ಮುಂಬೈ: ಟಾಟಾ (Tata) ಸಮೂಹದ ಯಾವುದಾದರೂ ಕಂಪನಿ ಷೇರು ಮಾರುಕಟ್ಟೆಗೆ ಪ್ರವೇಶಿಸುತ್ತಿದೆ ಎಂದರೆ ಸ್ಟಾಕ್ ಮಾರ್ಕೆಟ್ (Stock Market)ನಲ್ಲೊಂದು ಸಂಚಲನ ಸೃಷ್ಟಿಯಾಗುತ್ತದೆ. ರಿಟೇಲ್ ಹೂಡಿಕೆದಾರರು ತುದಿಗಾಲಿನಲ್ಲಿ ನಿಂತು ಕಾಯುತ್ತಾರೆ. ಏಕೆಂದರೆ ಟಾಟಾ ಗ್ರೂಪ್‌ನ ಮೇಲಿನ ವಿಶ್ವಾಸ ಅಂಥದ್ದು. ಇದುವರೆಗೆ ಟಾಟಾ ಸಮೂಹದ 29 ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿವೆ. ಇದೀಗ ಮತ್ತೊಂದು ಟಾಟಾ ಕಂಪನಿ ಐಪಿಒಗೆ ಸಿದ್ಧತೆ ನಡೆಸುತ್ತಿದೆ. ಅದರ ಹೆಸರು ಟಾಟಾ ಪ್ರಾಜೆಕ್ಟ್ಸ್ (Tata products).
ಏನಿದು ಟಾಟಾ ಪ್ರಾಜೆಕ್ಸ್ಟ್ ಕಂಪನಿ? ಇದು ಟೆಕ್ನಾಲಜಿ ಅಧಾರಿತ ಎಂಜಿನಿಯರಿಂಗ್ ಮತ್ತು ಕನ್‌ಸ್ಟ್ರಕ್ಷನ್ ಕಂಪನಿಯಾಗಿದೆ. ಇದು ಬೃಹತ್ ಮತ್ತು ಸಂಕೀರ್ಣ ನಿರ್ಮಾಣ ಯೋಜನೆಗಳನ್ನು ಕೈಗೊಳ್ಳುತ್ತದೆ. ನಗರ ಪ್ರದೇಶಗಳು ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯವಿರುವ ಸಂಕೀರ್ಣ ಯೋಜನೆಗಳನ್ನು ನಿರ್ಮಿಸುತ್ತದೆ.
ಮುಂದಿನ ಒಂದೂವರೆ ವರ್ಷ ಅಥವಾ 18 ತಿಂಗಳಿನಲ್ಲಿ ಟಾಟಾ ಪ್ರಾಜೆಕ್ಟ್ಸ್ ಐಪಿಒ ನಡೆಯುವ ನಿರೀಕ್ಷೆ ಇದೆ. ಟಾಟಾ ಪ್ರಾಜೆಕ್ಟ್ಸ್ ಈಗಾಗಲೇ ಅತ್ಯಂತ ಮಹತ್ವದ ನಿರ್ಮಾಣ ಯೋಜನೆಗಳನ್ನು ಪೂರ್ಣಗೊಳಿಸಿದೆ. ಅದರಲ್ಲಿ ದಿಲ್ಲಿಯಲ್ಲಿರುವ ಸಂಸತ್ತಿನ ಹೊಸ ಕಟ್ಟಡ, ಮುಂಬಯಿನ ಅಟಲ್ ಸೇತು ಕೂಡ ಸೇರಿದೆ.
ಸೆಮಿಕಂಡಕ್ಟರ್ ಘಟಕಗಳು, ಡೇಟಾ ಸೆಂಟರ್, ರಸ್ತೆ, ಸೇತುವೆ, ರೈಲ್ವೆ, ಮೆಟ್ರೊ ಸಿಸ್ಟಮ್, ವಿಮಾನ ನಿಲ್ದಾಣ, ವಿದ್ಯುತ್ ವಿತರಣೆ ವ್ಯವಸ್ಥೆ, ಗಣಿಗಾರಿಕೆ, ಕ್ಲೀನ್ ಎನರ್ಜಿ, ರಿಫೈನರಿಗಳು, ಪೆಟ್ರೊಕೆಮಿಕಲ್ಸ್ ಘಟಕಗಳನ್ನು ನಿರ್ಮಿಸುತ್ತಿದೆ.
