Sunday, 15th December 2024

Fed Rate Cut: ಯುಎಸ್‌ ಫೆಡರಲ್‌ ರಿಸರ್ವ್‌ ಬಡ್ಡಿ ದರ ಕಡಿತಗೊಳಿಸಿದ ಬೆನ್ನಲ್ಲೇ ಗಗನಮುಖಿಯಾದ ಚಿನ್ನದ ದರ

Fed Rate Cut

ವಾಷಿಂಗ್ಟನ್‌: ಅಮೆರಿಕ ಕೇಂದ್ರ ಬ್ಯಾಂಕ್ ಯುಎಸ್ ಫೆಡರಲ್ ರಿಸರ್ವ್ (U.S. Federal Reserve) ಬಡ್ಡಿ ದರ ಕಡಿತಗೊಳಿಸಿದೆ. ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೊಮ್ ಪೋವೆಲ್‌ 50 ಬಿಪಿಎಸ್‌ ಬಡ್ಡಿ ದರ ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಚಿನ್ನದ ಬೆಲೆ ಬುಧವಾರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ (Fed Rate Cut).

ಸ್ಪಾಟ್ ಚಿನ್ನದ ದರ ಮಧ್ಯಾಹ್ನ 2:17ರ ವೇಳೆಗೆ ಪ್ರತಿ ಔನ್ಸ್‌ಗೆ ಶೇ. 0.9ಕ್ಕೆ ಏರಿಕೆಯಾಗಿ 2,592.39 ಡಾಲರ್‌ಗೆ ತಲುಪಿತು. ಚಿನ್ನದ ದರ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈತನ್ಮಧ್ಯೆ ಸ್ಪಾಟ್ ಬೆಳ್ಳಿ ಸೋಮವಾರ ಎರಡು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದ್ದು, ಔನ್ಸ್‌ಗೆ ಶೇ. 0.6 ಏರಿಕೆಯಾಗಿ 30.93 ಡಾಲರ್‌ಗೆ ಬಂದು ಮುಟ್ಟಿದೆ. ಪ್ಲಾಟಿನಂ ಪ್ರತಿ ಔನ್ಸ್‌ಗೆ 981.10 ಡಾಲರ್‌ ದರದಲ್ಲಿ ಸ್ಥಿರವಾಗಿದೆ. ಪಲ್ಲಾಡಿಯಮ್ ಶೇ. 3.2ರಷ್ಟು ಕುಸಿದು 1,081.00 ಡಾಲರ್‌ಗೆ ತಲುಪಿದೆ.

ಬಡ್ಡಿ ದರ ಕಡಿತದ ನಿರ್ಧಾರ

ಸೆಪ್ಟೆಂಬರ್ 18ರಂದು ಮುಕ್ತಾಯಗೊಂಡ 2 ದಿನಗಳ ಫೆಡರಲ್ ಓಪನ್ ಮಾರ್ಕೆಟ್‌ ಕಮಿಟಿ (FOMC) ಸಭೆಯಲ್ಲಿ ನಿರೀಕ್ಷಿಸಿದಂತೆ ಅರ್ಧ ಪಾಯಿಂಟ್‌ನಷ್ಟು ಅಂದರೆ 50 ಬೇಸಿಸ್ ಪಾಯಿಂಟ್‌ನಷ್ಟು ಬಡ್ಡಿ ದರ ಕಡಿತಕ್ಕೆ ನಿರ್ಧರಿಸಲಾಗಿದೆ. ಯುಎಸ್‌ ಫೆಡ್ ಹಣಕಾಸು ಸಮಿತಿ ಸದಸ್ಯರು ಬಡ್ಡಿ ದರಗಳನ್ನು ಶೇ. 4.75 ಮತ್ತು ಶೇ. 5ಕ್ಕೆ ಇಳಿಸುವ ಪರವಾಗಿ ಮತ ಚಲಾಯಿಸಿದ್ದಾರೆ. ಈ ನಿರ್ಧಾರದ ಪರವಾಗಿ 11 ಜನರು ಮತ್ತು ವಿರುದ್ಧವಾಗಿ 1 ಮತ ಚಲಾವಣೆಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಫೆಡರಲ್ ರಿಸರ್ವ್‌ನ ಈ ನಿರ್ಧಾರವು ವಾಣಿಜ್ಯ ಬ್ಯಾಂಕುಗಳು ಗ್ರಾಹಕರು ಮತ್ತು ವ್ಯವಹಾರಗಳಿಗೆ ಸಾಲ ನೀಡುವ ದರಗಳ ಮೇಲೆ ಪರಿಣಾಮ ಬೀರಲಿದೆ. ಗ್ರಾಹಕರಿಗೆ ಮತ್ತು ವ್ಯಾಪಾರಿಗಳಿಗೆ ಸಾಲವನ್ನು ಪಡೆಯಲು ಸುಲಭವಾಗುತ್ತವೆ. ಬ್ಯಾಂಕ್‌ಗಳು ಸಹ ತಮ್ಮ ಬಡ್ಡಿದರವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಜತೆಗೆ ಯುಎಸ್ ಫೆಡರಲ್ ರಿಸರ್ವ್ ವರ್ಷದ ಅಂತ್ಯಕ್ಕೂ ಮೊದಲು ಹೆಚ್ಚುವರಿ ಅರ್ಧ ಪಾಯಿಂಟ್ಸ್‌ ಬಡ್ಡಿ ದರ ಕಡಿತಗೊಳಿಸುವ ಸೂಚನೆಯನ್ನು ನೀಡಿದೆ. ಬಡ್ಡಿ ದರ ಕಡಿತದಿಂದ ಭಾರತೀಯ ಕರೆನ್ಸಿ ರೂಪಾಯಿ ಪ್ರಬಲವಾಗಲಿದೆ. ಬಲಿಷ್ಠ ರೂಪಾಯಿ ಆಮದನ್ನು ಅವಲಂಬಿಸಿರುವ ಉದ್ಯಮಿಗಳಿಗೆ ನೆರವಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ: JioPhone Prima 2: ಜಿಯೊದಿಂದ ಹಳೇ ಮಾಡೆಲ್‌ನಲ್ಲೇ ಸ್ಮಾರ್ಟ್‌ ಫೋನ್‌! ದರ ಕೇವಲ 2799 ರೂ!