ನವದೆಹಲಿ: ನ್ಯಾಯಾಧೀಶೆಯರನ್ನು ಕರ್ತವ್ಯದಿಂದ ವಜಾಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಪುರುಷರು ಮುಟ್ಟಾಗುತ್ತಿದ್ದರೆ ಅವರಿಗೆ ಮಹಿಳೆಯರ ಪರಿಸ್ಥಿತಿ ಅರ್ಥವಾಗುತ್ತಿತ್ತು ಎಂದು ಚಾಟಿ ಬೀಸಿದೆ. ಮಧ್ಯಪ್ರದೇಶದಲ್ಲಿ ಸಿವಿಲ್ ನ್ಯಾಯಾಧೀಶೆಯ ಅವರನ್ನು ವಜಾಗೊಳಿಸಲು ಬಳಸಲಾಗಿದ್ದ ಮಾನದಂಡವನ್ನು ಟೀಕಿಸಿದ ಸುಪ್ರೀಂ ಕೋರ್ಟ್(Supreme Court) ಪುರುಷರು ಮುಟ್ಟಾಗುತ್ತಿದ್ದರೆ ಅವರಿಗೆ ಪರಿಸ್ಥಿತಿ ಅರ್ಥವಾಗುತ್ತಿತ್ತು ಎಂದು ಕುಟುಕಿದೆ.
ಮಂಗಳವಾರ ಮಧ್ಯಪ್ರದೇಶದಲ್ಲಿ ಆರು ನ್ಯಾಯಾಧೀಶೆಯರ ವಜಾಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಮತ್ತು ಎನ್.ಕೋಟೇಶ್ವರ ಸಿಂಗ್ ಇದ್ದ ನ್ಯಾಯಪೀಠ ಪ್ರಕರಣದ ವಿಚಾರಣೆ ನಡೆಸಿದೆ. ಆರು ನ್ಯಾಯಾಧೀಶೆಯರನ್ನು ವಜಾಗೊಳಿಸಲಾಗಿದ್ದು,ಈ ಪೈಕಿ ಇಬ್ಬರನ್ನು ಇನ್ನೂ ಮರುಸೇರ್ಪಡೆ ಮಾಡಿಕೊಳ್ಳಲಾಗಿಲ್ಲ. ನ್ಯಾಯಾಧೀಶೆಯರ ವಿಷಯವನ್ನು ನಿರ್ವಹಿಸುವಾಗ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಅನುಸರಿಸಿದ್ದ ಮಾನದಂಡವನ್ನು ಗಮನಿಸಿದ ಸರ್ವೋಚ್ಚ ನ್ಯಾಯಾಲಯವು ಅದನ್ನು ತರಾಟೆಗೆತ್ತಿಕೊಂಡಿದೆ.
ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ನಿಧಾನಗತಿಗಾಗಿ ನ್ಯಾಯಾಧೀಶೆಯರನ್ನು ವಜಾಗೊಳಿಸಲಾಗಿದೆ ಎಂದು ರಾಜ್ಯದ ಪರ ವಕೀಲರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು,’ಪುರುಷ ನ್ಯಾಯಾಧೀಶರಿಗೂ ಇದೇ ಮಾನದಂಡವಿರಲಿ, ಏನಾಗುತ್ತದೆ ಎಂದು ನಾವು ನೋಡುತ್ತೇವೆ. ಪುರುಷರೂ ಮುಟ್ಟಾಗಲಿ ಎಂದು ನಾನು ಬಯಸುತ್ತೇನೆ,ಆಗ ಮಾತ್ರ ಅವರಿಗೆ ಕಷ್ಟ ಅರ್ಥವಾಗುತ್ತದೆ ಎಂದು ನ್ಯಾ.ನಾಗರತ್ನಾ ಕಿಡಿ ಕಾರಿದರು.
ನ್ಯಾಯಾಧೀಶೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ನರಳುತ್ತಿರುವಾಗ ಅವರು ನಿಧಾನಗತಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಬೇಡಿ ಮತ್ತು ಅವರನ್ನು ಮನೆಗೆ ಕಳುಹಿಸಬೇಡಿ ಎಂದೂ ಹೇಳಿದ ಸರ್ವೋಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಡಿ.12ಕ್ಕೆ ನಿಗದಿಗೊಳಿಸಿತು. ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಿಂದ ಆರು ನ್ಯಾಯಾಧೀಶೆಯರ ವಜಾ ಕುರಿತು ಸ್ವಯಂಪ್ರೇರಿತ ಅರ್ಜಿಯೊಂದನ್ನು ಸರ್ವೋಚ್ಚ ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.
ನವೆಂಬರ್ 11, 2023 ರಂದು, ರಾಜ್ಯ ಸರ್ಕಾರವು ಆರು ಮಹಿಳಾ ಸಿವಿಲ್ ನ್ಯಾಯಾಧೀಶರನ್ನು ಅವರ ಅತೃಪ್ತಿಕರ ಕಾರ್ಯನಿರ್ವಹಣೆಯ ಆರೋಪದ ಮೇಲೆ ವಜಾಗೊಳಿಸಿದ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿತ್ತು.
ಆದಾಗ್ಯೂ, ಹೈಕೋರ್ಟ್ ಆಗಸ್ಟ್ 1 ರಂದು ತನ್ನ ಹಿಂದಿನ ನಿರ್ಣಯಗಳನ್ನು ಮರುಪರಿಶೀಲಿಸಿತು ಮತ್ತು ನಾಲ್ವರು ಅಧಿಕಾರಿಗಳನ್ನು ಅಂದರೆ ಜ್ಯೋತಿ ವರ್ಕಡೆ, ಸುಶ್ರೀ ಸೋನಾಕ್ಷಿ ಜೋಶಿ, ಸುಶ್ರೀ ಪ್ರಿಯಾ ಶರ್ಮಾ ಮತ್ತು ರಚನಾ ಅತುಲ್ಕರ್ ಜೋಶಿ ಅವರನ್ನು ಕೆಲವು ನಿಯಮಗಳು ಮತ್ತು ಷರತ್ತುಗಳ ಮೇಲೆ ಮರುಸೇರ್ಪಡೆ ಮಾಡಲು ನಿರ್ಧರಿಸಿತು. ಅದಿತಿ ಕುಮಾರ್ ಶರ್ಮಾ ಮತ್ತು ಸರಿತಾ ಚೌಧರಿ ಎಂಬ ನ್ಯಾಯಾಧೀಶರನ್ನು ಮರು ನೇಮಕ ಮಾಡಿಕೊಂಡಿರಲಿಲ್ಲ.
ಈ ಸುದ್ದಿಯನ್ನೂ ಓದಿ: Sambhal Violence: ಸಂಭಾಲ್ ಮಸೀದಿ ಸರ್ವೆಗೆ ಸುಪ್ರೀಂ ಕೋರ್ಟ್ ತಡೆ