ಐಪಿಒಗೆ ಹೋಗುವುದಕ್ಕೆ ಮೊದಲು ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಟಾಟಾ ಪ್ರಾಜೆಕ್ಟ್ಸ್ ಮುಂದಾಗಿದೆ ಎಂದು ಕಂಪನಿಯ ಚೀಫ್ ಎಕ್ಸಿಕ್ಯುಟಿವ್ ವಿನಾಯಕ್ ಪೈ ತಿಳಿಸಿದ್ದಾರೆ. ಟಾಟಾ ಪ್ರಾಜೆಕ್ಸ್ಟ್ ಕಂಪನಿಯಲ್ಲಿ ಟಾಟಾ ಸಮೂಹದ ಪ್ರವರ್ತಕ ಕಂಪನಿಯಾಗಿರುವ ಟಾಟಾ ಸನ್ಸ್ 57.31% ಷೇರು ಪಾಲನ್ನು ಹೊಂದಿದೆ. ಟಾಟಾ ಪವರ್ 30.81%, ಟಾಟಾ ಕೆಮಿಕಲ್ಸ್ 6.16%, ವೋಲ್ಟಾಸ್ 4.30% ಮತ್ತು ಟಾಟಾ ಇಂಡಸ್ಟ್ರೀಸ್ 1.42% ಷೇರು ಪಾಲನ್ನು ಹೊಂದಿದೆ. ಹೀಗಾಗಿ ಟಾಟಾ ಸನ್ಸ್ ಸ್ವಾಭಾವಿಕವಾಗಿ ಟಾಟಾ ಪ್ರಾಜೆಕ್ಸ್ಟ್‌ನ ಹೋಲ್ಡಿಂಗ್ ಅನ್ನು ಹೊಂದಿದೆ. 2024ರ ಜೂನ್ ವೇಳೆಗೆ ಟಾಟಾ ಪ್ರಾಜೆಕ್ಟ್ಸ್ 44,000 ಕೋಟಿ ರೂ.ಗಳ ಆರ್ಡರ್‌ಗಳನ್ನು ಹೊಂದಿತ್ತು. 90% ನಷ್ಟು ಆರ್ಡರ್‌ಗಳು ಭಾರತದಲ್ಲೇ ಸಿಕ್ಕಿದೆ.
ಸಂಕೀರ್ಣ ನಿರ್ಮಾಣ ಯೋಜನೆಗಳನ್ನು ನಡೆಸಬಲ್ಲ ಕೌಶಲ ಮತ್ತು ಸಾಮರ್ಥ್ಯವನ್ನು ಟಾಟಾ ಪ್ರಾಜೆಕ್ಟ್ಸ್ ಹೊಂದಿದೆ. ಕಳೆದ 2023-24ರ ಸಾಲಿನಲ್ಲಿ ಕಂಪನಿಯು 17,761 ಕೋಟಿ ರೂ. ಆದಾಯವನ್ನು ಗಳಿಸಿದೆ. 82 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಸದ್ಯಕ್ಕೆ ಖಾಸಗಿ ವಲಯದಿಂದ ಹೆಚ್ಚಿನ ಆರ್ಡರ್‌ಗಳನ್ನು ಕಂಪನಿ ಪಡೆದಿದೆ.
ಕಂಪನಿಯ ಆಡಳಿತ ಮಂಡಳಿ ಬಗ್ಗೆ ಹೇಳುವುದಿದ್ದರೆ, ವಿನಾಯಕ್ ಪೈ ಅವರು ಎಂಡಿ ಮತ್ತು ಸಿಇಒ ಆಗಿದ್ದಾರೆ. ದೀಪಕ್ ನಟರಾಜನ್ ಸಿಎಫ್‌ಒ ಆಗಿದ್ದಾರೆ. ರಾಜೀವ್ ಮೆನನ್ ಸಿಒಒ ಆಗಿದ್ದಾರೆ.
