Thursday, 24th October 2024

Tata-Airbus Project: 28ರಂದು ವಡೋದರಾದಲ್ಲಿ ಸಿ -295 ವಿಮಾನ ಸೌಲಭ್ಯಕ್ಕೆ ಮೋದಿ ಮತ್ತು ಸ್ಪೇನ್ ಪ್ರಧಾನಿ ಸ್ಯಾಂಚೆಜ್ ಚಾಲನೆ

Tata-Airbus Project

ಅಹಮದಾಬಾದ್:‌ ಪ್ರಧಾನಿ ನರೇಂದ್ರ ಮೋದಿ(Narendra Modi) ಮತ್ತು ಸ್ಪೇನ್‌ ಪ್ರಧಾನಿ ಪೆಡ್ರೋ ಸ್ಯಾಂಚೆಜ್‌ (Pedro Sanchez ) ಜಂಟಿಯಾಗಿ ಅ. 28 ರಂದು ಗುಜರಾತಿನ(Gujarat) ವಡೋದರಾದಲ್ಲಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್‌ನ (ಟಿಎಎಸ್ಎಲ್) ಸಿ-295 ವಿಮಾನ ಸೌಲಭ್ಯದ ಅಂತಿಮ ಅಸೆಂಬ್ಲಿ ಲೈನ್( ಜೋಡಣೆ ಮಾರ್ಗ) ಉದ್ಘಾಟಿಸಲಿದ್ದಾರೆ. ಇದೇ ವೇಳೆ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ಗುಜರಾತ್ ಸರ್ಕಾರ ತಿಳಿಸಿದೆ. ಇದು ಭಾರತದ ರಕ್ಷಣಾ ಉತ್ಪಾದನಾ ವಲಯಕ್ಕೆ ಪ್ರಮುಖ ಮೈಲಿಗಲ್ಲಾಗಲಿದ್ದು, ಭಾರತ ಮತ್ತು ಸ್ಪೇನ್ ನಡುವೆ ಉತ್ತಮ ಸಂಬಂಧ ಬಲಪಡಿಸುತ್ತದೆ.

2021ರ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್‌ ಸೌಲಭ್ಯದ ಈ ಯೋಜನೆಗೆ ಅಡಿಗಲ್ಲು ಹಾಕಿದ್ದರು. ಈಗ ಎರಡು ವರ್ಷದ ನಂತರ ಈ ಯೋಜನೆ ಉದ್ಘಾಟನೆಯಾಗಲಿದೆ. ಮೇಕ್‌ ಇನ್‌ ಇಂಡಿಯಾ ಅಡಿಯಲ್ಲಿ ತಯಾರಾಗಿರುವ ಈ ಯೋಜನೆ ಭಾರತೀಯ ಅಂತರಿಕ್ಷಯಾನ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುತ್ತದೆ. ಮೊದಲ ಬಾರಿಗೆ ಭಾರತೀಯ ಖಾಸಗಿ ವಲಯದಲ್ಲಿ ಸಂಪೂರ್ಣವಾಗಿ ವಿಮಾನವನ್ನು ತಯಾರಿಸಲಾಗುತ್ತಿದೆ. ಇದು ಉಭಯ ದೇಶಗಳ ನಡುವಿನ ಸಂಬಂಧವನ್ನು ಬಲಪಡಿಸುವ ಜೊತೆಗೆ ಭಾರತದ ರಕ್ಷಣಾ ಉತ್ಪಾದನಾ ವಲಯವನ್ನು ಮತ್ತಷ್ಟು ಬಲಪಡಿಸುತ್ತದೆ.

ಸೆಪ್ಟೆಂಬರ್ 2021 ರಲ್ಲಿ ಭಾರತೀಯ ವಾಯಪಡೆಯು (IAF) AVRO ಫ್ಲೀಟ್ ಬದಲಿಗೆ 56 ಏರ್ ಬಸ್ C295MW ವಿಮಾನಗಳ ಖರೀದಿ ಕುರಿತು ಭಾರತ ಸರಕಾರ ಅಧಿಕೃತಗೊಳಿಸಿತ್ತು.ಈ ಒಪ್ಪಂದದಡಿ ಏರ್ ಬಸ್ ಸ್ಪೇನ್ ನಲ್ಲಿರುವ ಸೆವಿಲ್ಲೆಯ ತನ್ನ ಅಂತಿಮ ಅಸೆಂಬ್ಲಿ ಮಾರ್ಗದ ಮೂಲಕ ಹಾರಾಟಕ್ಕೆ ಸಿದ್ಧವಾಗಿರುವ 16 ವಿಮಾನಗಳನ್ನು ಪೂರೈಕೆ ಮಾಡಲಿದೆ ಎಂದು ತಿಳಿಸಲಾಗಿತ್ತು. ನಂತರದ 40 ವಿಮಾನಗಳನ್ನು ಭಾರತದಲ್ಲಿನ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ನಲ್ಲಿ ಉತ್ಪಾದನೆ ಮತ್ತು ಜೋಡಣೆ ಮಾಡಿ ವಿತರಣೆ ಮಾಡಲಾಗುತ್ತದೆ. ವಡೋದರಾದಲ್ಲಿ ತಯಾರಾಗಲಿರುವ ಈ C-295 ವಿಮಾನವು 5ರಿಂದ 10 ಟನ್‌ಗಳ ಸಾಮರ್ಥ್ಯದ ಮಿಲಿಟರಿ ಸಾರಿಗೆ ವಿಮಾನವಾಗಿದ್ದು, 71 ಸೈನಿಕರು ಅಥವಾ 49 ರಿಂದ 50 ಪ್ಯಾರಾಟ್ರೂಪರ್‌ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: S Jaishankar: ಏರ್‌ ಇಂಡಿಯಾ ಪ್ರಯಾಣಿಕರಿಗೆ ಗುರುಪತ್ವಂತ್ ಸಿಂಗ್ ಪನ್ನುನ್‌ ಬೆದರಿಕೆ; ವಿದೇಶಾಂಗ ಸಚಿವ ಜೈಶಂಕರ್‌ ಹೇಳಿದ್ದೇನು?

ರಷ್ಯಾದ ಕಜಾನ್‌ ನಗರದಲ್ಲಿ ನಡೆದ16 ನೇ ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ ಭಾರತ ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತದೆಯೇ ಹೊರತು ಯುದ್ಧವನ್ನಲ್ಲ ಎಂದು ಹೇಳಿದ್ದಾರೆ. ಈ ಮೂಲಕ ರಷ್ಯಾ-ಉಕ್ರೇನ್ ಸಂಘರ್ಷವನ್ನು ಶಾಂತಿಯುತ ಮಾತುಕತೆಗಳ ಮೂಲಕ ಪರಿಹರಿಸಬೇಕೆಂದು ಅವರು ಕರೆ ನೀಡಿದ್ದಾರೆ. “ನಾವು COVID ನಂತಹ ಸವಾಲನ್ನು ಒಟ್ಟಿಗೆ ಜಯಿಸಲು ಸಾಧ್ಯವಾದಂತೆಯೇ, ಭವಿಷ್ಯದ ಪೀಳಿಗೆಗೆ ಸುರಕ್ಷಿತ, ಬಲವಾದ ಮತ್ತು ಸಮೃದ್ಧ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ಹೊಸ ಅವಕಾಶಗಳನ್ನು ಸೃಷ್ಟಿಸಬೇಕು” ಎಂದು ಅವರು ಹೇಳಿದ್ದಾರೆ.