Saturday, 26th October 2024

Terror Attack: ಕಾಶ್ಮೀರದಲ್ಲಿ ಉಗ್ರರಿಂದ ಭೀಕರ ಹತ್ಯಾಕಾಂಡ; ವೈದ್ಯ, ಐವರು ವಲಸಿಗ ಕಾರ್ಮಿಕರು ಸೇರಿ 6 ಮಂದಿ ಬಲಿ

Terror Attack

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದಲ್ಲಿ ಉಗ್ರರ ಹಾವಳಿ ಮುಂದುವರಿದಿದೆ (Terror Attack). ಗಂಡರ್ಬಾಲ್ ಜಿಲ್ಲೆಯ ಗಗಾಂಗೀರ್‌ (Gagangir)ನಲ್ಲಿ ಭಾನುವಾರ (ಅಕ್ಟೋಬರ್‌ 20) ನಡೆದ ಭಯೋತ್ಪಾದಕರ ದಾಳಿಯಲ್ಲಿ ವೈದ್ಯ, ಐವರು ವಲಸಿಗ ಕಾರ್ಮಿಕರು ಸೇರಿ ಕನಿಷ್ಠ 6 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

6 ಮಂದಿ ಸಾವನ್ನಪ್ಪಿರುವುದನ್ನು ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ಸಾವು-ನೋವುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಮೂಲಗಳು ತಿಳಿಸಿವೆ. ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಈ ಪ್ರದೇಶವನ್ನು ಸುತ್ತುವರಿದಿದ್ದಾರೆ. ಗುಂಡ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ ಕಾರ್ಮಿಕರು ನೆಲೆಸಿರುವ ಶಿಬಿರದ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ.

ಲಷ್ಕರ್-ಎ-ತೈಬಾ (LeT)ಯ ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಈ ದಾಳಿಯನ್ನು ನಡೆಸಿದೆ ಎಂದು ಅಂದಾಜಿಸಲಾಗಿದೆ. ದೀರ್ಘಕಾಲದಿಂದ ಶಾಂತಿಯುತ ಪ್ರದೇಶವೆಂದು ಪರಿಗಣಿಸಲ್ಪಟ್ಟ ಗಂಡರ್ಬಾಲ್ ಜಿಲ್ಲೆಯಲ್ಲಿ ಇದೀಗ ದಾಳಿ ನಡೆದಿರುವುದು ಕಳವಳವನ್ನುಂಟು ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ ಸ್ಥಳೀಯರಲ್ಲದವರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ.

ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರು ಈ ದಾಳಿಯನ್ನು ಖಂಡಿಸಿದ್ದಾರೆ. ಮೃತರು ಪ್ರಮುಖ ಕಟ್ಟಡವೊಂದರ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ. “ಸೋನಾಮಾರ್ಗ್ ಪ್ರದೇಶದ ಗಗಾಂಗೀರ್‌ನಲ್ಲಿ ಸ್ಥಳೀಯರಲ್ಲದ ಕಾರ್ಮಿಕರ ಮೇಲೆ ನಡೆದ ಭೀಕರ ದಾಳಿ ಖಂಡನೀಯ. ಈ ಭಯೋತ್ಪಾದಕ ದಾಳಿಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಇನ್ನೂ 2-3 ಜನರು ಗಾಯಗೊಂಡಿದ್ದಾರೆ. ನಿರಾಯುಧ ಮುಗ್ಧ ಜನರ ಮೇಲಿನ ಈ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ” ಎಂದು ಅವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ (JKPCC) ಕೂಡ ಈ ಕೃತ್ಯದ ವಿರುದ್ಧ ಕಿಡಿ ಕಾರಿದೆ. “ಈ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ. ನಮ್ಮ ಸೇನೆ ಉಗ್ರರನ್ನು ಮಟ್ಟ ಹಾಕಲಿದೆʼʼ ಎಂದು ಕಾಂಗ್ರೆಸ್ ಮುಖಂಡ ರವೀಂದರ್ ಶರ್ಮಾ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಉಪಮುಖ್ಯಮಂತ್ರಿ ಕವಿಂದರ್ ಗುಪ್ತಾ ಈ ಘಟನೆಯನ್ನು ಖಂಡಿಸಿದ್ದು, ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಈ ಪ್ರದೇಶದಲ್ಲಿ ತಲೆ ಎತ್ತಲು ಪ್ರಯತ್ನಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

2 ದಿನಗಳ ಹಿಂದೆಯಷ್ಟೇ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಝೈನಾಪೊರಾದ ವದುನಾ ಪ್ರದೇಶದಲ್ಲಿ ಉಗ್ರರ ದಾಳಿಗೆ ನಾಗರಿಕರೊಬ್ಬರು ಬಲಿಯಾಗಿದ್ದರು. ʼʼಸ್ಥಳೀಯರಲ್ಲದ ವ್ಯಕ್ತಿಯ ಮೃತದೇಹ ಕಂಡು ಬಂದಿದೆ. ದೇಹದಲ್ಲಿ ಅನೇಕ ಗುಂಡಿನ ಗಾಯಗಳಿವೆʼʼ ಎಂದು ಅಧಿಕಾರಿಗಳು ಶುಕ್ರವಾರ (ಅಕ್ಟೋಬರ್‌ 18) ತಿಳಿಸಿದ್ದರು. ಈ ಕೃತ್ಯದ ಬಗ್ಗೆ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ ಮತ್ತು ಮೃತನ ಗುರುತು ಪತ್ತೆಯಾಗಿ ವಿಚಾರಣೆ ನಡೆಸುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಭಾರತೀಯ ಸೇನೆ ಮತ್ತು ಎಸ್ಒಜಿ (Special Operations Group) ರಾಜೌರಿಯ ಶಹದ್ರಾ ಪ್ರದೇಶದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ನಡೆಸಿದೆ. ಈ ಘಟನೆ ಮರೆಯಾಗುವ ಮುನ್ನ ಅದೇ ಮಾದರಿಯ ದಾಳಿ ನಡೆದಿದೆ.

ಈ ಸುದ್ದಿಯನ್ನೂ ಓದಿ: Jammu & Kashmir Encounter : ಜಮ್ಮು& ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ, ನುಸುಳುಕೋರನ ಹತ್ಯೆ