Friday, 20th September 2024

Train Tragedy : ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ಬಿದ್ದ ಬಾಲಕ; ಮುಂದೇನಾಯಿತು ನೋಡಿ…

Train Tragedy

ಬೆಂಗಳೂರು : ಮಕ್ಕಳ ಜೊತೆ ಪ್ರಯಾಣ ಬೆಳೆಸುವಾಗ ತಮ್ಮ ಮಕ್ಕಳ ಬಗ್ಗೆ ಪೋಷಕರಿಗೆ ಕಾಳಜಿ ಇರಬೇಕು. ಮಕ್ಕಳು ಪ್ರಯಾಣದ ಮಧ್ಯದಲ್ಲಿ ಎಲ್ಲಿಗಾದರೂ ಹೋಗುವುದಾದರೆ ಪೋಷಕರು ಅವರ ಜೊತೆಗೆ ಹೋಗಬೇಕು. ಇಲ್ಲವಾದರೆ ಇದರಿಂದ ಗಂಭೀರ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಇದೀಗ ಅಂತಹದೊಂದು ಘಟನೆ ರೈರಾಖೋಲ್ ರೈಲ್ವೆ (Train Tragedy) ನಿಲ್ದಾಣದ ಬಳಿ ನಡೆದಿದೆ. ಬುಧವಾರ ಮುಂಜಾನೆ ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ 10 ವರ್ಷದ ಬಾಲಕ ಆಕಸ್ಮಿಕವಾಗಿ ಹೊರಗೆ ಬಿದ್ದಿದ್ದಾನೆ. ಈ ಘಟನೆಯಲ್ಲಿ ಆತ ಪವಾಡವೆಂಬಂತೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೆಲವು ಗಂಟೆಗಳ ನಂತರ ಆತನನ್ನು ನೋಡಿದ ಆರ್‌ಪಿಎಫ್ ಸಿಬ್ಬಂದಿ ಆತನನ್ನು ರಕ್ಷಿಸಿದ್ದಾರೆ. ಆದರೆ ಆತನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂಬುದಾಗಿ ತಿಳಿದುಬಂದಿದೆ.

ವರದಿಗಳ ಪ್ರಕಾರ, ಪ್ರಿತಿಶ್ ಪ್ರಜ್ಞಾನ್ ಹೋಟಾ ಎಂಬ ಹೆಸರಿನ ಬಾಲಕ ತನ್ನ ಕುಟುಂಬದೊಂದಿಗೆ ದುರ್ಗ್-ಪುರಿ ಎಕ್ಸ್‌ಪ್ರೆಸ್‌ನಲ್ಲಿ ಭುವನೇಶ್ವರಕ್ಕೆ ಪ್ರಯಾಣಿಸುತ್ತಿದ್ದಾಗ ಮುಂಜಾನೆ 2 ಗಂಟೆ ಸುಮಾರಿಗೆ ಅವನ ಪೋಷಕರು ಮಲಗಿದ್ದ ಸಂದರ್ಭದಲ್ಲಿ ಪ್ರೀತೀಶ್ ಅವರಿಗೆ ತಿಳಿಸದೆ ಶೌಚಾಯಕ್ಕೆ ಹೋಗಿದ್ದಾನೆ. ಆದರೆ ಅಲ್ಲಿಂದ ಮರಳಿ ಬರುವಾಗ ಬೋಗಿಯ ಬಾಗಿಲು ತೆರೆದಿದ್ದರಿಂದ ವೇಗವಾಗಿ ಬೀಸಿದ್ದರಿಂದ ರೈರಾಖೋಲ್ ರೈಲ್ವೆ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿರುವ ಅಂಗರ್ಪಾಡಾ ಗ್ರಾಮದ ಬಳಿ ರೈಲಿನಿಂದ ಕೆಳಗೆ ಬಿದ್ದಿದ್ದಾನೆ.

ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೂ ಅಲ್ಲಿಂದ ಬೇರೆ ಕಡೆ ಹೋಗಲು ದಾರಿ ಕಾಣದೆ ಕತ್ತಲಿನಲ್ಲಿ ಹಳಿಗಳಿಂದ ಕೆಲವು ಮೀಟರ್ ದೂರದಲ್ಲಿ ಕುಳಿತಿದ್ದ. ಒಂದು ಗಂಟೆಯ ನಂತರ, ಈ ಮಾರ್ಗದಲ್ಲಿ ರೈಲೊಂದು ಹಾದು ಹೋಗುವಾಗ ಅದರಲಿದ್ದವರು ಬಾಲಕನನ್ನು ಗಮನಿಸಿ ರೈರಾಖೋಲ್ ರೈಲ್ವೆ ನಿಲ್ದಾಣಕ್ಕೆ ಮಾಹಿತಿ ನೀಡಿದ್ದಾರೆ. ನಂತರ ಆರ್‌ಪಿಎಫ್ ತಂಡವು ಅಲ್ಲಿಗೆ ಬಂದು ಬಾಲಕನನ್ನು ರಕ್ಷಿಸಿದೆ.

ಮತ್ತೊಂದೆಡೆ, ಬಾಲಕ ಕಾಣೆಯಾಗಿರುವುದನ್ನು ನೋಡಿದ ಕುಟುಂಬವು ಗಾಬರಿಗೊಂಡು ಧೆಂಕನಲ್ ನಿಲ್ದಾಣದಲ್ಲಿ ಇಳಿದು ಅಲ್ಲಿ ವಿಚಾರಿಸಿದಾಗ, ಬಾಲಕನನ್ನು ರೈರಾಖೋಲ್ ನಿಲ್ದಾಣದಲ್ಲಿ ರಕ್ಷಿಸಲಾಗಿದೆ ಎಂದು ಅವರಿಗೆ ತಿಳಿಸಿದ್ದಾರೆ. ತರುವಾಯ, ಕುಟುಂಬವು ರೈರಾಖೋಲ್‍ಗೆ ಹಿಂತಿರುಗಿ ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನನ್ನು ಭೇಟಿ ಮಾಡಿದ್ದಾರೆ.

ಇದನ್ನೂ ಓದಿ:ಇಬ್ಬರು ಮಕ್ಕಳ ಶವಗಳನ್ನು ಹೆಗಲ ಮೇಲೆ ಹೊತ್ತು 15 ಕಿ.ಮೀ ನಡೆದ ಪೋಷಕರು; ಹೃದಯ ಕರಗಿಸುವ ವಿಡಿಯೊ

ರೈರಾಖೋಲ್‌ನಲ್ಲಿ ಬೀಡುಬಿಟ್ಟಿರುವ ಆರ್‌ಪಿಎಫ್ ಅಧಿಕಾರಿಯೊಬ್ಬರು, “ಬುಧವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಬಾಲಕನನ್ನು ರಕ್ಷಿಸಲಾಗಿದೆ. ಕೆಳಗೆ ಬಿದ್ದ ಕಾರಣ ಅವನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೇರೆ ಯಾವುದೇ ಸಮಸ್ಯೆ ಆಗಿರಲಿಲ್ಲ”ಎಂದು ತಿಳಿಸಿದ್ದಾರೆ.