Thursday, 12th December 2024

ನಾಗರಿಕ ವಿಮಾನಯಾನ ಸಚಿವಾಲಯದ ಸಿಬ್ಬಂದಿ ಕರೋನಾಗೆ ಬಲಿ

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯದ ಇಬ್ಬರು ಸಲಹೆಗಾರರು ಹಾಗೂ ವಾಯುಯಾನ ನಿಯಂತ್ರಕ ಡಿಜಿಸಿಎಯ ಇಬ್ಬರು ಅಧಿಕಾರಿಗಳು ಮಹಾಮಾರಿ ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಸಚಿವಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಸಲಹೆಗಾರರು 2020ರ ಕೋವಿಡ್-19 ಮೊದಲನೇ ಅಲೆಯ ಸಂದರ್ಭದಲ್ಲಿ ಮೃತಪಟ್ಟಿದ್ದರು. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ)ನ ನಿರ್ದೇಶಕ ಮತ್ತು ಸಹಾಯಕ ನಿರ್ದೇಶಕರಿಬ್ಬರು 2021ರ ಕೋವಿಡ್-19 ಎರಡನೇ ಅಲೆಯ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸೋಂಕಿನ 2ನೇ ಅಲೆಯು ಭಾರತಕ್ಕೆ ತೀವ್ರ ಹಾನಿಯನ್ನುಂಟು ಮಾಡಿದೆ. ಜನವರಿ ಮತ್ತು ಮೇ ತಿಂಗಳಿನಲ್ಲಿ ನಾಗರಿಕ ವಿಮಾನ ಯಾನ ಸಚಿವಾಲಯದ ಒಟ್ಟು 44 ಉದ್ಯೋಗಿಗಳು ಕೋವಿಡ್ ಸೋಂಕಿತರಾಗಿದ್ದರು. 2021ಕ್ಕೆ ಹೋಲಿಸಿದರೆ 2020ರಲ್ಲಿ ಸಚಿವಾಲಯದ ಕೇವಲ 26 ನೌಕರರು ಮಾತ್ರ ಕೋವಿಡ್-19 ಪಾಸಿಟಿವ್ ಆಗಿದ್ದರು.

ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ, ಭಾನುವಾರ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 3,08,37,222ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳು 4,54,118ಕ್ಕೆ ಕುಸಿದಿದೆ.