Friday, 27th December 2024

Sonu Sood: ಬಾಲಿವುಡ್‌ ನಟ ಸೋನು ಸೂದ್‌ಗೆ ಸಿಎಂ ಸ್ಥಾನ ಆಫರ್? ಭಾರೀ ವೈರಲ್‌ ಆಗ್ತಿದೆ ಈ ವಿಡಿಯೊ

ನವದೆಹಲಿ: ನಟನೆಯ ಜೊತೆಗೆ ತಮ್ಮ ಸಮಾಜ ಸೇವೆ ಮತ್ತು ಸಮಾಜ ಪರ ಕಾಳಜಿಯಿಂದ ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ಖ್ಯಾತ ನಟ ಸೋನು ಸೂದ್(Sonu Sood) ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ(Interview) ನೀಡಿರುವ ಹೇಳಿಕೆಯೊಂದು ಭಾರೀ ಸದ್ದು ಮಾಡುತ್ತಿದೆ. ಸಂದರ್ಶನದಲ್ಲಿ ಹತ್ತು ಹಲವು ವಿಷಯಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿರುವ ನಟ ತಮಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ರಾಜ್ಯಸಭಾ ಸ್ಥಾನದಂತಹ ಹುದ್ದೆಗಳ ಆಫರ್‌ ಬಂದಿತ್ತು. ಆದರೆ ನಾನು ಎಲ್ಲವನ್ನೂ ನಯವಾಗಿ ತಿರಸ್ಕರಿಸಿದೆ ಎಂದು ಹೇಳಿಕೊಂಡಿದ್ದಾರೆ.

“ನನಗೆ ಮುಖ್ಯಮಂತ್ರಿ ಆಫರ್‌ ಬಂದಾಗ ಬೇಡ ಎಂದೆ. ಉಪಮುಖ್ಯಮಂತ್ರಿ ಸ್ಥಾನವನ್ನಾದರೂ ಒಪ್ಪಿಕೊಳ್ಳಿ ಎಂದರು ಅದನ್ನೂ ನಿರಾಕರಿಸಿದೆ. ಕಡೇ ಪಕ್ಷ ರಾಜ್ಯಸಭೆಯ ಸ್ಥಾನವನ್ನು ಅಲಂಕರಿಸಿ ಎಂದು ಹೇಳಲು ಮುಂದಾದರು. ನಾನು ಎಲ್ಲವನ್ನು ನಯವಾಗಿ ತಿರಸ್ಕರಿಸುತ್ತಾ ಬಂದೆ. ಈ ದೇಶದ ಪ್ರಮುಖ ವ್ಯಕ್ತಿಗಳು ನನ್ನನ್ನು ರಾಜಕೀಯಕ್ಕೆ ತರಲು ಸಾಕಷ್ಟು ಪ್ರಯತ್ನ ಮಾಡಿದರು. ಹತ್ತಾರು ಬಾರಿ ನನ್ನನ್ನು ಭೇಟಿಯೂ ಆದರು. ಆದರೆ ನಾನು ಯಾವುದಕ್ಕೂ ಒಪ್ಪಲಿಲ್ಲ. ರಾಜಕೀಯದಲ್ಲಿ ಯಾವುದಕ್ಕೂ ಹೋರಾಡುವ ಅಗತ್ಯವಿಲ್ಲ” ಎಂದು ಸೋನು ಸೂದ್ ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಸಂದರ್ಶಕರು “ಅಂತಹ ಪ್ರಭಾವಿ ವ್ಯಕ್ತಿಗಳು ನಿಮ್ಮನ್ನು ಭೇಟಿಯಾಗಿ ಅವರಾಗಿಯೇ ಅಧಿಕಾರ ನೀಡಲು ಬಯಸಿದರೂ ನೀವು ಒಪ್ಪಿಕೊಳ್ಳದೆ ಇರುವುದು ಆಶ್ಚರ್ಯ ಅನ್ನಿಸಿದೆʼʼ ಎಂದಾಗ “ಸ್ವಾತಂತ್ರ್ಯವನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ ಹಾಗಾಗಿ ರಾಜಕೀಯದಿಂದ ಹೊರಗುಳಿದಿದ್ದೇನೆ. ಜನರು ಎರಡು ಕಾರಣಗಳಿಗಾಗಿ ರಾಜಕೀಯಕ್ಕೆ ಬರುತ್ತಾರೆ. ಹಣ ಸಂಪಾದಿಸಲು ಅಥವಾ ಅಧಿಕಾರವನ್ನು ಗಳಿಸಲು. ನನಗೆ ಇವೆರಡರಲ್ಲೂ ಆಸಕ್ತಿ ಇಲ್ಲ.ಜನರಿಗೆ ನನ್ನದೇ ದಾರಿಯಲ್ಲಿ ಈಗಾಗಲೇ ಸಹಾಯ ಮಾಡುತ್ತಿದ್ದೇನೆ. ರಾಜಕೀಯಕ್ಕೆ ಬಂದು ಸಹಾಯ ಮಾಡಬೇಕು ಅಂತೇನಿಲ್ಲ. ರಾಜಕೀಯದಲ್ಲಿ ಸ್ವಾತಂತ್ರ್ಯ ಇರುವುದಿಲ್ಲ” ಎಂದು ಸೋನು ಸೂದ್‌ ಸಂದರ್ಶನದಲ್ಲಿ ತಿಳಿಸಿದ್ದಾರೆ.

