Wednesday, 27th November 2024

Terror Networks: ಜಮ್ಮು & ಕಾಶ್ಮೀರದಲ್ಲಿ ಮಿಂಚಿನ ಕಾರ್ಯಾಚರಣೆ; ಉಗ್ರ ಚಟುವಟಿಕೆಗೆ ನೆರವು ನೀಡುತ್ತಿದ್ದವರು ಪೊಲೀಸ್‌ ಬಲೆಗೆ

Terror Networks

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ (Jammu and Kashmir)ದಲ್ಲಿ ಪೊಲೀಸರು ಭಯೋತ್ಪಾಕ ಜಾಲ (Terror Networks)ದ ವಿರುದ್ಧ ಮಿಂಚಿನ ಕಾರ್ಯಾಚರಣೆ ನಡೆಸಿ ಹಲವು ಶಂಕಿತರನ್ನು ಬಂಧಿಸಿದ್ದಾರೆ. ಜತೆಗೆ ಜಮ್ಮುವಿನಲ್ಲಿ ಹಲವು ಕಡೆ ದಾಳಿ ನಡೆಸಿ ಶಸ್ತ್ರಾಸ್ತ್ರಗಳು, ಎಲೆಕ್ಟ್ರಾನಿಕ್‌ ಉಪಕರಣ ಮತ್ತು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಲಾಜಿಸ್ಟಿಕ್ಸ್, ಶಸ್ತ್ರಾಸ್ತ್ರ, ಮದ್ದು ಗುಂಡುಗಳ ಪೂರೈಕೆ ಹಾಗೂ ಆರ್ಥಿಕ ನೆರವು ಸೇರಿದಂತೆ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುವ ಓವರ್ ಗ್ರೌಂಡ್ ವರ್ಕರ್ಸ್ (OGWs) ಮತ್ತು ಇತರ ಭಯೋತ್ಪಾದಕ ಚಟುಚಟಿಕೆಯಲ್ಲಿ ಭಾಗಿಯಾಗಿರುವ ಶಂಕಿತರನ್ನು ಗುರುತಿಸಲು, ಪತ್ತೆಹಚ್ಚಲು ಮತ್ತು ಬಂಧಿಸಲು ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ. ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ವಸತಿ ಮನೆಗಳು ಮತ್ತು ಅಡಗುತಾಣಗಳು ಸೇರಿದಂತೆ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಜೌರಿ ಜಿಲ್ಲೆಯ ಥನಮಂಡಿ, ದರ್ಹಾಲ್‌, ಕಲಕೋಟೆ, ಮಂಜಕೋಟೆ ಮತ್ತು ಧರ್ಮಶಾಲಾ ಸೇರಿದಂತೆ 9 ಕಡೆ, ಪೂಂಚ್‌ ಜಿಲ್ಲೆಯ ಸೂರನ್‌ಕೋಟೆ, ಮಂಡಿ, ಪೂಂಚ್‌, ಮೆಂಧಾರ್‌ ಮತ್ತು ಗುರ್‌ಸೈ ಮುಂತಾದ ಸ್ಥಳಗಳ್ಲಲಿಯೂ ಶೋಧ ನಡೆಸಲಾಗಿದೆ.

2013ರಲ್ಲಿ ತಾನಂಬಾಡಿ ಪೊಲೀಸ್‌ ಠಾಣೆಯಲ್ಲಿ ಮತ್ತು ಈ ವರ್ಷ ರಜೌರಿಯ ಪೊಲೀಸ್‌ ಠಾಣೆಯಲ್ಲಿ ದಾಖಲಾದ 2 ಪ್ರತ್ಯೇಕ ದೂರಿನ ಆಧಾರದ ಮೇಲೆ ಈ ಶೋಧ ಕಾರ್ಯ ನಡೆಸಲಾಗಿದೆ. ಜೈಶ್-ಎ-ಮೊಹಮ್ಮದ್ (Jaish-e-Mohammed) ಮತ್ತು ಲಷ್ಕರ್-ಎ-ತೋಯ್ಬಾ (Lashkar-e-Toiba)ದಂತಹ ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಗಡಿ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಜಾಲಕ್ಕೆ ಸಂಬಂಧಿಸಿದಂತೆ ಈ ದೂರುಗಳು ದಾಖಲಾಗಿದ್ದವು.

ಇನ್ನು ಉದಂಪುರದ ರಾಯ್ ಚಕ್, ಚಕಾ, ಕಡ್ವಾ, ಮೋರ್ಹಾ, ಕುಂಡ್, ಖಾನೇಡ್, ಪೊನಾರಾ, ಲೌಡ್ರಾ ಮತ್ತು ಸಾಂಗ್ ಸೇರಿದಂತೆ ಬಸಂತ್‌ನಗರ ಪ್ರದೇಶದ 25 ಸ್ಥಳಗಳಲ್ಲಿ ಪೊಲೀಸರು ವ್ಯಾಪಕ ಶೋಧ ನಡೆಸಿದ್ದಾರೆ. ಪುಣಿ, ಗುಲಾಬ್ಘರ್, ಅರ್ನಾಸ್, ಪನಾಸ್ಸಾ ಮತ್ತು ಮಹೋರ್-ಚಸನಾ ಸೇರಿದಂತೆ ರಿಯಾಸಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿಯೂ ಇದೇ ರೀತಿಯ 10 ದಾಳಿಗಳನ್ನು ಸಂಘಟಿಸಲಾಗಿದೆ. ಬಸಂತ್‌ಘಡ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿಗೆ ಸಂಬಂಧಿಸಿದ ತನಿಖೆಯ ಭಾಗವಾಗಿ ಈ ಶೋಧಗಳನ್ನು ನಡೆಸಲಾಗಿದೆ.

ಕಾರ್ಯಾಚರಣೆಯ ಭಾಗವಾಗಿ ಅನೇಕ ಶಂಕಿತ ಭಯೋತ್ಪಾದಕರು ಮತ್ತು ಉಗ್ರ ಚಟುವಟಿಕೆಗೆ ನೆರವು ನೀಡುವವರನ್ನು ವಶಕ್ಕೆ ಪಡೆಯಲಾಗಿದೆ. ಎಲೆಕ್ಟ್ರಿಕ್‌ ಉಪಕರಣ, ವಿವಿಧ ದಾಖಲೆಗಳು, ನಗದು, ಆಯುಧ ಮುಂತಾದ ವಸ್ತುಗಳು ಈ ಶೋಧದ ವೇಳೆ ಕಂಡು ಬಂದಿವೆ. ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅದಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾಹಿತಿ ನೀಡಲು ಮನವಿ

ʼʼಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯ ನಡೆಸಿದ್ದೇವೆ. ಯಾವುದೇ ಅನುಮಾನಸ್ಪದ ಚಟುವಟಿಕೆ ಕಂಡು ಬಂದರೆ ಕೂಡಲೇ ಮಾಹಿತಿ ನೀಡಿʼʼ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ತನಿಖೆ ಮುಂದುವರಿದಿದೆ.

ಈ ಸುದ್ದಿಯನ್ನೂ ಓದಿ: Jammu and Kashmir : ಜಮ್ಮು ಮತ್ತು ಕಾಶ್ಮೀರದ ಕಪ್ವಾರಾದಲ್ಲಿ ಇಬ್ಬರು ಉಗ್ರರು ಎನ್ಕೌಂಟರ್‌ನಲ್ಲಿ ಹತ್ಯೆ