದು. ಪ್ರಸ್ತುತ 5 ವರ್ಷಗಳ ಆರ್‌ಡಿಯಲ್ಲಿ ಬಡ್ಡಿ ದರವು ಶೇ. 6.7 ರಷ್ಟಾಗಿದೆ.

Small Savings Schemes

ಪೋಸ್ಟ್ ಆಫೀಸ್ ಉಳಿತಾಯ ಖಾತೆ

ಈ ಯೋಜನೆಯಲ್ಲಿ, ಕನಿಷ್ಠ 500 ರೂ. ಠೇವಣಿ ಅಗತ್ಯವಿದೆ. ಗರಿಷ್ಠ ಠೇವಣಿಗೆ ಮಿತಿ ಇರುವುದಿಲ್ಲ. ಒಬ್ಬ ವ್ಯಕ್ತಿಯು ತನ್ನ ಹೆಸರಿನಲ್ಲಿ ಪ್ರತ್ಯೇಕವಾಗಿ ಅಥವಾ ವಯಸ್ಕರೊಂದಿಗೆ ಜಂಟಿಯಾಗಿ ಖಾತೆಯನ್ನು ತೆರೆಯಬಹುದು. ಅಪ್ರಾಪ್ತರ ಪರವಾಗಿಯೂ ಖಾತೆಯನ್ನು ತೆರೆಯಬಹುದು.

10 ವರ್ಷ ವಯಸ್ಸಿನ ಅಪ್ರಾಪ್ತ ವಯಸ್ಕನು ಸ್ವತಂತ್ರವಾಗಿ ಈ ಖಾತೆಯನ್ನು ತೆರೆಯಬಹುದು. ಈ ಯೋಜನೆಯು ಶೇ. 4 ಬಡ್ಡಿದರವನ್ನು ನೀಡುತ್ತದೆ.

ಪ್ರಸ್ತುತ ತ್ರೈಮಾಸಿಕ ಅವಧಿಗೆ ಇದರಲ್ಲಿ ಉಳಿತಾಯ ಠೇವಣಿಗೆ ಶೇ. 4 ಬಡ್ಡಿ ದರವಿದೆ. 1 ವರ್ಷದ ಠೇವಣಿಗೆ ಶೇ. 6.9, 2 ವರ್ಷದ ಠೇವಣಿಗೆ ಶೇ. 7, 3 ವರ್ಷದ ಠೇವಣಿಗೆ ಶೇ. 7.1, 5 ವರ್ಷದ ಠೇವಣಿಗೆ ಶೇ. 7.5 ರಷ್ಟು ಬಡ್ಡಿ ದರವಿದೆ.

TRAI New Rule: ಒಟಿಪಿ ಸ್ವೀಕೃತಿಗೆ ಅಕ್ಟೊಬರ್‌ 1ರಿಂದ ಕಠಿಣ ನಿಯಮ ಜಾರಿ; ಟ್ರಾಯ್ ಉದ್ದೇಶವೇನು?

5 ವರ್ಷದ ಮರುಕಳಿಸುವ ಠೇವಣಿಗೆ ಶೇ. 6.7, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳಿಗೆ ಶೇ. 7.7, ಕಿಸಾನ್ ವಿಕಾಸ್ ಪತ್ರ ಶೇ. 7.5, ಸಾರ್ವಜನಿಕ ಭವಿಷ್ಯ ನಿಧಿ ಶೇ. 7.1, ಸುಕನ್ಯಾ ಸಮೃದ್ಧಿ ಖಾತೆ ಶೇ. 8.2, ಹಿರಿಯ ನಾಗರಿಕರ ಉಳಿತಾಯ ಯೋಜನೆ ಶೇ. 8.2, ಮಾಸಿಕ ಆದಾಯ ಖಾತೆ ಶೇ. 7.4ರಷ್ಟಿದೆ.