ಚೆನ್ನೈ: ರಾಜ್ಯದಲ್ಲಿ ಆನ್ ಲೈನ್ ಜೂಜಿಗೆ ಅಂತ್ಯ ಹಾಡಲು ನಿರ್ಧರಿಸಿರುವ ತಮಿಳುನಾಡು ಸರ್ಕಾರ, ಗುರುವಾರ ವಿಧಾನಸಭೆ ಅಧಿವೇಶನದಲ್ಲಿ ಈ ಕುರಿತ ತಿದ್ದುಪಡಿ ಕಾಯ್ದೆ ಮಂಡಿಸಿದೆ.
ತಮಿಳುನಾಡು ಡಿಸಿಎಂ ಪನ್ನೀರ್ ಸೆಲ್ವಂ ಕಾಯ್ದೆ ಮಂಡಿಸಿದ್ದು, ಈ ಪ್ರಕಾರ ಆನ್ ಲೈನ್ ಜೂಜಿನಲ್ಲಿ ತೊಡಗಿಕೊಂಡವರಿಗೆ ಐದು ಸಾವಿರ ರೂ. ದಂಡ ಹಾಗೂ ಆರು ತಿಂಗಳ ಜೈಲು ಶಿಕ್ಷೆ ಮತ್ತು ಆಟಗಳನ್ನು ಆಯೋಜಿಸುವವರಿಗೆ 10 ಸಾವಿರ ರೂಪಾಯಿ ದಂಡ ಹಾಗೂ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು ಎನ್ನಲಾಗಿದೆ.
ಕಂಪ್ಯೂಟರ್, ಮೊಬೈಲ್ ಯಾವುದೇ ಸಾಧನ ಅಥವಾ ಗೇಮಿಂಗ್ ಸಾಧನ ಬಳಸಿಕೊಂಡು ಆನ್ ಲೈನ್ ಆಟ ಆಡುವುದು ನಿಷೇಧಿತ ಎಂದು ಹೊಸ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ನವೆಂಬರ್ ನಲ್ಲಿಯೇ, ದುಡ್ಡು ಕೊಟ್ಟು ಆಡುವಂಥ ಎಲ್ಲ ಆನ್ ಲೈನ್ ಗೇಮಿಂಗ್ ಮೇಲೆ ನಿಷೇಧ ಹೇರಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಸಿಎಂ ಪಳನಿಸ್ವಾಮಿ ಆಶ್ವಾಸನೆ ನೀಡಿದ್ದರು.
ಆನ್ ಲೈನ್ ಜೂಜು ಪ್ರಚಾರ ಮಾಡುತ್ತಿದ್ದ ಸೆಲೆಬ್ರಿಟಿಗಳಿಗೂ ಮದ್ರಾಸ್ ಹೈ ಕೋರ್ಟ್ ನೋಟೀಸ್ ನೀಡಿತ್ತು. ಬಹುಭಾಷಾ ನಟ ಸುದೀಪ್, ಪ್ರಕಾಶ್ ರಾಜ್, ರಾಣಾ ದಗ್ಗುಬಾಟಿ, ನಟಿ ತಮನ್ನಾ ಭಾಟಿಯಾ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಂತಾದವರಿಗೆ ನೋಟಿಸ್ ಜಾರಿ ಮಾಡಿತ್ತು.
ಆಂಧ್ರಪ್ರದೇಶದಲ್ಲಿ ಆನ್ ಲೈನ್ ಗೇಮಿಂಗ್, ಆನ್ ಲೈನ್ ಬೆಟ್ಟಿಂಗ್ ನಿಷೇಧಿಸಲಾಗಿದೆ. ಇದೀಗ ತಮಿಳುನಾಡು ಕಾಯ್ದೆ ಜಾರಿಗೊಳಿಸಿದೆ.