ಟಾಟಾ ಸನ್ಸ್ ಚೇರ್ಮನ್ ಎನ್. ಚಂದ್ರಶೇಖರನ್ ಅವರು ಇತ್ತೀಚೆಗೆ ಟಾಟಾ ಸಮೂಹದ ಕಂಪನಿಗಳ ಸಿಇಒಗಳನ್ನು ಕರೆದು ಕೆಲವು ಸೂಚನೆಗಳನ್ನು ಕೊಟ್ಟಿದ್ದಾರೆ. ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆಯ ಹೊರತಾಗಿಯೂ ವಹಿವಾಟಿನಲ್ಲಿ ಗಣನೀಯ ಹೆಚ್ಚಳಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದ್ದಾರೆ. ಇದಕ್ಕಾಗಿ ಗುರಿಗಳನ್ನೂ ಚಂದ್ರಶೇಖರನ್ ನಿಗದಿಪಡಿಸಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೆ ಕಾರಣವೂ ಇದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್ ಮತ್ತು ಟಾಟಾ ಪವರ್ 2024-25ರ ಮೊದಲಾರ್ಧದಲ್ಲಿ ಆದಾಯದಲ್ಲಿ ಸಿಂಗಲ್ ಡಿಜಿಟ್ ಬೆಳವಣಿಗೆ ದಾಖಲಿಸಿದ್ದು, ಲಾಭದಲ್ಲಿ ಇಳಿಕೆಯಾಗಿದೆ. ಟಾಟಾ ಗ್ರೂಪ್‌ನ ಮಾರ್ಕೆಟ್ ಕ್ಯಾಪಿಟಲೈಸೇಶನ್‌ನಲ್ಲಿ ಕೇವಲ 5% ಏರಿಕೆಯಾಗಿದೆ. ಈ ಅವಧಿಯಲ್ಲಿ ಟಾಟಾ ಮೋಟಾರ್ಸ್, ಟೈಟನ್ ಮತ್ತು ಟಾಟಾ ಕಮ್ಯುನಿಕೇಶನ್ಸ್ ಷೇರಿನ ದರದಲ್ಲಿ 7ರಿಂದ 20 ಪರ್ಸೆಂಟ್ ತನಕ ಇಳಿಕೆಯಾಗಿದೆ. ಹೀಗಿದ್ದರೂ ಟಾಟಾ ಸಮೂಹದ ಒಟ್ಟಾರೆ ಲಾಭದಲ್ಲಿ 37% ಏರಿಕೆಯಾಗಿದ್ದು, 43,171 ಕೋಟಿ ರೂ.ಗೆ ಏರಿಕೆಯಾಗಿದೆ. ಹೀಗಾಗಿ ಸಿಇಒಗಳಿಗೆ ಚಂದ್ರಶೇಖರನ್ ಅಗತ್ಯ ಸಲಹೆ-ಸೂಚನೆಗಳನ್ನು ಕೊಟ್ಟಿದ್ದಾರೆ.
ಟಾಟಾ ಗ್ರೂಪ್ ಎಮರ್ಜಿಂಗ್ ಬಿಸಿನೆಸ್‌ಗಳಾದ ಟಾಟಾ ಎಲೆಕ್ಟ್ರಾನಿಕ್ಸ್, ಏರ್ ಇಂಡಿಯಾ, ಟಾಟಾ ಡಿಜಿಟಲ್‌ನಲ್ಲಿ ಭಾರಿ ಹೂಡಿಕೆ ಮಾಡುತ್ತಿದೆ.
ಈ ಸುದ್ದಿಯನ್ನೂ ಓದಿ: Sensex Rises: ಸೆನ್ಸೆಕ್ಸ್ 597 ಅಂಕ ಏರಿಕೆ, ಓಲಾ ಷೇರು 16% ಜಿಗಿತ