Sunday, 5th January 2025

Surveys of Mosques: ಮುಸ್ಲಿಮರ ಹೃದಯ ಗೆಲ್ಲಿ: ಸಂಭಾಲ್ ಮಸೀದಿ ವಿವಾದ ಕುರಿತು ಪ್ರಧಾನಿ ಮೋದಿಗೆ ಶಾಹಿ ಇಮಾಮ್ ಮನವಿ

ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಮಸೀದಿಗಳ ಸಮೀಕ್ಷೆಗೆ (Surveys of Mosques) ಸಂಬಂಧಿಸಿದಂತೆ ಕೋಮು ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯ ಜಮಾ ಮಸೀದಿಯ (Jama Masjid) ಶಾಹಿ ಇಮಾಮ್ (Shahi Imam) ಸೈಯದ್ ಅಹಮ್ಮದ್ ಬುಖಾರಿ (Syed Ahmed Bukhari) ಅವರು ಪ್ರದಾನಿ ನರೇಂದ್ರ ಮೋದಿ (Narendra Modi) ಅವರಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ ಇಮಾಮ್ ಅವರು ‘ಈ ದೇಶದ ಮುಸ್ಲಿಮರೊಂದಿಗೆ ಮಾತನಾಡಿ..’ ಎಂದು ಮನವಿ ಮಾಡಿದ್ದಾರೆ. ಜತೆಗೆ ಶುಕ್ರವಾರದ ಪ್ರಾರ್ಥನೆ ವೇಳೆ ಮುಸ್ಲಿಂ ಯುವಕರಿಗೆ ತಾಳ್ಮೆಯಿಂದಿರುವಂತೆ ಕರೆಯನ್ನೂ ನೀಡಿದ್ದಾರೆ.

ʼʼನೀವು ಕುಳಿತಿರುವ ಕುರ್ಚಿಗೆ ನ್ಯಾಯ ಒದಗಿಸಬೇಕಾಗಿರುವುದು ನಿಮ್ಮ ಕರ್ತವ್ಯ. ಮುಸ್ಲಿಂ ಸಮುದಾಯದ ಹೃದಯವನ್ನು ಗೆಲ್ಲಿ. ಉದ್ವಿಗ್ನತೆಯನ್ನು ಸೃಷ್ಟಿಸುವ ಮೂಲಕ ದೇಶದಲ್ಲಿ ಸಾಮರಸ್ಯದ ವಾತಾವರಣವನ್ನು ಕೆಡಿಸುತ್ತಿರುವ ಕಿಡಿಗೇಡಿಗಳ ಚಟುವಟಿಕೆಗಳನ್ನು ನಿಲ್ಲಿಸಿ” ಎಂದು ಬುಖಾರಿ ಅವರು ಪ್ರಧಾನಿ ಅವರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

“1947ರಲ್ಲಿ ಎದುರಿಸಿದ್ದಕ್ಕಿಂತ ಕೆಟ್ಟ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ. ಭವಿಷ್ಯದಲ್ಲಿ ಈ ದೇಶ ಎತ್ತ ಸಾಗಬಹುದು ಎಂದು ಯಾರಿಗೂ ಗೊತ್ತಿಲ್ಲ” ಎಂದು ಜಾಮಾ ಮಸೀದಿಯಲ್ಲಿ ಬುಖಾರಿ ಅವರು ಗದ್ಗದಿತರಾಗಿ ನುಡಿದಿರುವುದಾಗಿ ವರದಿಯಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಅವರು ತುರ್ತು ಕ್ರಮ ಕೈಗೊಳ್ಳುವಂತೆ ಮತ್ತು ಮೂವರು ಹಿಂದೂ ಹಾಗೂ ಮೂವರು ಮುಸ್ಲಿಂ ನಾಯಕರ ಜತೆಯಲ್ಲಿ ಈ ಉದ್ವಿಗ್ನತೆಯ ವಿಚಾರದ ಬಗ್ಗೆ ಮಾತನಾಡುವಂತೆಯೂ ಬುಖಾರಿ ಅವರು ಇದೇ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ.

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿರುವ ಮುಘಲ್-ಇರಾ ಶಾಹಿ ಜಮಾ ಮಸೀದಿಯಲ್ಲಿ ಸಮೀಕ್ಷೆ ನಡೆಸುವಂತೆ ನ್ಯಾಯಾಲಯದ ಆದೇಶ ಹೊರಬಿದ್ದ ಬಳಿಕ ನ. 24ರಂದು ಅಲ್ಲಿ ಸಂಭವಿಸಿದ ಸಂಘರ್ಷದ ಹಿನ್ನಲೆಯಲ್ಲಿ ಬುಖಾರಿ ಅವರ ಈ ಮಹತ್ವದ ಹೇಳಿಕೆ ಹೊರ ಬಿದ್ದಿದೆ.

