Sunday, 15th December 2024

Stock Market: ಷೇರು ಮಾರುಕಟ್ಟೆಯಲ್ಲಿ ಸಂಚಲನ; ಗರಿಷ್ಠ ಮಟ್ಟ ತಲುಪಿದ ಸೆನ್ಸೆಕ್ಸ್, ನಿಫ್ಟಿ

Stock Market

ಮುಂಬೈ: ಅಮೆರಿಕ ಕೇಂದ್ರ ಬ್ಯಾಂಕ್ ಯುಎಸ್ ಫೆಡರಲ್ ರಿಸರ್ವ್ (U.S. Federal Reserve) 4 ವರ್ಷಗಳ ನಂತರ ಬಡ್ಡಿ ದರ ಕಡಿತಗೊಳಿಸಿದೆ. ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೊಮ್ ಪೋವೆಲ್‌ 50 ಬಿಪಿಎಸ್‌ ಬಡ್ಡಿ ದರ ಕಡಿತಗೊಳಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಭಾರತೀಯ ಷೇರುಪೇಟೆಯಲ್ಲಿ ಭಾರಿ ಚೇತರಿಕೆ ಕಂಡು ಬಂದಿದೆ. ಗುರುವಾರದ ಆರಂಭಿಕ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ (BSE Sensex) ಮತ್ತು ಎನ್ಎಸ್ಇ ನಿಫ್ಟಿ (Nifty) ಹೊಸ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿದೆ (Stock Market).

30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 735.95 ಪಾಯಿಂಟ್ಸ್ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 83,684.18 ಮಟ್ಟಕ್ಕೆ ತಲುಪಿದೆ. ಎನ್ಎಸ್ಇ ನಿಫ್ಟಿ ಕೂಡ 209.55 ಪಾಯಿಂಟ್ಸ್ ಏರಿಕೆಗೊಂಡು 25,587.10 ಗಡಿಯನ್ನು ದಾಟಿದೆ. ಮಾರುಕಟ್ಟೆಯಲ್ಲಿನ ಈ ಸಂಚಲನದಿಂದಾಗಿ ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು 471 ಲಕ್ಷ ಕೋಟಿ ರೂ.ಗೆ ತಲುಪಿದೆ.

ಸೆನ್ಸೆಕ್ಸ್‌ನ 30 ಷೇರುಗಳ ಪೈಕಿ ಎನ್‌ಟಿಪಿಸಿ, ಆಕ್ಸಿಸ್ ಬ್ಯಾಂಕ್, ಟಾಟಾ ಮೋಟಾರ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌, ಭಾರ್ತಿ ಏರ್‌ಟೆಲ್, ಟೆಕ್ ಮಹೀಂದ್ರಾ, ಇನ್ಫೋಸಿಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಅತಿ ಹೆಚ್ಚು ಲಾಭ ಗಳಿಸಿದವು. ನಿಫ್ಟಿಯಲ್ಲಿ ಎಲ್‌ಟಿಐಎಂ, ವಿಪ್ರೋ ಮತ್ತು ಟೆಕ್ ಮಹೀಂದ್ರಾ ಲಾಭ ಗಳಿಸಿದರೆ, ಎಲ್ & ಟಿ, ಒಎನ್‌ಜಿಸಿ ಮತ್ತು ಬಿಪಿಸಿಎಲ್ ನಷ್ಟ ಅನುಭವಿಸಿದವು. ಇನ್ನು ಡಾಲರ್ ಎದುರು ರೂಪಾಯಿ ಮೌಲ್ಯ 83.70ಕ್ಕೆ ಕುಸಿದಿದೆ. ಬ್ರೆಂಟ್ ಕಚ್ಚಾ ತೈಲವು ಶೇ. 0.07ರಷ್ಟು ಇಳಿದು ಬ್ಯಾರೆಲ್‌ಗೆ 73.60 ಡಾಲರ್‌ಗೆ ತಲುಪಿದೆ.

