Tuesday, 7th January 2025

Stock Market: ಬೆಂಗಳೂರಿನಲ್ಲಿ ಚೀನಾ ವೈರಸ್‌- ಸೆನ್ಸೆಕ್ಸ್‌ 1,200 ಅಂಕ ಕುಸಿತ; ಪಿಎಸ್‌ಯು ಬ್ಯಾಂಕ್‌, ರಿಯಾಲ್ಟಿ, ತೈಲ ಷೇರು ಭಾರಿ ಪತನ

Stock Market Crash

ಮುಂಬೈ: ಬೆಂಗಳೂರಿನಲ್ಲಿ ಚೀನಾ ವೈರಸ್‌ ಎಚ್‌ಎಂಪಿವಿ ಪ್ರಕರಣ ಪತ್ತೆಯಾಗಿರುವ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್‌ ಸಾವಿರಾರು ಅಂಕಗಳ ಭಾರಿ ಕುಸಿತಕ್ಕೀಡಾಗಿದೆ. ಸೋಮವಾರ ಬೆಳಗ್ಗೆ ಸೆನ್ಸೆಕ್ಸ್‌ 1,200 ಅಂಕಗಳ ಪತನಕ್ಕೀಡಾದರೆ, ನಿಫ್ಟಿ 352 ಅಂಕ ನಷ್ಟಕ್ಕೀಡಾಯಿತು. ಮಧ್ಯಾಹ್ನ 2 ಗಂಟೆಯ ವೇಳೆಗೆ ಸೆನ್ಸೆಕ್ಸ್ 78,006 ಮತ್ತು ನಿಫ್ಟಿ 23,642 ಅಂಕಗಳ ಮಟ್ಟದಲ್ಲಿತ್ತು(Stock Market)

ಪಿಎಸ್‌ಯು ಬ್ಯಾಂಕ್‌, ರಿಯಲ್‌ ಎಸ್ಟೇಟ್‌, ತೈಲ ಮತ್ತು ಗ್ಯಾಸ್‌ ವಲಯದಲ್ಲಿ ಷೇರುಗಳ ಮಾರಾಟದ ಭರಾಟೆ ಕಂಡು ಬಂದಿತು. ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ದರ ಗಣನೀಯ ಕುಸಿತ ದಾಖಲಿಸಿತು. ಷೇರು ಹೂಡಿಕೆದಾರರು ಅತ್ಯಂತ ಎಚ್ಚರಿಕೆಯಿಂದ ಈ ಚೀನಾ ವೈರಸ್‌ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಷೇರು ಮಾರುಕಟ್ಟೆಯ ಫಿಯರ್‌ ಗೇಜ್‌ ಇಂಡೆಕ್ಸ್‌ ಇಂಡಿಯಾ ವಿಕ್ಸ್‌ 13% ಏರಿಕೆ ದಾಖಲಿಸಿತು. ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್‌ ಕ್ಯಾಪ್‌ ಷೇರುಗಳ ವ್ಯಾಪಕ ಮಾರಾಟಕ್ಕೆ ಷೇರು ಪೇಟೆ ಸಾಕ್ಷಿಯಾಯಿತು.

ಲೋಹ, ಪಿಎಸ್‌ಯು ಬ್ಯಾಂಕ್‌, ರಿಯಲ್‌ ಎಸ್ಟೇಟ್‌, ತೈಲ ಮತ್ತು ಹಣಕಾಸು ವಲಯದ ಷೇರುಗಳ ದರದಲ್ಲಿ ಭಾರಿ ಇಳಿಕೆ ದಾಖಲಾಯಿತು. ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಷೇರು 7% ಕುಸಿಯಿತು. ಬ್ಯಾಂಕ್‌ ಆಫ್‌ ಬರೋಡಾ, ಎಚ್‌ಪಿಸಿಎಲ್‌, ಬಿಪಿಸಿಎಲ್‌, ಟಾಟಾ ಸ್ಟೀಲ್‌, ಅದಾನಿ ಎನರ್ಜಿ ಸಲ್ಯೂಷನ್ಸ್‌ ಮತ್ತು ಪಿಎನ್‌ ಬಿ ಷೇರುಗಳ ದರಗಳು 4-5% ಇಳಿಯಿತು. ಲಾರ್ಜ್‌ ಕ್ಯಾಪ್‌ ಪೈಕಿ ಎಚ್‌ಡಿಎಫ್‌ಸಿ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಷೇರು ದರ ಭಾರಿ ಕುಸಿತಕ್ಕೀಡಾಯಿತು.

