Monday, 13th January 2025

Tirupti fire accident: ಕಾಲ್ತುಳಿತದ ಬೆನ್ನಲೇ ತಿಮ್ಮಪ್ಪನ ಸನ್ನಿಧಿಯಲ್ಲಿ ಅಗ್ನಿ ಅವಘಡ!

Tirupti fire accident

ಹೈದರಾಬಾದ್‌ : ಆಂಧ್ರಪ್ರದೇಶದ ತಿರುಪತಿಯ ತಿರುಮಲ ದೇವಾಲಯದಲ್ಲಿ ಇತ್ತೀಚೆಗೆ ಕಾಲ್ತುಳಿತ ಸಂಭವಿಸಿ (Tirupati Stampede) 6 ಜನ ಮೃತಪಟ್ಟಿದ್ದರು. ಇದೀಗ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಸೋಮವಾರ ಭಾರೀ ದುರಂತವೊಂದು ತಪ್ಪಿದೆ. ಲಡ್ಡು ಕೌಂಟರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. (Tirupti fire accident) ಬೆಂಕಿಯನ್ನು ಗಮನಿಸಿದ ದೇವಾಲಯದ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಿದ್ದಾರೆ.

ದೇವಸ್ಥಾನದ 47ನೇ ಲಡ್ಡು ಕೌಂಟರ್ ನಲ್ಲಿ ಬೆಂಕಿ ಹತ್ತಿಕೊಂಡಿತ್ತು. ವಿದ್ಯುತ್‌ ದೋಷದಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ. ಬೆಂಕಿ ಹರಡುತ್ತಿದ್ದಂತೆ ಭಕ್ತರು ಭಯಭೀತರಾಗಿ ಸ್ಥಳದಿಂದ ಓಡಿಹೋದರು.  ಆದರೆ ತಕ್ಷಣ ಕಾರ್ಯಪ್ರವೃತ್ತರಾದ ದೇವಾಲಯದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜನವರಿ 8ರಂದು ತಿರುಪತಿಯ ವೈಕುಂಠ ದ್ವಾರ ದರ್ಶನ ಟಿಕೆಟ್ ವಿತರಣಾ ಕೇಂದ್ರದ ಬಳಿ ಸಂಭವಿಸಿದ ಭೀಕರ ಕಾಲ್ತುಳಿತದ ಕೆಲವೇ ದಿನಗಳ ನಂತರ ಈ ಘಟನೆ ನಡೆದಿದೆ. ಜ.8 ರಂದು ಸಂಭವಿಸಿದ್ದ ಕಾಲ್ತುಳಿತದಲ್ಲಿ 6 ಮಂದಿ ಮೃತಪಟ್ಟಿದ್ದು , 48 ಜನ ಗಂಭೀರವಾಗಿ ಗಾಯಗೊಂಡಿದ್ದರು.

ಜನವರಿ 11 ರಂದು ಪ್ರಾರಂಭವಾಗಲಿರುವ 10 ದಿನಗಳ ವೈಕುಂಠ ದ್ವಾರ ದರ್ಶನಕ್ಕಾಗಿ ದೇಶಾದ್ಯಂತದ ಭಕ್ತರು ದೇವಾಲಯದಲ್ಲಿ ಜಮಾಯಿಸಿದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ವಿಶೇಷ ದರ್ಶನ ಟೋಕನ್‌ಗಾಗಿ ಸುಮಾರು 4000 ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು.ಸಾಮಾಜಿಕ ಜಾಲತಾಣಗಳಲ್ಲಿ ಬಂದ ವದಂತಿಯಿಂದ ಭಕ್ತರಲ್ಲಿ ಗೊಂದಲ ಮೂಡಿದೆ. ವದಂತಿಗಳಿಂದ ಗೊಂದಲಕ್ಕೆ ಒಳಗಾಗಿದ್ದ ಭಕ್ತರು ಏಕಾಏಕಿ ನುಗ್ಗಿದ್ದಾರೆ. ಗೇಟ್​ ಓಪನ್ ಮಾಡಿದ ಕೂಡಲೇ ನುಗ್ಗಿದ್ದರಿಂದ ದುರಂತ ನಡೆದಿದೆ. 

ಆರು ಜನರ ಸಾವಿಗೆ ಕಾರಣವಾದ ತಿರುಪತಿ ಕಾಲ್ತುಳಿತ ಪ್ರಕರಣದಲ್ಲಿ ನ್ಯಾಯಾಂಗ ತನಿಖೆ ನಡೆಸಲು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ದು ಅವರು ಗುರುವಾರ ನಿರ್ಧರಿಸಿದ್ದಾರೆ. ಟೋಕನ್‌ ವಿತರಣೆಯ ಪ್ರಕ್ರಿಯೆಯನ್ನು ಸರಾಗವಾಗಿ ನಡೆಯಲು ಸರಿಯಾಗಿ ಕ್ರಮವಹಿಸದ ಆರೋಪದ ಮೇಲೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸುತ್ತಿರುವುದಾಗಿ ಪ್ರಕಟಿಸಿದ್ದಾರೆ.

ಕಾಲ್ತುಳಿತಕ್ಕೆ ಸಿಲುಕಿ ಸಾವಿಗೀಡಾದವರ ಕುಟುಂಬಗಳಿಗೆ 25 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಇದೇ ಘಟನೆಯಲ್ಲಿ 33 ಜನರು ಗಾಯಗೊಂಡಿದ್ದು, ಅವರಿಗೆ ಎರಡು ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ಘೋಷಿಸಿದರು. ಗಾಯಗೊಂಡಿದ್ದ ಇಬ್ಬರಿಗೆ ಶುಕ್ರವಾರ ತಿರುಮಲದ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿರುವುದಾಗಿ ಚಂದ್ರಬಾಬು ನಾಯ್ಡು ಘೋಷಿಸಿದರು.

ಈ ಸುದ್ದಿಯನ್ನೂ ಓದಿ : Maha Kumbh Mela: ಮಹಾಕುಂಭ ಮೇಳದಲ್ಲಿ ತಲೆ ಎತ್ತಲಿದೆ ತಿರುಪತಿ ವೆಂಕಟೇಶ್ವರ ದೇವಾಲಯ

Leave a Reply

Your email address will not be published. Required fields are marked *