ಮುಂಬೈ: ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್(Sensex) ಗುರುವಾರ ಬೆಳಗ್ಗೆ 700 ಅಂಕಗಳ ಭಾರಿ ಏರಿಕೆ ದಾಖಲಿಸಿತು. 79,136 ಅಂಕಗಳಿಗೆ ತಲುಪಿತು. ಮತ್ತೊಂದು ಕಡೆ ನಿಫ್ಟಿ(Nifty) 214 ಅಂಕ ಜಿಗಿದು 23,975 ಅಂಕಗಳಿಗೆ ಏರಿತು. ಹಣಕಾಸು, ಆಟೊಮೊಬೈಲ್ ಮತ್ತು ಐಟಿ ಕ್ಷೇತ್ರದ ಷೇರುಗಳು ಲಾಭ ಗಳಿಸಿತು. ಬಿಎಸ್‌ಇ ನಿಫ್ಟಿ ಕೂಡ ಗಣನೀಯ ಚೇತರಿಸಿತು(Stock Market).
ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಮಹೀಂದ್ರಾ & ಮಹೀಂದ್ರಾ ಷೇರುಗಳು ಲಾಭ ಗಳಿಸಿತು. ಟಾಟಾ ಮೋಟಾರ್ಸ್ ಷೇರು ದರದಲ್ಲಿ 2% ಏರಿಕೆ ದಾಖಲಾಯಿತು. ಸಿಎಸ್ ಬಿ ಬ್ಯಾಂಕ್ ಷೇರು ದರ 6% ಹೆಚ್ಚಳವಾಯಿತು. ಸೌತ್ ಇಂಡಿಯನ್ ಬ್ಯಾಂಕ್ ಷೇರು ಕೂಡ 3% ಏರಿಕೆ ಕಂಡಿತು.
ಏಷ್ಯಾದ ಹಲವು ಮಾರುಕಟ್ಟೆಗಳಲ್ಲಿ ಮಂದಗತಿ ಇದ್ದರೂ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಚೇತರಿಕೆ ಕಂಡು ಬಂದಿತು. ಹಲವು ಪ್ರಮುಖ ಕಂಪನಿಗಳ ತ್ರೈಮಾಸಿಕ ಫಲಿತಾಂಶ ಈ ವಾರ ಪ್ರಕಟವಾಗಲಿದೆ.
ಈ ವಾರ ನಿಫ್ಟಿ 24,000 ಅಂಕಗಳ ಗಡಿಯನ್ನು ದಾಟುವ ಸಾಧ್ಯತೆ ಇದೆ. ಆಟೊಮೊಬೈಲ್ ಕಂಪನಿಗಳ ಸೇಲ್ಸ್, ಕ್ಯೂ 3 ಅಪ್ ಡೇಟ್ಸ್ ಸಿಗಲಿದೆ. ಜಾಗತಿಕ ಮಾರುಕಟ್ಟೆಗಳ ಟ್ರೆಂಡ್ ಕೂಡ ಪ್ರಭಾವ ಬೀರಬಹುದು. ಕಳೆದ ಮೂರು ತಿಂಗಳಿನಿಂದ ಮಂದಗತಿಯಲ್ಲಿದ್ದ ಷೇರು ಪೇಟೆಯ ಸೂಚ್ಯಂಕಗಳು ವರ್ಷಾಂತ್ಯದ ದಿನಗಳಲ್ಲಿ ಚೇತರಿಸುತ್ತಿದೆ. ಕಳದ ವಾರ ಉಭಯ ಸೂಚ್ಯಂಕಗಳು ಒಂದು ಪರ್ಸೆಂಟ್ ಏರಿತ್ತು. ಮುಖ್ಯವಾಗಿ ಬ್ಯಾಂಕಿಂಗ್ ಷೇರುಗಳು ಚೇತರಿಸುತ್ತಿವೆ.
ಬಜಾಜ್ ಫೈನಾನ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಬಜಾಜ್ ಫೈನಾನ್ಸ್, ಜೊಮ್ಯಾಟೊ ಷೇರುಗಳು ಚೇತರಿಸಿತು. ಭಾರ್ತಿ ಏರ್‌ಟೆಲ್, ಅದಾನಿ ಪೋರ್ಟ್ಸ್, ಎನ್ ಟಿಪಿಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ದರ ಇಳಿಯಿತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಜನವರಿಯಲ್ಲಿಯೂ ಷೇರುಗಳ ಮಾರಾಟವನ್ನು ಮುಂದುವರಿಸುವ ನಿರೀಕ್ಷೆ ಇದೆ. ಇದರಿಂದಾಗಿ ಸೂಚ್ಯಂಕಗಳು ಏರಿಳಿತಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ. ಜನವರಿ ಒಂದರಂದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು 1,782 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ಇದೇ ದಿನ ದೇಶೀಯ ಸಾಂಸ್ಥಿಕ ಹೂಡಿಕೆದಾರರು 1,690 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 75.10 ಡಾಲರ್‌ಗೆ ಏರಿಕೆಯಾಗಿತ್ತು. ಡಾಲರ್ ಎದುರು ರೂಪಾಯಿ ಮೌಲ್ಯ 85.73 ರೂ.ನಷ್ಟಿತ್ತು. ತಜ್ಞರ ಪ್ರಕಾರ ಇತ್ತೀಚಿನ ತಿಂಗಳುಗಳಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ಮಂದಗತಿ ಉಂಟಾಗಿದೆ. ಚೇತರಿಕೆ ಕಂಡು ಬರುತ್ತಿಲ್ಲ. ಜಿಎಸ್‌ಟಿ ಸಂಗ್ರಹವು ಡಿಸೆಂಬರ್‌ನಲ್ಲಿ 2.97%ರಷ್ಟು ಇಳಿಕೆಯಾಗಿದೆ. ಇದು ಆರ್ಥಿಕತೆಯ ಮಂದಗತಿಯನ್ನು ಬಿಂಬಿಸಿದೆ. ಹೀಗಾಗಿ ಐಟಿ, ಫಾರ್ಮಾ, ಹಣಕಾಸು ವಲಯದ ಷೇರುಗಳನ್ನು ಹೂಡಿಕೆದಾರರು ಗಮನಿಸಬೇಕಾಗುತ್ತದೆ ಎಂದು ಜಿಯೊಜಿತ್ ಫೈನಾನ್ಷಿಯಲ್ ಸರ್ವೀಸ್‌ನ ಮುಖ್ಯ ಹೂಡಿಕೆ ತಂತ್ರಜ್ಞರಾದ ಡಾ. ವಿಕೆ ವಿಜಯ್ ಕುಮಾರ್ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Elcid investments : 3 ರೂ.ಗಳ ಷೇರಿನ ದರ ಒಂದೇ ದಿನಕ್ಕೆ 2.36 ಲಕ್ಷ ರೂ.; ಷೇರುದಾರರಿಗೆ ಬಂಪರ್ ಲಾಭ!