“ತುಂಬಾ ಸ್ನೇಹಿತರು ಮತ್ತು ಪರಿಚಿತರು ನಾನು ರಾಜಕೀಯಕ್ಕೆ ಬಂದರೆ ದೆಹಲಿಯಲ್ಲಿ ದುಬಾರಿ ಮನೆ, ದೊಡ್ಡ ಸ್ಥಾನ, ಭದ್ರತೆ, ಸರ್ಕಾರಿ ಮುದ್ರೆ ಇರುವ ಲೆಟರ್‌ಹೆಡ್‌ನಂತಹ ಐಷಾರಾಮಿ ವಸ್ತುಗಳು ಸಿಗುತ್ತವೆ ಎಂದು ಹೇಳಿದರು ಆದರೆ ನನಗೆ ಅದ್ಯಾವುದರ ಅಗತ್ಯವಿಲ್ಲ. ನನ್ನೊಳಗೆ ಇನ್ನೂ ಒಬ್ಬ ನಟ-ನಿರ್ದೇಶಕ ಉಳಿದಿದ್ದಾನೆ. ಹಾಗಾಗಿ ನಾನು ರಾಜಕೀಯ ರಂಗಕ್ಕೆ ಬರುವುದಿಲ್ಲ. ಆದರೆ ನಾನು ಉತ್ತಮ ಕೆಲಸ ಮಾಡುವ ರಾಜಕಾರಣಿಗಳನ್ನು ಗೌರವಿಸುತ್ತೇನೆ” ಎಂದು ನಟ ಹೇಳಿದ್ದಾರೆ.

ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಅವರು 2022 ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಅವರು ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಮೊಗಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಅಮನದೀಪ್ ಕೌರ್ ಅರೋರಾ ವಿರುದ್ಧ ಹೀನಾಯವಾಗಿ ಸೋತರು.

ಈ ಸುದ್ದಿಯನ್ನೂ ಓದಿ:Haryana Horror: ಹಾಡಹಗಲೇ ಎಲ್ಲರದುರೇ ಬಾಲಕನನ್ನು ಇರಿದು ಕೊಂದ ದುರುಳರು; ರಕ್ಷಣೆಗೆ ಎಷ್ಟೇ ಕೂಗಿದರೂ ನೆರವಿಗೆ ಬಾರದ ಜನ!ʼ