Wednesday, 27th November 2024

Tragic Accident :ಡ್ರೈವಿಂಗ್‌ ವೇಳೆ ನಿದ್ದೆಗೆ ಜಾರಿದ ಚಾಲಕ; ಲಾರಿಗೆ ಕಾರು ಡಿಕ್ಕಿ- ಡೆಡ್ಲಿ ಆಕ್ಸಿಡೆಂಟ್‌ನಲ್ಲಿ ಐವರು ವೈದ್ಯರ ದುರ್ಮರಣ

ಲಖನೌ :ಡ್ರೈವಿಂಗ್‌ ವೇಳೆ ಚಾಲಕ ನಿದ್ದೆಗೆ ಜಾರಿದ ಪರಿಣಾಮವಾಗಿ ಲಾರಿಗೆ ಕಾರು ಡಿಕ್ಕಿ ಹೊಡೆದಿದ್ದು, ಐವರು ವೈದ್ಯರು ದುರ್ಮರಣಕ್ಕೀಡಾಗಿದ್ದಾರೆ. ಇಂದು ಮುಂಜಾನೆ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ (Expressway) ಈ ದುರ್ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಒಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ (Tragic Accident). ಅಪಘಾತಕ್ಕೀಡಾದವರು ಉತ್ತರ ಪ್ರದೇಶದ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ (University of Medical Sciences) ಸ್ನಾತಕೋತ್ತರ ವಿಭಾಗದಲ್ಲಿನ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ. ಲಕ್ನೋದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಲಾರಿಗೆ ಸ್ಕಾರ್ಪಿಯೋ ಕಾರು ಡಿಕ್ಕಿ ಹೊಡೆದಿತ್ತು ಎನ್ನಲಾಗಿದೆ.

ಮುಂಜಾನೆ 3.30ರ ಸುಮಾರಿಗೆ ಅವರು ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೋ ಎಸ್‌ಯುವಿ ನಿಯಂತ್ರಣ ತಪ್ಪಿ ಡಿವೈಡರ್‌ ಮುರಿದು ಎದುರುಗಡೆಯಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿಯು ನಿದ್ರೆಗೆ ಜಾರಿದ್ದ ಕಾರಣ ಅಪಘಾತ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಪಘಾತವಾದ ಕೂಡಲೇ ಆರು ಮಂದಿಯನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಲಾಗಿದ್ದು, ಐವರು ಸಾವನ್ನಪ್ಪಿದ್ದಾರೆ. ಒಬ್ಬರ ತಲೆಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅಪಘಾತದಲ್ಲಿ ಮೃತರಾದವರನ್ನು ಡಾ ಅನಿರುದ್ಧ್ ವರ್ಮಾ, ಡಾ ಸಂತೋಷ್ ಕುಮಾರ್ ಮೌರ್ಯ, ಡಾ ಜೈವೀರ್ ಸಿಂಗ್, ಡಾ ಅರುಣ್ ಕುಮಾರ್ ಮತ್ತು ಡಾ ನಾರ್ದೇವ್ ಎಂದು ಗುರುತಿಸಲಾಗಿದೆ.

ತಿರ್ವಾ ವಲಯದ ಅಧಿಕಾರಿ ಪ್ರಿಯಾಂಕಾ ಬಾಜಪೈ ಅಪಘಾತದ ಕುರಿತು ಮಾತನಾಡಿದ್ದಾರೆ. “ಇಂದು ಮುಂಜಾನೆ 3.30ರ ಸುಮಾರಿಗೆ ಲಕ್ನೋದಿಂದ ಆಗ್ರಾ ಕಡೆಗೆ ಹೊರಟಿದ್ದ ಸ್ಕಾರ್ಪಿಯೋ ಎಸ್‌ಯುವಿ ಬ್ಯಾಲೆನ್ಸ್ ಕಳೆದುಕೊಂಡು ಡಿವೈಡರ್ ಮುರಿದು ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಸ್ಕಾರ್ಪಿಯೋದಲ್ಲಿದ್ದ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅವರೆಲ್ಲರೂ ಸೈಫೈ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂಬುದು ತಿಳಿದುಬಂದಿದೆ. ನಾವು ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದೇವೆ. ಈ ಕುರಿತು ಮತ್ತಷ್ಟು ತನಿಖೆ ನಡೆಯುತ್ತಿದೆ” ಎಂದರು. ಅಪಘಾತ ನಡೆದ ಸ್ಥಳ ಮತ್ತು ಭೀಕರವಾಗಿ ಸಾವನ್ನಪ್ಪಿದ ವೈದ್ಯರ ಮೃತ ದೇಹಗಳು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.

ಡೆಹ್ರಾಡೂನಲ್ಲಿ ಭೀಕರ ರಸ್ತೆ ಅಪಘಾತ

ಹದಿನೈದು ದಿನಗಳ ಹಿಂದೆಯಷ್ಟೇ ಉತ್ತರಾಖಂಡ ಡೆಹ್ರಾಡೂನ್‌ನ ಓಎನ್‌ಜಿಸಿ ಕ್ರಾಸಿಂಗ್‌ ಸಮೀಪ ಭಯಾನಕ ರಸ್ತೆ ಅಪಘಾತವೊಂದು ಸಂಭವಿಸಿತ್ತು. ಸರಕು ಸಾಗಾಣಿಕೆಯ ಟ್ರಕ್ಕೊಂದು ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಆರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಕಾರಿನಲ್ಲಿ ಒಟ್ಟು ಏಳು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿತ್ತು, ಪ್ರಾಣ ಕಳೆದುಕೊಂಡ ಆರು ವಿದ್ಯಾರ್ಥಿಗಳ ಪೈಕಿ ಮೂವರು ಹುಡುಗರು ಮತ್ತು ಮೂವರು ಹುಡುಗಿಯರು ಎಂದು ಗುರುತಿಸಲಾಗಿತ್ತು. ಪ್ರಾಣಾಪಾಯದಿಂದ ಪಾರಾದ ಒಬ್ಬ ವಿದ್ಯಾರ್ಥಿಯ ಸ್ಥಿತಿ ತೀರಾ ಗಂಭೀರವಾಗಿದ್ದ ಕಾರಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಟ್ರಕ್‌ ರಭಸವಾಗಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ನಜ್ಜುಗುಜ್ಜಾಗಿ ಎರಡು ಭಾಗಗಳಾಗಿ ತುಂಡಾಗಿತ್ತು. ನಜ್ಜುಗುಜ್ಜಾದ ಕಾರಿನೊಳಗಿಂದಲೇ ಮೃತ ದೇಹಗಳನ್ನು ಹೊರಕ್ಕೆ ತೆಗೆಯಲಾಗಿತ್ತು. ಗುರುತೇ ಸಿಗದಷ್ಟರಮಟ್ಟಿಗೆ ದೇಹಗಳು ಛಿದ್ರಗೊಂಡು ರಕ್ತಸಿಕ್ತವಾಗಿದ್ದವು. ಅಪಘಾತ ನಡೆದ ಸ್ಥಳದಿಂದ ಟ್ರಕ್‌ ಚಾಲಕ ನಾಪತ್ತೆಯಾಗಿದ್ದ.

ಈ ಸುದ್ದಿಯನ್ನೂ ಓದಿ: Road Accident: ಆಟೋ- ಕಾರು ಅಪಘಾತ, ಇಬ್ಬರು ಸಾವು