Saturday, 4th January 2025

Traffic Challans: ಹೊಸ ವರ್ಷದ ಮುನ್ನಾ ದಿನ ಸಂಚಾರ ಪೊಲೀಸರಿಂದ ಭರ್ಜರಿ ಬೇಟೆ; ಮುಂಬೈಯಲ್ಲಿ 17,800 ಪ್ರಕರಣ ದಾಖಲು

Traffic Challans

ಮುಂಬೈ: ಹೊಸ ವರ್ಷ (New Year)ದ ಮುನ್ನಾದಿನದಂದು ಮುಂಬೈಯಲ್ಲಿ ಸಂಚಾರ ವ್ಯವಸ್ಥೆಯ ಮೇಲೆ ಹದ್ದಿನ ಕಣ್ಣು ನೆಟ್ಟಿದ್ದ ಟ್ರಾಫಿಕ್‌ ಪೊಲೀಸರು ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 89 ಲಕ್ಷ ರೂ.ಗಳ ಚಲನ್‌ ನೀಡಿದ್ದಾರೆ. ರಸ್ತೆಯಲ್ಲಿ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ವಿಶೇಷ ನಿಗಾ ಇಟ್ಟಿದ್ದ ಸಿಟಿ ಪೊಲೀಸರು ಮುಂಬೈ ಒಂದರಲ್ಲೇ ಸಂಚಾರ ನಿಯಮದ 17,800 ಪ್ರಕರಣಗಳಿಗೆ ಇ-ಚಲನ್‌ ಮಂಜೂರು ಮಾಡಿದ್ದಾರೆ (Traffic Challans).

ನಗರದ ಸಂಚಾರ ಪೊಲೀಸರು ತಪ್ಪಿತಸ್ಥ ಚಾಲಕರಿಗೆ ದಂಡ ವಿಧಿಸುವ ವಿವಿಧ ಅಪರಾಧಗಳನ್ನು ಪಟ್ಟಿ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ 2,893 ಪ್ರಕರಣಗಳು, ಹೆಲ್ಮೆಟ್ ಇಲ್ಲದೆ ಸವಾರಿ ಮಾಡಿದ 1,923 ಪ್ರಕರಣಗಳು ಮತ್ತು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ 1,731 ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ. ಸಾರ್ವಜನಿಕ ಸಾರಿಗೆ ವಾಹನಗಳನ್ನು ಓಡಿಸಲು ನಿರಾಕರಿಸಿದ 1,976 ಪ್ರಕರಣಗಳನ್ನೂ ಪಟ್ಟಿಯಲ್ಲಿ ಸೇರಿಸಲಾಗಿದೆ.

ವೇಗದ ಮಿತಿ ಉಲ್ಲಂಘನೆಗೆ ಸಂಬಂಧಿಸಿ 842 ಚಲನ್‌ ಮತ್ತು ಸೀಟ್ ಬೆಲ್ಟ್ ಇಲ್ಲದೆ ವಾಹನ ಚಲಾಯಿಸಿದ ಪ್ರಕರಣಗಳಿಗೆ 432 ಚಲನ್ ನೀಡಲಾಗಿದೆ. ಮದ್ಯಪಾನ ಸೇವಿಸಿ ವಾಹನ ಚಲಾಯಿಸಿದ್ದಕ್ಕಾಗಿ ಮತ್ತು ವಾಹನ ಚಲಾಯಿಸುವಾಗ ಫೋನ್ ಬಳಸಿದ ಒಟ್ಟು 153 ಪ್ರಕರಣ ದಾಖಲಾಗಿದೆ. ತ್ರಿಬಲ್‌ ರೈಡ್‌ ಮತ್ತು ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸಿದ್ದಕ್ಕಾಗಿ ಕ್ರಮವಾಗಿ 123 ಮತ್ತು 40 ಚಲನ್ ಜಾರಿ ಮಾಡಲಾಗಿದೆ. ಅಪಾಯಕಾರಿ ಚಾಲನೆಗಾಗಿ 2 ಚಲನ್ ನೀಡಲಾಗಿದೆ. ಡಿ. 31ರಂದು ರಾತ್ರಿ ನೀಡಲಾದ ಚಲನ್‌ಗಳ ಒಟ್ಟು ಮೊತ್ತ 89,19,750 ರೂ.

8 ಹೆಚ್ಚುವರಿ ಆಯುಕ್ತರು, 29 ಉಪ ಆಯುಕ್ತರು, 53 ಸಹಾಯಕ ಆಯುಕ್ತರು, 2184 ಇನ್ಸ್‌ಪೆಕ್ಟರ್‌ ಮತ್ತು 12,000ಕ್ಕೂ ಹೆಚ್ಚು ಕಾನ್ಸ್‌ಟೇಬಲ್‌ಗಳನ್ನು ಮುಂಬೈಯಾದ್ಯಂತ ನಿಯೋಜಿಸಲಾಗಿತ್ತು. ಹಲವು ಕಡೆಗಳಲ್ಲಿ ಚೆಕ್‌ಪಾಯಿಂಟ್‌ ಅಳವಡಿಸಿ ವಾಹನ ಚಾಲಕರ ಮೇಲೆ ನಿಗಾ ಇಡಲಾಗಿತ್ತು. ಇನ್ನು ದೇಶದ ಪ್ರಮುಖ ನಗರಗಳಾದ ದಿಲ್ಲಿ, ಬೆಂಗಳೂರು, ಚೆನ್ನೈ, ಕೋಲ್ಕತಾ ಮುಂತಾದ ಕಡೆಗಳಲ್ಲಿಯೂ ಹೊಸ ವರ್ಷದ ಪ್ರಯುಕ್ತ ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದರು.

ಈ ಸುದ್ದಿಯನ್ನೂ ಓದಿ: New Year Celebration: ಹೊಸ ವರ್ಷಕ್ಕೆ ಅದ್ಧೂರಿ ವೆಲ್‌ಕಮ್‌; ಭಾರತ ಸೇರಿ ವಿಶ್ವದಾದ್ಯಂತ ಆಚರಣೆ