ವಾಷಿಂಗ್ಟನ್: ಮುಂಬೈ ದಾಳಿಯ ಆರೋಪಿ ಮತ್ತು ಪಾಕಿಸ್ತಾನ ಮೂಲದ ಕೆನಡಾದ ಉದ್ಯಮಿ ತಹವ್ವುರ್ ರಾಣಾ (Tahawwur Rana) ಅವರನ್ನು ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ. ಅಮೆರಿಕದ ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರ ಸಮಿತಿಯು ಆತನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ. ರಾಣಾ ಹಸ್ತಾಂತರಕ್ಕೆ ಅನುಕೂಲವಾಗುವಂತೆ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
ಕಳೆದ ವರ್ಷ ಜುಲೈನಲ್ಲಿ ಅಮೆರಿಕದ ನ್ಯಾಯಾಲಯವು ಪಾಕಿಸ್ತಾನಿ ಮೂಲದ ರಾಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. 6 ಮಂದಿ ಅಮೆರಿಕನ್ನರು ಸೇರಿದಂತೆ 166 ಜನರ ಸಾವಿಗೆ ಕಾರಣವಾಗಿದ್ದ 26/11ರ ಮುಂಬೈನ ತಾಜ್ ಹೋಟೆಲ್ ಮೇಲಿನ ದಾಳಿಗೆ ನೆರವು ನೀಡಿದ್ದ ಆರೋಪದಲ್ಲಿ ತಹವ್ವುರ್ ರಾಣಾನನ್ನು ಹಸ್ತಾಂತರಿಸುವಂತೆ ಭಾರತ, ಅಮೆರಿಕಕ್ಕೆ ಮನವಿ ಮಾಡಿಕೊಂಡಿತ್ತು. ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿ ಜತೆಗಿನ ಒಡನಾಟಕ್ಕೆ ಹೆಸರುವಾಸಿಯಾಗಿರುವ ರಾಣಾ, ಲಷ್ಕರ್-ಎ-ತೈಬಾ ಗುಂಪಿಗೆ ಸಹಾಯ ಮಾಡಿದ್ದಾನೆಂಬ ಆರೋಪವಿದೆ.
2008ರ ಮುಂಬೈ ದಾಳಿ ಆರೋಪಗಳಿಗೆ ಸಂಬಂಧಿಸಿದಂತೆ ರಾಣಾ ಸಲ್ಲಿಸಿದ್ದ ಅರ್ಜಿಯನ್ನು ಚಿಕಾಗೋದ ಫೆಡರಲ್ ನ್ಯಾಯಾಲಯದಲ್ಲಿ ಈ ಹಿಂದೆ ವಿಚಾರಣೆ ನಡೆಸಿತ್ತು. ಆದರೆ ನ್ಯಾಯಾಲಯ ರಾಣಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು ಮತ್ತು ಎರಡನೇ ಬಾರಿ ವಿಚಾರಣೆಗೆ ಒಳಪಡಿಸಲು ಭಾರತಕ್ಕೆ ಕಳುಹಿಸಲಾಗುವುದು ಎಂದು ಕೋರ್ಟ್ ಹೇಳಿತ್ತು. ಅಪರಾಧ ಸಾಬೀತಾದರೆ ಮರಣದಂಡನೆ ಶಿಕ್ಷೆ ಕೂಡ ಆಗಬಹುದು ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖ ಮಾಡಿತ್ತು.
ಪಾಕಿಸ್ತಾನದ ಪಂಜಾಬ್‌ನ ಚಿಚಾವಟ್ನಿಯಲ್ಲಿ ಜನಿಸಿದ ರಾಣಾ, ವೃತ್ತಿಯಲ್ಲಿ ವೈದ್ಯನಾಗಿದ್ದ. ಇವನು ಪಾಕಿಸ್ತಾನದ ಸೇನಾ ವೈದ್ಯಕೀಯ ಕಾರ್ಪ್ಸ್‌ನಲ್ಲಿ ಕ್ಯಾಪ್ಟನ್ ಜನರಲ್ ಡ್ಯೂಟಿ ಪ್ರಾಕ್ಟೀಷನರ್ ಆಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ನಂತರ, ರಾಣಾ 1997ರಲ್ಲಿ ಕೆನಡಾಕ್ಕೆ ತೆರಳಿದ್ದ. ಚಿಕಾಗೋ, ನ್ಯೂಯಾರ್ಕ್ ಮತ್ತು ಟೊರೊಂಟೊದಲ್ಲಿ ವಲಸೆ ಸೇವಾ ವ್ಯವಹಾರ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಈತ ಭಯೋತ್ಪಾದಕರ ಜತೆಗೆ ನಂಟು ಹೊಂದಿದ್ದ ಎಂದು ಭಾರತೀಯ ಗುಪ್ತಚರ ಇಲಾಖೆ ತಿಳಿಸಿತ್ತು. ಲಷ್ಕರ್-ಎ-ತೈಬಾ ಹಾಗೂ ಐಸಿಸ್ ಜತೆ ನೇರ ಸಂಪರ್ಕ ಹೊಂದಿದ್ದಾನೆಂಬ ಆರೋಪಗಳು ಕೇಳಿ ಬಂದಿದ್ದವು. 2008ರಲ್ಲಿ ಮುಂಬೈನ ತಾಜ್ ಹೋಟೆಲ್ ಮೇಲೆ ನಡೆದಿದ್ದ ದಾಳಿಯಲ್ಲಿ ಈತನ ಕೈವಾಡವಿದೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಸುದ್ದಿಯನ್ನೂ ಓದಿ: Lashkar-e-Taiba: ಬಿಸ್ಕೆಟ್ ಸಹಾಯದಿಂದ ಲಷ್ಕರ್-ಎ-ತೊಯ್ಬಾ ಕಮಾಂಡರ್‌ನನ್ನು ಹೊಡೆದುರಳಿಸಿದ ಸೇನೆ; ಹೇಗಿತ್ತು ಈ ರೋಚಕ ಕಾರ್ಯಾಚರಣೆ?