Friday, 22nd November 2024

ಬಡ ಕುಟುಂಬದ ಹೆಣ್ಣುಮಗಳು ವೈದ್ಯೆಯಾಗಬೇಕೆನ್ನುವುದು ಈಗ ಅಸಾಧ್ಯವಲ್ಲ: ನರೇಂದ್ರ ಮೋದಿ

ಲಖನೌ: ಉತ್ತರ ಪ್ರದೇಶದ ಬಡ ಕುಟುಂಬದ ಹೆಣ್ಣುಮಗಳೊಬ್ಬಳು ವೈದ್ಯೆಯಾಗಬೇಕು ಎಂದುಕೊಂಡರೆ ಅದು ಈಗ ಅಸಾಧ್ಯವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಉತ್ತರ ಪ್ರದೇಶ ರಾಜ್ಯದಲ್ಲಿ ನಿರ್ಮಾಣವಾಗಿರುವ 9 ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವೈದ್ಯಕೀಯ ಕಾಲೇಜುಗಳು ಮಾತ್ರವಲ್ಲ, ವೈದ್ಯಕೀಯ ಶಿಕ್ಷಣದ ಸೀಟುಗಳನ್ನೂ ಹೆಚ್ಚಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿ, ಅನಾರೋಗ್ಯ ಕೇವಲ ಬಡವರಿಗೆ ಮಾತ್ರವಲ್ಲ ಯಾರನ್ನು ಬೇಕಾ ದರೂ ಕಾಡಬಹುದು. ನಮ್ಮ ಡಬಲ್ ಎಂಜಿನ್ ಸರ್ಕಾರವು ಉತ್ತರ ಪ್ರದೇಶದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದೆ. ಸಾವಿರಾರು ಜನೌಷಧಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಕ್ಯಾನ್ಸರ್ ಚಿಕಿತ್ಸೆ ಡಯಾಲಿಸಿಸ್ ಮತ್ತು ಹೃದ್ರೋಗ ಚಿಕಿತ್ಸೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು ಉತ್ತರ ಪ್ರದೇಶ ಮಾತ್ರವಲ್ಲ ಇಡೂಈ ದೇಶದಲ್ಲಿ ಹತ್ತಾರು ಅತ್ಯುತ್ತಮ ಆಸ್ಪತ್ರೆಗಳು ನಮ್ಮ ಸರ್ಕಾರ ಆರಂಭಿಸಿದೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬರುವ ಮೊದಲು ಉತ್ತರ ಪ್ರದೇಶದಲ್ಲಿ ಕೇವಲ 6 ವೈದ್ಯಕೀಯ ಕಾಲೇಜುಗಳಿದ್ದವು. ಈಗ 16 ಕಾಲೇಜುಗಳಿವೆ. ವೈದ್ಯಕೀಯ ಕಾಲೇಜುಗಳಲ್ಲಿ ಅತ್ಯುತ್ತಮ ಚಿಕಿತ್ಸೆ ಸಿಗುವುದು ಮಾತ್ರವಲ್ಲ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ತರಬೇತಿಯೂ ಸಿಗು ತ್ತದೆ. ದುರಾದೃಷ್ಟವಶಾತ್ ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಬಗ್ಗೆ ದೂರದೃಷ್ಟಿಯ ಯೋಜನೆಗಳನ್ನೇ ರೂಪಿಸಿರಲಿಲ್ಲ ಎಂದು ಹಿಂದಿನ ಸರ್ಕಾರಗಳ ಬಗ್ಗೆ ದೂರಿದರು.

ಸಬ್​ ಕಾ ಸಾಥ್, ಸಬ್​ ಕಾ ವಿಕಾಸ್ ಜೊತೆಗೆ ಸಬ್​ ಕಾ ಪ್ರಯಾಸ್ (ಎಲ್ಲರ ಜೊತೆಗೆ, ಎಲ್ಲರ ವಿಕಾಸ ಮತ್ತು ಎಲ್ಲರ ಪರಿಶ್ರಮ) ಸಹ ಅಗತ್ಯ ಎಂದು ಮೋದಿ ಹೇಳಿದರು. ಈವರೆಗೆ ಸಬ್​ ಕಾ ಸಾಥ್-ಸಬ್​ ಕಾ ವಿಕಾಸ್ ಎಂದಷ್ಟೇ ಹೇಳುತ್ತಿದ್ದ ಮೋದಿ ಇದೀಗ ಸಬ್​ ಕಾ ಪ್ರಯಾಸ್ ಎಂದು ಹೊಸ ಪದಗುಚ್ಛವನ್ನು ಜೋಡಿಸಿದ್ದು ಜನರ ಗಮನಸೆಳೆಯಿತು. ಜನರು ಈ ಘೋಷಣೆ ಯನ್ನು ಪುನರುಚ್ಚರಿಸಿ ಬೆಂಬಲಿಸಿದರು.

ಉತ್ತರ ಪ್ರದೇಶದಲ್ಲಿ 9 ಹೊಸ ವೈದ್ಯಕೀಯ ಕಾಲೇಜುಗಳ ಮೂಲಕ 2,500 ಹಾಸಿಗೆಳ ಆಸ್ಪತ್ರೆಗಳು ಆರಂಭವಾಗಲಿವೆ. ಸುಮಾರು 5000 ಮಂದಿ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ವೃತ್ತಿಪರ ತರಬೇತಿ ಸಿಗಲಿದೆ. ಯೋಗಿ ಆದಿತ್ಯನಾಥ್ ಅಧಿಕಾರ ಅವಧಿಯಲ್ಲಿ ಉತ್ತರ ಪ್ರದೇಶ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ ಎಂದು ತಿಳಿಸಿದರು.

ಈ ಹೊಸ 9 ವೈದ್ಯಕೀಯ ಕಾಲೇಜುಗಳುಸಿದ್ಧಾರ್ಥನಗರ, ಇಟಾ, ಹರ್ದೋಯಿ, ಪ್ರತಾಪಗಡ, ಫತೇಪುರ, ದೆರಾಯ್, ಘಾಜಿಪುರ, ಮಿರ್ಝಾಪುರ ಮತ್ತು ಜೌನ್​ಪುರ್​ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಲಿವೆ.