Friday, 20th December 2024

Stock Market Crash: ಸೆನ್ಸೆಕ್ಸ್‌ 1,176 ಅಂಕ ಪತನ, ಹೂಡಿಕೆದಾರರಿಗೆ 8.85 ಲಕ್ಷ ಕೋಟಿ ರೂ. ನಷ್ಟ: ಕಾರಣವೇನು?

Stock Market Crash

ಮುಂಬಯಿ: ಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರ 1,176 ಅಂಕ ಕಳೆದುಕೊಂಡು 78,041ಕ್ಕೆ ಕುಸಿಯಿತು. ನಿಫ್ಟಿ 364 ಅಂಕ ನಷ್ಟದಲ್ಲಿ 23,587ಕ್ಕೆ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತು. ಹೂಡಿಕೆದಾರರಿಗೆ 8.85 ಲಕ್ಷ ಕೋಟಿ ರೂ.ಗಳ ಭಾರಿ ನಷ್ಟ ಸಂಭವಿಸಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ಮೂರು ದಿನಗಳಲ್ಲಿ 8,000 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ (Stock Market Crash).

ಸೆನ್ಸೆಕ್ಸ್-ನಿಫ್ಟಿ ಭಾರಿ ಕುಸಿತಕ್ಕೆ ಕಾರಣಗಳೇನು?

ಕಳೆದ ಐದು ದಿನಗಳಲ್ಲಿ ಸೆನ್ಸೆಕ್ಸ್‌ 4,000 ಅಂಕಗಳನ್ನು ಕಲೆದುಕೊಂಡಿದೆ. ನಿಫ್ಟಿ 5% ಇಳಿದಿದೆ. ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿ ದರ ಕಡಿತಗೊಳಿಸಿದ ಬಳಿಕ ನೀಡಿದ ಸಂದೇಶದಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿರಂತರವಾಗಿ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸೂಚ್ಯಂಕಗಳು ಕುಸಿತಕ್ಕೀಡಾಗಿದೆ. ಹಾಗಾದರೆ ಯುಎಸ್‌ ಫೆಡರಲ್‌ ರಿಸರ್ವ್‌ ನೀಡಿದ ಸಂದೇಶವಾದರೂ ಏನು?

ಮುಂದಿನ ವರ್ಷ ಕೇವಲ ಎರಡು ಸಲ ಮಾತ್ರ ಬಡ್ಡಿ ದರ ಕಡಿತಗೊಳಿಸುವುದಾಗಿ ಫೆಡರಲ್‌ ರಿಸರ್ವ್‌ ಅಧ್ಯಕ್ಷರು ಸಿಗ್ನಲ್‌ ನೀಡಿರುವ ಪರಿಣಾಮ ಜಾಗತಿಕ ಮಟ್ಟದಲ್ಲಿ ಷೇರು ಸೂಚ್ಯಂಕಗಳು ಕುಸಿಯಿತು.
ಅಮೆರಿಕದ ಫೆಡರಲ್‌ ರಿಸರ್ವ್‌ ಅಧ್ಯಕ್ಷ ಜೆರೋಮ್‌ ಪೊವೆಲ್‌ ಅವರು 2025ರಲ್ಲಿ ಹಣದುಬ್ಬರ ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಬಡ್ಡಿ ದರವನ್ನು ನಿರೀಕ್ಷಿತ ಮಟ್ಟದಲ್ಲಿ ಇಳಿಕೆ ಮಾಡಲು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದು ಜಾಗತಿಕ ಷೇರು ಮಾರುಕಟ್ಟೆಯನ್ನು ನಿರುತ್ಸಾಹಗೊಳಿಸಿತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರು ಮಾರಾಟ

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ನಾಲ್ಕು ದಿನಗಳಿಂದೀಚೆಗೆ 12,230 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅಮೆರಿಕದಲ್ಲಿ ಡಾಲರ್‌ ಪ್ರಾಬಲ್ಯ ಹೆಚ್ಚುತ್ತಿರುವುದು ಇದಕ್ಕೆ ಕಾರಣ.

ಕಾರ್ಪೋರೇಟ್‌ ಕಂಪನಿಗಳ ಆದಾಯ ಇಳಿಕೆ

ಕಳೆದ ತ್ರೈಮಾಸಿಕದಲ್ಲಿ ಕಾರ್ಪೊರೇಟ್‌ ಕಂಪನಿಗಳ ಆದಾಯದಲ್ಲಿ ಇಳಿಕೆ ಆಗಿತ್ತು. ಲಾಭಾಂಶ ತಗ್ಗಿತ್ತು. ಹೀಗಾಗಿ ಷೇರುಗಳ ಬೆಲೆ ತುಟ್ಟಿಯಾಗಿರುವುದರಿಂದಲೂ ಸೂಚ್ಯಂಕ ಕುಸಿಯಿತು.

ಈ ಸುದ್ದಿಯನ್ನೂ ಓದಿ: Stock Market: ಸ್ಟಾಕ್‌, ಚಿನ್ನದಲ್ಲಿ ಹೂಡಿಕೆ; ಯಾವುದರಲ್ಲಿ ಹೆಚ್ಚು ಲಾಭ?