ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂದೇಶ್‌ಖಾಲಿ(Sandeshkhali)ಯಲ್ಲಿ ನಡೆದ ದೌರ್ಜನ್ಯಗಳ ಬಗ್ಗೆ ತನಿಖೆ ನಡೆಸಲು ಪಕ್ಷ ಆಯೋಗ ರಚಿಸಲಿದೆ. ಅಲ್ಲದೆ ಪ್ರಕರಣ ಸಂಬಂಧ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರನ್ನು ಜೈಲಿಗೆ ಕಳುಹಿಸಲಿದೆ ಎಂದು ಬಿಜೆಪಿ ಮುಖಂಡ ಸುವೇಂದು ಅಧಿಕಾರಿ (Suvendu Adhikari) ಗುಡುಗಿದರು.
ʼʼಸಂದೇಶ್‌ಖಾಲಿಯಲ್ಲಿ ನಡೆದ ದೌರ್ಜನ್ಯವನ್ನು ಮರೆಯುವಂತೆ ನೀವು (ಮಮತಾ ಬ್ಯಾನರ್ಜಿ) ಜನರಲ್ಲಿ ಮನವಿ ಮಾಡಿದ್ದೀರಿ. ಆದರೆ ಸಂದೇಶ್‌ಖಾಲಿಯ ಜನರು ಇದನ್ನು ಮರೆಯಲಾರರು. ನಾನು ಕೂಡ ಮರೆಯುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂದೇಶ್‌ಖಾಲಿಯಲ್ಲಿ ನಡೆದ ದೌರ್ಜನ್ಯಗಳ ಕುರಿತು ತನಿಖೆ ನಡೆಸಲು ಆಯೋಗ ರಚಿಸಲಿದೆ. ನೀವು ಸಂದೇಶ್‌ಖಾಲಿಯ ಮಹಿಳೆಯರನ್ನು ಮೋಸದಿಂದ ಜೈಲಿಗೆ ಕಳುಹಿಸಿದ್ದೀರಿ. ಮಹಿಳೆಯರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಕ್ಕಾಗಿ ಬಿಜೆಪಿ ನಿಮ್ಮನ್ನು ಜೈಲಿಗೆ ಕಳುಹಿಸಲಿದೆ” ಎಂದು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸವಾಲು ಹಾಕಿದರು.
Today I visited Sandeshkhali, to take part in the 'Sadasyata Abhiyan' or the BJP Membership Drive and to meet the Sisters and Brothers of Sandeshkhali who are now a part of my family. Our bond is not restricted to election only as I have vowed that I will do everything in my… pic.twitter.com/GwYdc55cOC
— Suvendu Adhikari (@SuvenduWB) December 31, 2024
“ನಾವು ಕಾನೂನಿನ ಪ್ರಕಾರ ಬಡ್ಡಿ ಸಮೇತ ಸೇಡು ತೀರಿಸಿಕೊಳ್ಳುತ್ತೇವೆ ಮತ್ತು ಸಂವಿಧಾನದ ಮಿತಿಯೊಳಗೆ ಕ್ರಮ ಕೈಗೊಳ್ಳುತ್ತೇವೆ” ಎಂದು ಘೋಷಿಸಿದರು. ಉತ್ತರ 24 ಪರಗಣ ಜಿಲ್ಲೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭೇಟಿ ನೀಡಿದ ಒಂದು ದಿನದ ನಂತರ ಸಂದೇಶ್‌ಖಾಲಿಗೆ ತೆರಳಿದ ಅವರು ಈ ಎಚ್ಚರಿಕೆ ನೀಡಿದರು.
ಸಂದೇಶ್‌ಖಾಲಿಯಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ʼʼಶಹಜಹಾನ್ ಶೇಖ್ ಅವರಂತಹ ಸ್ಥಳೀಯ ಟಿಎಂಸಿ ಪ್ರಬಲ ನಾಯಕರ ವಿರುದ್ಧ ಪ್ರತಿಭಟನೆ ನಡೆಸಿದವರನ್ನು ಶಿಕ್ಷಿಸಲು ಇಲ್ಲಿನ ಮಹಿಳೆಯರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲು ಮಮತಾ ಬ್ಯಾನರ್ಜಿ ಪಿತೂರಿ ನಡೆಸಿದ್ದಾರೆʼʼ ಎಂದು ಅವರು ಆರೋಪಿಸಿದರು.
