Sunday, 5th January 2025

The Sabaramati Report: ಸಂಜೆ 4 ಗಂಟೆಗೆ ʻದಿ ಸಬರಮತಿ ರಿಪೋರ್ಟ್‌ʼ ಸಿನಿಮಾ ವೀಕ್ಷಿಸಲಿರುವ ಪ್ರಧಾನಿ ಮೋದಿ

pm modi

ನವದೆಹಲಿ: ಸುಮಾರು ಎರಡು ದಶಕಗಳ ಹಿಂದೆ ಸಬರಮತಿ ಎಕ್ಸ್‌ಪ್ರೆಸ್‌ ದುರಂತದ ಬಗೆಗಿನ ಕಥಾ ಹಂದರವನ್ನಿಟ್ಟುಕೊಂಡು ತೆರೆಕಂಡಿರುವ ʻದಿ ಸಬರಮತಿ ರಿಪೋರ್ಟ್‌ʼ(The Sabaramati Report) ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನ ಚಿತ್ರತಂಡಕ್ಕೆ ಶುಭ ಹಾರೈಸಿದ್ದ ಪ್ರಧಾನಿ ನರೇಂದ್ರ ಮೋದಿ(Narendra Modi) ಕೂಡ ʻದಿ ಸಬರಮತಿ ರಿಪೋರ್ಟ್‌ʼ ಚಿತ್ರ ವೀಕ್ಷಿಸಲಿದ್ದಾರೆ.

ಇಂದು ಡಿಸೆಂಬರ್ 2 ರಂದು ಸಂಜೆ 4 ಗಂಟೆಗೆ ಸಂಸತ್ತಿನಲ್ಲಿ “ದಿ ಸಬರಮತಿ ವರದಿ” ಚಿತ್ರದ ವಿಶೇಷ ಪ್ರದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಸಂಸದರು ಭಾಗವಹಿಸಲಿದ್ದಾರೆ. 2002 ರಲ್ಲಿ ಗೋಧ್ರಾ ರೈಲು ದುರಂತಕ್ಕೆ ಕಾರಣವಾದ ಘಟನೆಗಳನ್ನು ಕೇಂದ್ರೀಕರಿಸುವ ಚಲನಚಿತ್ರವನ್ನು ಪ್ರಧಾನಿ ಮೋದಿ ಈ ಹಿಂದೆ ಶ್ಲಾಘಿಸಿದ್ದರು ಮತ್ತು “ನಕಲಿ ನಿರೂಪಣೆಯು ಸೀಮಿತ ಅವಧಿಯವರೆಗೆ ಮಾತ್ರ ಇರುತ್ತದೆ” ಎಂದು ಹೇಳಿದ್ದರು. ಇದೀಗ ಸಂಸತ್‌ನಲ್ಲೇ ಸಿನಿಮಾವನ್ನು ಪ್ರಧಾನಿ ಮೋದಿ ವೀಕ್ಷಿಸಲಿದ್ದಾರೆ.

