Saturday, 14th December 2024

ರಾಜಸ್ಥಾನ ಸಿಎಂ ಹುದ್ದೆಯ ರೇಸ್​ನಲ್ಲಿ ಮುನ್ನೆಲೆಗೆ ಆಧ್ಯಾತ್ಮಿಕ ನಾಯಕ..!

ಜೈಪುರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅಧಿಕಾರ ಕಸಿದುಕೊಂಡಿದ್ದ ಕಾಂಗ್ರೆಸ್​, ಈ ಬಾರಿ ಮರಳಿ ಕೇಸರಿ ಪಕ್ಷಕ್ಕೆ ಅಧಿಕಾರ ಹಸ್ತಾಂತರಿ ಸಲು ಸಜ್ಜಾಗಿದೆ.

ರಾಜಸ್ಥಾನ ಸಿಎಂ ಗದ್ದುಗೆಗೆ ಅಲ್ವಾರ ಕ್ಷೇತ್ರದ ಸಂಸದ, ಆಧ್ಯಾತ್ಮಿಕ ನಾಯಕ ಆಗಿರುವ ಮಹಂತ್​ ಬಾಲಕನಾಥ್​ ಅವರ ಹೆಸರು ಸಿಎಂ ಹುದ್ದೆಯ ರೇಸ್​ನಲ್ಲಿ ಚಾಲ್ತಿಯಲ್ಲಿದೆ. ಇವರ ಜೊತೆಗೆ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸಿಎಂ ಹುದ್ದೆಯ ಆಕಾಂಕ್ಷಿ ಗಳಾಗಿದ್ಧಾರೆ. ಎರಡು ಬಾರಿ ಸಿಎಂ ಆಗಿ ಕಾರ್ಯ ನಿರ್ವಹಿಸಿರುವ ವಸುಂಧರಾ ರಾಜೆ ಮೂರನೇ ಬಾರಿಗೆ ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ಮತ್ತೊಂದೆಡೆ, ಶೇಖಾವತ್ ಅವರು 2014ರಿಂದ ಸಂಸದರಾಗಿದ್ದು, 2017ರಲ್ಲಿ ಕೇಂದ್ರ ಸಚಿವರಾಗಿ ಆಯ್ಕೆಯಾಗಿದ್ದಾರೆ.

ರಾಜ್ಯದಲ್ಲಿ ಅಧಿಕಾರಕ್ಕೇರಲು ಬೇಕಿರುವ ಮ್ಯಾಜಿಕ್​ ಸಂಖ್ಯೆ 100. ಈಗಾಗಲೇ 114 ಸ್ಥಾನಗಳಲ್ಲಿ ಮುನ್ನಡೆಯಲ್ಲಿರುವ ಬಿಜೆಪಿ ಅಧಿಕಾರಕ್ಕೇರಲು ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ, ಆಡಳಿತಾರೂಢ ಕಾಂಗ್ರೆಸ್ 70 ಸ್ಥಾನಗಳಿಗೆ ಕುಸಿದಿದೆ. ಬಿಎಸ್​ಪಿ 2 ಸ್ಥಾನಗಳಲ್ಲಿ ಮುನ್ನಡೆ ಹೊಂದಿದ್ದು, ಉಳಿದಂತೆ 13 ಕ್ಷೇತ್ರಗಳಲ್ಲಿ ಇತರರು ಮುನ್ನಡೆಯಲ್ಲಿದ್ದಾರೆ.

ಸಿಎಂ ಹುದ್ದೆಗೆ ಅಲ್ವಾರ ಕ್ಷೇತ್ರದ ಸಂಸದ ಮಹಂತ್​ ಬಾಲಕನಾಥ್​ ಹೆಸರು ಮುನ್ನೆಲೆಗೆ ಬಂದಿದೆ. ಇದಕ್ಕೆ ಪುಷ್ಠಿ ನೀಡುವಂತೆ ಚುನಾವಣಾ ಫಲಿತಾಂಶಕ್ಕೂ ಒಂದು ದಿನ ಮುಂಚಿತವಾಗಿ, ಶನಿವಾರ ಬಾಲಕನಾಥ್ ಅವರು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿದ್ದರು.

ಮುಖ್ಯಮಂತ್ರಿ ವಿಚಾರವಾಗಿ ಬಿಜೆಪಿಗೆ ನಮ್ಮ ಪ್ರಧಾನಿ ಅವರೇ ಮುಖ್ಯ. ಅವರ ನಾಯಕತ್ವದಲ್ಲಿ ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಸಿಎಂ ಯಾರಾಗಬೇಕೆಂಬುದರ ಬಗ್ಗೆಯೂ ಪಕ್ಷವು ನಿರ್ಧಾರ ತೆಗೆದುಕೊಳ್ಳುತ್ತದೆ. ನಾನು ಸದ್ಯ ಸಂಸದನಾಗಿ ಸಂತೋಷವಾಗಿದ್ದೇನೆ. ಸಮಾಜ ಸೇವೆ ಮಾಡುವ ಇಚ್ಛೆ ಹೊಂದಿದ್ದು, ಅದರಲ್ಲಿ ನನಗೆ ತೃಪ್ತಿ ಇದೆ” ಎಂದು ತಿಳಿಸಿದ್ದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಂತೆ ಬಾಲಕನಾಥ್ ಕೂಡ ನಾಥ ಸಮುದಾಯದಿಂದ ಬಂದವರು. ಕೇವಲ 39 ವಯಸ್ಸಿನ ಬಾಲಕ ನಾಥ್ ಅವರು ಅಲ್ವಾರ ಕ್ಷೇತ್ರದಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಕಾಂಗ್ರೆಸ್​ ಅಭ್ಯರ್ಥಿ ವಿರುದ್ಧ ಸುಮಾರು 3 ಲಕ್ಷ ಮತಗಳಿಂದ ಗೆದ್ದಿದ್ದಾರೆ. 6ನೇ ವಯಸ್ಸಿನಲ್ಲಿ ಸನ್ಯಾಸ ತೆಗೆದುಕೊಂಡಿದ್ದಾರೆ.