Saturday, 14th December 2024

ಜನ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ: ಪ್ರಾಣಹಾನಿ ಸಂಭವಿಸಿಲ್ಲ

ಭುವನೇಶ್ವರ್: ಭುವನೇಶ್ವರ್-ಹೌರಾ ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಗುರುವಾರ ಬೆಳಗ್ಗೆ ಕಟಕ್ ನಿಲ್ದಾಣದಲ್ಲಿ ನಡೆದಿದೆ.

ರೈಲಿನ ಒಂದು ಬೋಗಿಯ ಕೆಳಗಿದ್ದ ಚಕ್ರದ ಬಳಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಳ್ಳಲಾರಂಭಿಸಿದೆ. ಬಳಿಕ ಗಾಬರಿಗೊಂಡ ಪ್ರಯಾಣಿಕರು ಹಿರಿಯ ರೈಲ್ವೆ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ರೈಲ್ವೆ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಭುವನೇಶ್ವರ-ಹೌರಾ ಜನಶತಾಬ್ದಿ ಎಕ್ಸ್‌ಪ್ರೆಸ್ ಕಟಕ್ ನಿಲ್ದಾಣದಲ್ಲಿ ನಿಂತ ನಂತರವೇ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬೆಂಕಿಯನ್ನು ಹತೋಟಿಗೆ ತರಲಾಗಿದ್ದು, ಭಾರಿ ದುರಂತ ತಪ್ಪಿದೆ.

ಜನಶತಾಬ್ದಿ ಎಕ್ಸ್‌ಪ್ರೆಸ್ ಇಂದು ಬೆಳಗ್ಗೆ ಕಟಕ್ ನಿಲ್ದಾಣವನ್ನು ತಲುಪಿದ್ದು, ಆ ಸಮಯದಲ್ಲಿ ಹಲವಾರು ಪ್ರಯಾಣಿಕರು ಕೋಚ್ ಅಡಿಯಲ್ಲಿನ ರೈಲಿನ ಚಕ್ರಗಳ ಬಳಿ ಬೆಂಕಿಯನ್ನು ಗಮನಿಸಿದ್ದಾರೆ. ಬಳಿಕ, ಸಮಯ ವ್ಯರ್ಥ ಮಾಡದೇ ಅಗ್ನಿಶಾಮಕ ದಳ ಹಾಗೂ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. 45 ನಿಮಿಷಗಳಲ್ಲಿ ಪರಿಸ್ಥಿತಿ ಹತೋಟಿಗೆ ತರಲಾಯಿತು. ರೈಲು ಭುವನೇಶ್ವರದಿಂದ ಹೌರಾಕ್ಕೆ ಹೋಗುತ್ತಿತ್ತು, ಯಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಜೂನ್‌ನಲ್ಲಿ ಸಿಕಂದರಾಬಾದ್ – ಅಗರ್ತಲಾ ಎಕ್ಸ್‌ಪ್ರೆಸ್‌ನಲ್ಲಿ ಬ್ರಹ್ಮಪುರ ರೈಲು ನಿಲ್ದಾಣದ ಬಳಿ ಬೆಂಕಿ ಕಾಣಿಸಿಕೊಂಡಿತ್ತು.