ಫೆಬ್ರವರಿ 27, 2002 ರಂದು ಸಬರಮತಿ ಎಕ್ಸ್‌ಪ್ರೆಸ್‌ನಲ್ಲಿ ನಡೆದ ದುರಂತ ಘಟನೆ ಮತ್ತು ಅದು ಭಾರತದ ಸಾಮಾಜಿಕ-ಸಾಂಸ್ಕೃತಿ ಮೇಲೆ ಬೀರಿದ ಪರಿಣಾಮದ ಬಗ್ಗೆ ಯಾರಿಗೂ ತಿಳಿದಿರದ ಸತ್ಯವನ್ನು ಹೊರಹಾಕುತ್ತಾ ಕಥೆ ಸಾಗುತ್ತದೆ. ವಿಕ್ರಾಂತ್ ಮಾಸ್ಸಿ, ರಾಶಿ ಖನ್ನಾ ಮತ್ತು ರಿಧಿ ಡೋಗ್ರಾ ಅವರು ಈ ಸಿನಿಮಾದಲ್ಲಿ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಕ್ರಾಂತ್ ಮಾಸ್ಸಿ ಪತ್ರಕರ್ತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾವನ್ನು ಬಾಲಾಜಿ ಮೋಷನ್ ಪಿಕ್ಚರ್ಸ್ ಮತ್ತು ವಿಕಿರ್ ಫಿಲ್ಮ್ಸ್ ಪ್ರೊಡಕ್ಷನ್ ಪ್ರಸ್ತುತಪಡಿಸಿದ್ದು, ಧೀರಜ್ ಸರ್ನಾ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಶೋಭಾ ಕಪೂರ್, ಏಕ್ತಾ ಆರ್ ಕಪೂರ್, ಅಮುಲ್ ವಿ ಮೋಹನ್ ಮತ್ತು ಅಂಶುಲ್ ಮೋಹನ್ ನಿರ್ಮಿಸಿದ್ದಾರೆ. ನವೆಂಬರ್ 15, 2024 ರಂದು ತೆರೆಕಂಡಿದೆ.

ಏನಿದು ಸಬರಮತಿ ಎಕ್ಸ್‌ಪ್ರೆಸ್‌ ದುರಂತ?

2002 ಫೆಬ್ರವರಿ 27 ರಂದು ಅಯೋಧ್ಯೆಯಿಂದ ವಾರಣಾಸಿಗೆ ಹೋಗುತ್ತಿದ್ದ ಸಬರಮತಿ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ದಾಳಿ ನಡೆಸಲಾಯ್ತು. ಯಾತ್ರಾರ್ಥಿಗಳು ಸ್ವಯಂಸೇವಕರು ಸೇರಿದಂತೆ ರೈಲಿನಲ್ಲಿ ಸುಮಾರು 1,700 ಪ್ರಯಾಣಿಕರಿದ್ದರು. ರೈಲು , ಗೋಧ್ರಾ ಜಂಕ್ಷನ್ ರೈಲು ನಿಲ್ದಾಣವನ್ನು ದಾಟಿದ ನಂತರ ಸುಮಾರು 2,000 ಜನರ ಗುಂಪೊಂದು ರೈಲಿನಲ್ಲಿದ್ದವರ ಮೇಲೆ ದಾಳಿ ನಡೆಸಿತು. ಕಲ್ಲು ತೂರಾಟದಿಂದ ಆರಂಭವಾದ ಈ ಹಿಂಸೆ ಆ ರೈಲಿನ ಬೋಗಿಗಳಿಗೆ ಬೆಂಕಿ ಹಚ್ಚುವವರೆಗೂ ಮುಂದುವರೆಯಿತು. 4 ಬೋಗಿಗಳಿಗೆ ವ್ಯಾಪಿಸಿದ ಬೆಂಕಿಗೆ ಸಿಲುಕಿ 59 ಮಂದಿ ಸಜೀವ ದಹನವಾಗಿದ್ದರು. ಈ ಘಟನೆ ನಂತರ ನಾಗರಿಕ ನ್ಯಾಯಮಂಡಳಿಯು ಇದು ಬೆಂಕಿ ಆಕಸ್ಮಿಕ ಎಂದರೆ, ನಾನಾವತಿ-ಮೆಹ್ತಾ ಆಯೋಗವು 2008 ರ ವರದಿಯಲ್ಲಿ ಇದೊಂದು ಯೋಜಿತ ಪಿತೂರಿ ಎಂದಿತ್ತು

ಈ ಸುದ್ದಿಯನ್ನೂ ಓದಿ: The Sabarmati Report: ಉತ್ತರ ಪ್ರದೇಶದಲ್ಲೂ ‘ದಿ ಸಾಬರಮತಿ ರಿಪೋರ್ಟ್’ ತೆರಿಗೆ ಮುಕ್ತ; ಸಿಎಂ ಯೋಗಿ ಆದಿತ್ಯನಾಥ್‌ ಘೋಷಣೆ