ಮುಂಬೈ: ಭಾರತೀಯ ಷೇರುಪೇಟೆಯಲ್ಲಿ ಚೇತರಿಕೆ ಕಂಡು ಬಂದಿದೆ. ಶುಕ್ರವಾರ (ಸೆಪ್ಟೆಂಬರ್ 20) ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳು ಭಾರೀ ಏರಿಕೆ ಕಂಡಿವೆ. ಒಂದು ಹಂತದಲ್ಲಿ ಬಿಎಸ್ಇ ಸೆನ್ಸೆಕ್ಸ್ (BSE Sensex) 557 ಪಾಯಿಂಟ್ಸ್ ಏರಿಕೆ ಕಂಡು ಗರಿಷ್ಠ ಮಟ್ಟ83,742ಕ್ಕೆ ತಲುಪಿದ್ದರೆ, ಎನ್ಎಸ್ಇ ನಿಫ್ಟಿ (Nifty) ಸೂಚ್ಯಂಕವು 170 ಪಾಯಿಂಟ್‌ಗಳಷ್ಟು ವೃದ್ಧಿಸಿ ಜೀವಮಾನದ ಗರಿಷ್ಠ 25,585ಕ್ಕೆ ತಲುಪಿತ್ತು.
ಸೆನ್ಸೆಕ್ಸ್‌ನಲ್ಲಿ ಉಕ್ಕಿನ ಷೇರುಗಳಾದ JSW ಸ್ಟೀಲ್, ಟಾಟಾ ಸ್ಟೀಲ್, ಮಹೀಂದ್ರಾ ಮತ್ತು ಮಹೀಂದ್ರಾ, ಅದಾನಿ ಪೋರ್ಟ್ಸ್ & SEZ, ಮತ್ತು ಬಜಾಜ್ ಫಿನ್‌ಸರ್ವ್‌ನಿಂದ ಮುನ್ನಡೆ ಸಾಧಿಸಿದರೆ, ಆಕ್ಸಿಸ್ ಬ್ಯಾಂಕ್, ಟಾಟಾ ಮೋಟಾರ್ಸ್, ಟೈಟಾನ್, ಏಷ್ಯನ್ ಪೇಂಟ್ಸ್ ಮತ್ತು NTPC ನಷ್ಟವನ್ನು ಅನುಭವಿಸಿದೆ. JSW ಸ್ಟೀಲ್ ಮತ್ತು ಟಾಟಾ ಸ್ಟೀಲ್, ಹಿಂಡಾಲ್ಕೊ ಇಂಡಸ್ಟ್ರೀಸ್, ಮಹೀಂದ್ರಾ & ಮಹೀಂದ್ರಾ ಮತ್ತು ಕೋಲ್ ಇಂಡಿಯಾದ ನಂತರದ ಲಾಭಗಳೊಂದಿಗೆ ನಿಫ್ಟಿ 50 ನಲ್ಲಿ ಲಾಭ ಪಡೆದಿವೆ.
ಏಷ್ಯಾ ಮಾರುಕಟ್ಟೆ ಹೇಗಿದೆ?
ಭಾರತೀಯ ಇಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ಶುಕ್ರವಾರ ಹೆಚ್ಚಿನ ವಹಿವಾಟು ನಡೆಸುತ್ತಿದ್ದು, ಯುಎಸ್ ಸ್ಟಾಕ್ ಮಾರುಕಟ್ಟೆಗಳಲ್ಲಿ ರಾತ್ರಿಯ ಲಾಭದ ಕಾರಣದಿಂದ ಇತರ ಏಷ್ಯನ್ ಮಾರುಕಟ್ಟೆಗಳಲ್ಲೂ ಚೇತರಿಕೆ ಕಂಡು ಬಂದಿದೆ.
ನಿನ್ನೆ ಏನಾಗಿತ್ತು?
ಗುರುವಾರ 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 735.95 ಪಾಯಿಂಟ್ಸ್ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 83,684.18 ಮಟ್ಟಕ್ಕೆ ತಲುಪಿದೆ. ಎನ್ಎಸ್ಇ ನಿಫ್ಟಿ ಕೂಡ 209.55 ಪಾಯಿಂಟ್ಸ್ ಏರಿಕೆಗೊಂಡು 25,587.10 ಗಡಿಯನ್ನು ದಾಟಿದೆ. ಮಾರುಕಟ್ಟೆಯಲ್ಲಿನ ಈ ಸಂಚಲನದಿಂದಾಗಿ ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು 471 ಲಕ್ಷ ಕೋಟಿ ರೂ.ಗೆ ತಲುಪಿದೆ.
ಮಾರುಕಟ್ಟೆಯಲ್ಲಿ ಚೇತರಿಕೆ
4 ವರ್ಷಗಳಲ್ಲಿ ಮೊದಲ ಬಾರಿಗೆ ದರ ಕಡಿತಗೊಳಿಸುವ ಅಮೆರಿಕನ್ ಸೆಂಟ್ರಲ್ ಬ್ಯಾಂಕ್ ನಿರ್ಧಾರದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದೆ. ಸೆಪ್ಟೆಂಬರ್ 18ರಂದು ಮುಕ್ತಾಯಗೊಂಡ 2 ದಿನಗಳ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (FOMC) ಸಭೆಯಲ್ಲಿ ನಿರೀಕ್ಷಿಸಿದಂತೆ ಅರ್ಧ ಪಾಯಿಂಟ್‌ನಷ್ಟು ಅಂದರೆ 50 ಬೇಸಿಸ್ ಪಾಯಿಂಟ್‌ನಷ್ಟು ಬಡ್ಡಿ ದರ ಕಡಿತಕ್ಕೆ ನಿರ್ಧರಿಸಲಾಗಿದೆ. ಯುಎಸ್ ಫೆಡ್ ಹಣಕಾಸು ಸಮಿತಿ ಸದಸ್ಯರು ಬಡ್ಡಿ ದರಗಳನ್ನು ಶೇ. 4.75 ಮತ್ತು ಶೇ. 5ಕ್ಕೆ ಇಳಿಸುವ ಪರವಾಗಿ ಮತ ಚಲಾಯಿಸಿದ್ದಾರೆ. ಈ ನಿರ್ಧಾರದ ಪರವಾಗಿ 11 ಜನರು ಮತ್ತು ವಿರುದ್ಧವಾಗಿ 1 ಮತ ಚಲಾವಣೆಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Stock Market: ಷೇರು ಮಾರುಕಟ್ಟೆಯಲ್ಲಿ ಸಂಚಲನ; ಗರಿಷ್ಠ ಮಟ್ಟ ತಲುಪಿದ ಸೆನ್ಸೆಕ್ಸ್, ನಿಫ್ಟಿ