ಏಷ್ಯಾ ಮಾರುಕಟ್ಟೆ ಹೇಗಿದೆ?

ಏಷ್ಯಾದ ಟೋಕಿಯೊ, ಶಾಂಘೈ ಮತ್ತು ಹಾಂಗ್‌ಕಾಂಗ್ ಮಾರುಕಟ್ಟೆಯಲ್ಲಿ ಏರಿಕೆ ಕಂಡರೆ, ಸಿಯೋಲ್‌ನಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ.

ಬುಧವಾರ ಏನಾಗಿತ್ತು?

ಬುಧವಾರ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ ಕುಸಿತದೊಂದಿಗೆ ವ್ಯವಹಾರ ಕೊನೆಗೊಳಿಸಿದ್ದವು. ಸೂಚ್ಯಂಕಗಳು ಗರಿಷ್ಠ ಮಟ್ಟ ತಲುಪಿ ಬಳಿಕ ಕುಸಿದಿದ್ದವು. 30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ ಶೇಕಡಾ 0.16 ಅಥವಾ 131.43 ಪಾಯಿಂಟ್ಸ್ ಕುಸಿದು 82,948.23ಕ್ಕೆ ತಲುಪಿದ್ದರೆ ನಿಫ್ಟಿ ಸೂಚ್ಯಂಕವು 41.00 ಅಂಕಗಳ ನಷ್ಟದೊಂದಿಗೆ 25,377.55ರಲ್ಲಿ ವಹಿವಾಟನ್ನು ಕೊನೆಗೊಳಿಸಿತ್ತು.

ಮಾರುಕಟ್ಟೆಯಲ್ಲಿ ಉತ್ಸಾಹ

4 ವರ್ಷಗಳಲ್ಲಿ ಮೊದಲ ಬಾರಿಗೆ ದರ ಕಡಿತಗೊಳಿಸುವ ಅಮೆರಿಕನ್ ಸೆಂಟ್ರಲ್ ಬ್ಯಾಂಕ್ ನಿರ್ಧಾರದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಉತ್ಸಾಹ ಕಂಡು ಬಂದಿದೆ. ಸೆಪ್ಟೆಂಬರ್ 18ರಂದು ಮುಕ್ತಾಯಗೊಂಡ 2 ದಿನಗಳ ಫೆಡರಲ್ ಓಪನ್ ಮಾರ್ಕೆಟ್‌ ಕಮಿಟಿ (FOMC) ಸಭೆಯಲ್ಲಿ ನಿರೀಕ್ಷಿಸಿದಂತೆ ಅರ್ಧ ಪಾಯಿಂಟ್‌ನಷ್ಟು ಅಂದರೆ 50 ಬೇಸಿಸ್ ಪಾಯಿಂಟ್‌ನಷ್ಟು ಬಡ್ಡಿ ದರ ಕಡಿತಕ್ಕೆ ನಿರ್ಧರಿಸಲಾಗಿದೆ. ಯುಎಸ್‌ ಫೆಡ್ ಹಣಕಾಸು ಸಮಿತಿ ಸದಸ್ಯರು ಬಡ್ಡಿ ದರಗಳನ್ನು ಶೇ. 4.75 ಮತ್ತು ಶೇ. 5ಕ್ಕೆ ಇಳಿಸುವ ಪರವಾಗಿ ಮತ ಚಲಾಯಿಸಿದ್ದಾರೆ. ಈ ನಿರ್ಧಾರದ ಪರವಾಗಿ 11 ಜನರು ಮತ್ತು ವಿರುದ್ಧವಾಗಿ 1 ಮತ ಚಲಾವಣೆಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Fed Rate Cut: ಯುಎಸ್‌ ಫೆಡರಲ್‌ ರಿಸರ್ವ್‌ ಬಡ್ಡಿ ದರ ಕಡಿತಗೊಳಿಸಿದ ಬೆನ್ನಲ್ಲೇ ಗಗನಮುಖಿಯಾದ ಚಿನ್ನದ ದರ