ಸ್ಟಾಕ್‌ ಮಾರ್ಕೆಟ್‌ ಕುಸಿತಕ್ಕೆ ಕಾರಣಗಳನ್ನು ಮತ್ತಷ್ಟು ವಿವರವಾಗಿ ನೋಡೋಣ. ಹೂಡಿಕೆದಾರರು ಕಾರ್ಪೊರೇಟ್‌ ಕಂಪನಿಗಳ 2023-24ರ ಸಾಲಿನ ಮೂರನೇ ತ್ರೈಮಾಸಿಕ ಫಲಿತಾಂಶದ ನಿರೀಕ್ಷೆಯಲ್ಲಿದ್ದರು. ಅದೇ ರೀತಿ ಟ್ರಂಪ್‌ ಆಡಳಿತ ಮತ್ತಿತರ ಜಿಯೊ ಪಾಲಿಟಿಕ್ಸ್‌ ಕುರಿತ ಸುದ್ದಿಗಳ ನಿರೀಕ್ಷೆಯಲ್ಲಿದ್ದರು. ಆದರೆ ಅಚ್ಚರಿಯ ವಿದ್ಯಮಾನದಲ್ಲಿ ಭಾರತದಲ್ಲಿ ಮೊಟ್ಟ ಮೊದಲ ಎಚ್‌ಎಂಪಿವಿ ಪ್ರಕರಣವು ಬೆಂಗಳೂರಿನಲ್ಲಿ ಪತ್ತೆಯಾಗಿರುವುದು ಹೂಡಿಕೆದಾರರನ್ನು ಚಕಿತಗೊಳಿಸಿದೆ. ವಿದೇಶ ಪ್ರವಾಸವನ್ನು ಮಾಡದಿರುವ ಇಬ್ಬರು ಮಕ್ಕಳಲ್ಲಿ ಎಚ್‌ಎಂಪಿವಿ ವೈರಸ್‌ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಲರ್ಟ್‌ ಆಗಿದ್ದು, ಆರೋಗ್ಯ ಇಲಾಖೆಯೊಂದಿಗೆ ತುರ್ತು ಸಭೆ ನಡೆಸಿದೆ. ಮೊದಲಿಗೆ ಎಂಟು ತಿಂಗಳಿನ ಮಗುವಿನಲ್ಲಿ ಜನವರಿ ಮೂರಕ್ಕೆ ವೈರಸ್‌ ಪತ್ತೆಯಾಗಿದ್ದು, ಮಗು ಈಗ ಚೇತರಿಸುತ್ತಿದೆ. ಚೀನಾದಲ್ಲಿ ಹರಡುತ್ತಿರುವ ಎಚ್‌ಎಂಪಿವಿ ವೈರಸ್‌ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇದೀಗ ಪತ್ತೆಯಾದಂತಾಗಿದೆ.

ಷೇರು ಮಾರುಕಟ್ಟೆಯಲ್ಲಿ ಈಗಾಗಲೇ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ಈ ಟ್ರೆಂಡ್‌ ಮುಂದುವರಿಯುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ಎಚ್‌ಎಂಪಿವಿ ವೈರಸ್‌ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಹೆಲ್ತ್‌ ಕೇರ್‌ ವಲಯದ ಕೆಲವು ಷೇರುಗಳು ಏರಿಕೆಯಾಗಿವೆ. ನಾರಾಯಣ ಹೃದಯಾಲಯ ಷೇರು ದರ 3.4%, ರೈನ್‌ಬೋ ಚಿಲ್ಡ್ರೆನ್ಸ್‌ ಮೆಡಿಸಿನ್‌ 4% ಏರಿಕೆ ದಾಖಲಿಸಿತು. ಅಪೊಲೊ ಹಾಸ್ಪಿಟಲ್‌, ಆಸ್ಟರ್‌ ಡಿಎಂ ಹೆಲ್ತ್‌ಕೇರ್‌, ಕೃಷ್ಣ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಷೇರು ದರ ಏರಿಕೆ ದಾಖಲಿಸಿತು.

ಈ ಸುದ್ದಿಯನ್ನೂ ಓದಿ: Stock Market: 2025ರಲ್ಲಿ ಈ 9 ಷೇರುಗಳಲ್ಲಿ15%ಕ್ಕಿಂತ ಹೆಚ್ಚು ಲಾಭ?

Leave a Reply

Your email address will not be published. Required fields are marked *