Monday, 6th January 2025

Triple Talaq: ವಿದೇಶದಲ್ಲಿದ್ದುಕೊಂಡೇ ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ ಪತಿ; ಮುಂಬೈ ಪೊಲೀಸರ ಮೊರೆ ಮಹಿಳೆ

Triple Talaq

ಮುಂಬೈ: ವರದಕ್ಷಿಣೆ ಬೇಡಿಕೆಗಾಗಿ (Dowry Case) ಪತಿ ಮತ್ತು ಆತನ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಜತೆಗೆ ಪತಿ ವಿದೇಶದಲ್ಲಿದ್ದುಕೊಂಡು ತನಗೆ ವಿಚ್ಛೇದನ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಮಹಿಳೆಯ ಪತಿ ಇಂಗ್ಲೆಂಡ್‌ನಲ್ಲಿದ್ದು ಆತ ಈಕೆಗೆ ವಿಡಿಯೊ ಕರೆ ಮೂಲಕ ತ್ರಿವಳಿ ತಲಾಖ್‌ (Triple Talaq) ನೀಡಿದ್ದಾನೆ ಎಂದು ತಿಳಿದು ಬಂದಿದೆ. ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಮಸೂದೆ ಮತ್ತು ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ಆಕೆಯ ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಹಿಳೆ ಮುಂಬೈನ ಸೀವುಡ್ಸ್ ನಿವಾಸಿ. ಆಕೆ ಪೊಲೀಸರಿಗೆ ದೂರು ನೀಡಿದ್ದು, ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಆರೋಪ ಹೊರಿಸಿದ್ದಾರೆ. ಅವರ ಪತಿ ಪತಿ ಇಂಗ್ಲೆಂಡ್‌ನಲ್ಲಿದ್ದು ಆತ ವಿಡಿಯೊ ಕರೆ ಮೂಲಕ ತ್ರಿವಳಿ ತಲಾಖ್‌ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಮಹಿಳೆ 2022ರಲ್ಲಿ ಆಕಿಬ್ ಭಟಿವಾಲಾ ಅವರೊಂದಿಗೆ ಮುಸ್ಲಿಂ ಪದ್ಧತಿಯಂತೆ ವಿವಾಹವಾಗಿರುವುದಾಗಿ ವಿವರಿಸಿದ್ದಾರೆ. ಆರಂಭದಲ್ಲಿ ಎಲ್ಲವೂ ಸರಿಯಾಗಿ ಇತ್ತು. ನಂತರ ವಡಾಲಾದಲ್ಲಿರುವ ಅತ್ತೆಯ ನಿವಾಸಕ್ಕೆ ತೆರಳಿದ ನಂತರ ಕಿರುಕುಳ ಪ್ರಾರಂಭವಾಯಿತು. ಅತ್ತೆ ಕೂಡ ತಮ್ಮೊಂದಿಗೆ ಇಂಗ್ಲೆಂಡ್‌ಗೆ ಬಂದಿದ್ದರು. ಅಲ್ಲಿಂದ ಅವರು ವರದಕ್ಷಿಣೆ ಕಿರುಕುಳ ಪ್ರಾರಂಭಿಸಿದ್ದರು ಎಂದು ಹೇಳಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿ ತನ್ನ ಚಿನ್ನಾಭರಣಗಳನ್ನು ಮುಟ್ಟುಗೋಲು ಹಾಕಿಕೊಂಡು ಭಾರತಕ್ಕೆ ವಾಪಸ್ ಕಳುಹಿಸಿದ್ದು, ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾರೆ. ಇದಾದ ಬಳಿಕ ವಿಡಿಯೊ ಕರೆಯಲ್ಲಿ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇಷ್ಟಾದರೂ ತಾನು ಗಂಡನ ಮನೆಗೆ ಹಿಂದಿರುಗಿದ ನಂತರವೂ ಅವರು ಮನೆ ಒಳಗೆ ಪ್ರವೇಶ ನಿರಾಕರಿಸಿದರು ಎಂದು ಮಾಹಿತಿ ನೀಡಿದ್ದಾರೆ. ಮುಂಬೈ ಪೊಲೀಸರು ಪತಿ ಮತ್ತು ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯೇಕ ಘಟನೆಯಲ್ಲಿ ತನ್ನ ಬಾಸ್ ಜತೆ ಮಲಗಲು ಎರಡನೇ ಪತ್ನಿ ಒಪ್ಪದ ಕಾರಣ ವ್ಯಕ್ತಿಯೊಬ್ಬ ಆಕೆಗೆ ತ್ರಿವಳಿ ತಲಾಖ್ ನೀಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಡಿಸೆಂಬರ್ 19ರಂದು 45 ವರ್ಷದ ವ್ಯಕ್ತಿಯೊಬ್ಬ ತನ್ನ 28 ವರ್ಷದ ಹೆಂಡತಿಯನ್ನು ಪಾರ್ಟಿಯಲ್ಲಿ ತನ್ನ ಬಾಸ್ ಜೊತೆ ಇರಲು ಹೇಳಿದ್ದ. ಅಷ್ಟೇ ಅಲ್ಲದೆ ಎರಡನೇ ಪತ್ನಿ ಬಳಿ ಆಕೆಯ ಪೋಷಕರ ಮನೆಯಿಂದ 15 ಲಕ್ಷ ರೂ. ತರುವಂತೆ ಒತ್ತಡ ಹಾಕಿದ್ದ. ಆಕೆಗೂ ಆತ ತಲಾಖ್ ನೀಡಿದ್ದಾನೆ. ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2), 351(2), 351(3) ಮತ್ತು 352 ಮತ್ತು ಮುಸ್ಲಿಂ ಮಹಿಳೆಯರ (ಮದುವೆಯ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿಯನ್ನೂ ಓದಿ : Self Harming: ದೆಹಲಿ ಕೆಫೆ ಮಾಲೀಕನ ಆತ್ಮಹತ್ಯೆ ಕೇಸ್‌ನಲ್ಲಿ ಬಿಗ್‌ ಅಪ್ಡೇಟ್‌! ವೈರಲಾದ ವಿಡಿಯೊದಲ್ಲಿ 2 ಕೋಟಿ ರೂ. ವಿಚಾರ ಬಯಲು