ಮಮತಾ ಬ್ಯಾನರ್ಜಿ ಈ ಪ್ರದೇಶದ ಜನರನ್ನು ಡಿ. 30ರಂದು ಭೇಟಿಯಾಗಿ “ಹಿಂದಿನದನ್ನು ಮರೆತು ಬಿಡಿ” ಎಂದು ಮನವಿ ಮಾಡಿದ್ದರು. ಲೈಂಗಿಕ ದೌರ್ಜನ್ಯ ಮತ್ತು ಭೂ ಕಬಳಿಕೆ ಆರೋಪದ ಮೇಲೆ 2024ರ ಫೆಬ್ರವರಿಯಲ್ಲಿ ಹಿಂಸಾತ್ಮಕ ಟಿಎಂಸಿ ನಾಯಕರ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದ ನಂತರ ಮಮತಾ ಬ್ಯಾನರ್ಜಿ ಅವರ ಮೊದಲ ಭೇಟಿ ಇದಾಗಿತ್ತು.
“ಪ್ರತಿಭಟನೆಯ ಹಿಂದೆ ಯಾರ ಕೈವಾಡವಿದೆ ಎನ್ನುವುದು ನನಗೆ ತಿಳಿದಿದೆ. ಇಡೀ ಪ್ರಕರಣ ಸುಳ್ಳು ಎನ್ನುವುದನ್ನು ಜನರು ಅರಿತುಕೊಂಡಿದ್ದಾರೆ. ಅಂತಿಮವಾಗಿ ಸತ್ಯ ಹೊರ ಬಂದಿದೆ. ಕಳೆದು ಹೋದ ಘಟನೆಗಳನ್ನು ನಾನು ಮನಸ್ಸಿನಲ್ಲಿಟ್ಟುಕೊಳ್ಳಲು ಬಯಸುವುದಿಲ್ಲ” ಎಂದು ಅವರು ಹೇಳಿದ್ದರು.
2024ರ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ ಸಂದೇಶಖಾಲಿಯ ಪ್ರಕರಣವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡು ಟಿಎಂಸಿ ವಿರುದ್ಧ ಕಿಡಿಕಾರಿತ್ತು. ವಿಶೇಷವಾಗಿ ಬಸಿರ್ಹತ್ ಕ್ಷೇತ್ರದಲ್ಲಿ ಈ ವಿಚಾರವನ್ನು ಪದೇ ಪದೆ ಪ್ರಸ್ತಾಪಿಸಿತ್ತು. ಕೊನೆಗೆ ಸಂದೇಶಖಾಲಿ ವಿಧಾನಸಭಾ ಕ್ಷೇತ್ರ ಹೊಂದಿರುವ ಬಸಿರ್ಹತ್ ಲೋಕಸಭಾ ಸ್ಥಾನವನ್ನು ಟಿಎಂಸಿ ಗೆದ್ದುಕೊಂಡಿತ್ತು.
ಮುಂದಿನ 100 ವರ್ಷಗಳ ಕಾಲ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಟಿಎಂಸಿ ಸುವೇಂದು ಅಧಿಕಾರಿ ಹೇಳಿಕೆಗೆ ತಿರುಗೇಟು ನೀಡಿದೆ.
ಈ ಸುದ್ದಿಯನ್ನೂ ಓದಿ: Modi Govt: ಹೊಸ ವರ್ಷಕ್ಕೆ ಬಡವರಿಗೆ ಮೋದಿ ಸರ್ಕಾರದಿಂದ ಗುಡ್‌ನ್ಯೂಸ್; ಹೆಚ್ಚುವರಿ 2 ಕೋಟಿ ಮನೆ ಒದಗಿಸಲು ಚಿಂತನೆ