ಸಂಭಾಲ್‌ನಲ್ಲಿರುವ ಶಾಹಿ ಜಮಾ ಮಸೀದಿಯಲ್ಲಿ ಸಮೀಕ್ಷೆ ನಡೆಸುವಂತೆ ನ. 19ರಂದು ನ್ಯಾಯಾಲಯ ಆದೇಶ ನೀಡಿದ ಬಳಿಕ ಈ ಭಾಗದಲ್ಲಿ ಉದ್ವಿಗ್ನತೆಯ ವಾತಾವರಣ ನಿರ್ಮಾಣಗೊಂಡಿದೆ. ಈ ಮಸೀದಿ ಮೊದಲು ಹರಿಹರ ದೇವಸ್ಥಾನವಾಗಿತ್ತು ಎನ್ನುವುದು ದೂರುದಾರರ ವಾದ.

ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ನ. 24ರಂದು ಭಾರತೀಯ ಪರಾತತ್ವ ಸರ್ವೇಕ್ಷಣ ಇಲಾಖೆಯವರು ಈ ಮಸೀದಿಯ ಸಮೀಕ್ಷೆಗೆಂದು ಬಂದಿದ್ದ ಸಂದರ್ಭದಲ್ಲಿ, ಕಲ್ಲು ತೂರಾಟ ನಡೆದಿತ್ತು. ಈ ಘರ್ಷಣೆಯಲ್ಲಿ ನಾಲ್ಕು ಜನ ಸಾವನ್ನಪ್ಪಿ, ಅಧಿಕಾರಿಗಳು ಮತ್ತು ಸ್ಥಳೀಯರು ಸೇರಿದಂತೆ ಹಲವರು ಗಾಯಗೊಂಡಿದ್ದರು. ಇನ್ನು, ದೇಶದ ವಿವಿಧ ಕಡೆಗಳಲ್ಲಿ ಮಸೀದಿಗಳ ಸಮಿಕ್ಷೆಗೆ ಆಗ್ರಹಿಸಿ ಹಲವು ದೂರು ಅರ್ಜಿಗಳು ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದೆ.

ಇದನ್ನೂ ಓದಿ: Pope Francis: 2025ರಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಪೋಪ್ ಫ್ರಾನ್ಸಿಸ್

“ದೆಹಲಿ ಜಮಾ ಮಸೀದಿಯನ್ನು ಸಮೀಕ್ಷೆ ಮಾಡುವ ಉದ್ದೇಶ ತಮಗೆ ಇಲ್ಲ ಎಂದು ಎ.ಎಸ್.ಐ. ನಮಗೆ ತಿಳಿಸಿದೆ. ಆದರೆ ಸಂಭಾಲ್ – ಅಜ್ಮೇರ್ ಮತ್ತು ಇತರ ಕಡೆಗಳಲ್ಲಿ ಮಸೀದಿಗಳನ್ನು ಸಮೀಕ್ಷೆ ನಡೆಸುವ ವಿಚಾರದಲ್ಲಿ ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ. ಈ ಎಲ್ಲ ವಿಚಾರಗಳು ದೇಶಕ್ಕೆ ಒಳ್ಳೆಯದಲ್ಲ. ನಾನಿಷ್ಟೇ ಹೇಳುವುದು, ಕ್ಷಣದಲ್ಲಿ ನಡೆದು ಹೋಗುವ ತಪ್ಪುಗಳಿಗೆ ಶತಮಾನಗಳ ಕಾಲ ಶಿಕ್ಷೆ ಅನುಭವಿಸಬೇಕಾಗುತ್ತದೆ. ಎಷ್ಟು ಸಮಯ ಈ ರೀತಿಯಾಗಿ ದೇಶ ನಡೆಯಬಹುದು? ಹಿಂದು – ಮುಸ್ಲಿಂ, ದೇವಸ್ಥಾನ, ಮಸೀದಿ ಎಂಬ ವಿಚಾರಗಳು ಎಷ್ಟು ಸಮಯ ನಡೆಯಬಹುದು?ʼʼ ಎಂದು ಬುಖಾರಿ ಅವರು ಖೇದದಿಂದ ಪ್ರಶ್ನಿಸಿದ್ದಾರೆ.

ಅಜ್ಮೇರ್ ಶರೀಫ್ ದರ್ಗಾವನ್ನು ಶಿವ ದೇವಸ್ಥಾನದ ಮೇಲೆ ಕಟ್ಟಲಾಗಿದೆ ಎಂದು ಹೇಳಿಕೊಂಡು ರಾಜಸ್ಥಾನ ನ್ಯಾಯಾಲಯದಲ್ಲಿ ದೂರು ಅರ್ಜಿ ದಾಖಲಾಗಿದೆ. ನ. 27ರಂದು ಈ ದೂರನ್ನು ಸ್ವೀಕರಿಸಿರುವ ನ್ಯಾಯಾಲಯವು, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ಅಜ್ಮೇರ್ ದರ್ಗಾ ಆಡಳಿತ ಮಂಡಳಿ ಮತ್ತು ಕೇಂದ್ರೀಯ ಅಲ್ಪಸಂಖ್ಯಾತ ಇಲಾಖೆಗೆ ನೊಟೀಸ್ ಜಾರಿ ಮಾಡಿದೆ. ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾಗಿರುವ ವಿಷ್ಣು ಗುಪ್ತಾ ಎಂಬವರು ಈ ಅರ್ಜಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ.