Thursday, 9th January 2025

Udit Narayan: ಗಾಯಕ ಉದಿತ್‌ ನಾರಾಯಣ್‌ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ; ಓರ್ವ ಬಲಿ

Udit Narayan

ಮುಂಬೈ: ಖ್ಯಾತ ಗಾಯಕ ಉದಿತ್ ನಾರಾಯಣ್(Udit Narayan) ವಾಸವಾಗಿರುವ ಅಪಾರ್ಟ್‌ಮೆಂಟ್‌ನಲ್ಲಿ ಸೋಮವಾರ(ಜ.6) ರಾತ್ರಿ ಭೀಕರ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಭೀಕರ ದುರ್ಘಟನೆಯಲ್ಲಿ ಓರ್ವ ಬಲಿಯಾಗಿದ್ದಾನೆ.

ಜನವರಿ 6 ರಂದು ರಾತ್ರಿ 9.15 ರ ಸರಿ ಸುಮಾರಿಗೆ ಅಂಧೇರಿಯ ಶಾಸ್ತ್ರಿನಗರದಲ್ಲಿರುವ ಪೆನ್ ಅಪಾರ್ಟ್‌ಮೆಂಟ್‌ನಲ್ಲಿ ಈ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ(Fire Caught)

ಸ್ಟೈಪೆನ್ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕೆಲವೇ ಕ್ಷಣದಲ್ಲಿ ಕಟ್ಟಡದ ಹಲವು ಮಹಡಿಗಳಿಗೆ ಬೆಂಕಿ ವೇಗವಾಗಿ ಹರಡಿದ್ದು, ನಿವಾಸಿಗಳು ಭಯದಲ್ಲಿ ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡ ವಿಚಾರ ತಿಳಿಯುತ್ತಿದ್ದಂತೆ ತಕ್ಷಣ ಅಗ್ನಿಶಾಮಕ ತಂಡ ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿದೆ. ಬಳಿಕ ಪರಿಸ್ಥಿತಿ ತಿಳಿಗೊಂಡಿದೆ. ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದು ಕಟ್ಟಡವನ್ನು ತೆರವುಗೊಳಿಸಿದ್ದಾರೆ.

ಓರ್ವ ವ್ಯಕ್ತಿ ಸಾವು

ವಿಕ್ಕಿ ಲಾಲ್ವಾನಿ ಎಂಬುವರು ತಮ್ಮ ಇನ್‌ಸ್ಟಾಗ್ರಾಮ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಗಾಯಕ ಉದಿತ್ ನಾರಾಯಣ್ ಅವರ ಪಕ್ಕದ ಮನೆಯವರಾದ ರಾಹುಲ್ ಮಿಶ್ರಾ ಎಂಬಾತ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ್ದಾರೆ. ಬೆಂಕಿ ಹೊತ್ತಿಕೊಂಡ ಬಳಿಕ ಮಿಶ್ರಾ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಚಿಕಿತ್ಸೆಗೆ ರಾಹುಲ್ ಮಿಶ್ರಾ ಸ್ಪಂದಿಸಿಲ್ಲ. ಚಿಕಿತ್ಸೆ ಫಲಿಸದೆ ಮಿಶ್ರಾ ಅವರು ಸಾವನ್ನಪ್ಪಿದ್ದಾರೆ. ಬೆಂಕಿ ಅವಘಡ ಸಂಭವಿಸಿದ್ದ ಈ ಕಟ್ಟಡದಲ್ಲಿ ವಾಸಿಸುತ್ತಿದ್ದ ಗಾಯಕ ಉದಿತ್ ನಾರಾಯಣ್ ಸುರಕ್ಷಿತವಾಗಿದ್ದಾರೆ . ಪಕ್ಕದ ಮನೆಯ ರಾಹುಲ್ ಮಿಶ್ರಾ ಸಾವಿಗೆ ಗಾಯಕ ಸಂತಾಪ ಸೂಚಿಸಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಇದು ವಿದ್ಯುತ್ ದೋಷದಿಂದ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಮಾನಸಿಕವಾಗಿ ನೊಂದಿದ್ದೇನೆ-ಉದಿತ್

ಅಪಾರ್ಟ್‌ಮೆಂಟ್‌ ಗೆ ಬೆಂಕಿ ತಗುಲಿದ ಸುಮಾರು ನಾಲ್ಕು ಗಂಟೆಗಳ ನಂತರ ಮಂಗಳವಾರ(ಜ.7) ಬೆಳಗಿನ ಜಾವ 1.49ಕ್ಕೆ ಬೆಂಕಿ ನಂದಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಉದಿತ್ ನಾರಾಯಣ್ ಹೇಳಿದ್ದಾರೆ. ”ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ನಾನು ಎ ವಿಂಗ್‌ನಲ್ಲಿ 11 ನೇ ಮಹಡಿಯಲ್ಲಿ ವಾಸವಿದ್ದೇನೆ. ಬಿ ವಿಂಗ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಾವೆಲ್ಲರೂ ಇಳಿದು ಮೂರ್ನಾಲ್ಕು ಗಂಟೆಗಳ ಕಾಲ ಕಟ್ಟಡದ ಹೊರಗಡೆ ನಿಂತುಕೊಂಡೆವು. ಇದು ತುಂಬಾ ಅಪಾಯಕಾರಿ, ಏನು ಬೇಕಾದರೂ ಆಗಬಹುದಿತ್ತು. ಈಗ ನಾವು ಸುರಕ್ಷಿತವಾಗಿದ್ದೇವೆ. ದೇವರಿಗೆ ಮತ್ತು ನಮ್ಮ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಉದಿತ್ ತಿಳಿಸಿದ್ದಾರೆ.‌

“ಈ ಘಟನೆಯು ನನ್ನ ಮೇಲೆ ಮಾನಸಿಕವಾಗಿ ಪರಿಣಾಮ ಬೀರಿದೆ. ನಾನು ನೊಂದಿದ್ದೇನೆ. ಇದರಿಂದ ಹೊರಬರಲು ಸ್ವಲ್ಪ ಸಮಯ ಬೇಕು. ಇಂಥ ಘಟನೆಯನ್ನು ಹತ್ತಿರದಿಂದ ನೋಡಿದಾಗ ಮಾತ್ರ ನಿಮಗೆ ಪರಿಸ್ಥಿತಿ ಅರ್ಥವಾಗುತ್ತದೆ” ಎಂದು ಗಾಯಕ ಉದಿತ್‌ ನಾರಾಯಣ್ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Shops caught fire: ಆಕಸ್ಮಿಕ ಬೆಂಕಿ: ಅಪಾರ ನಷ್ಟ

Leave a Reply

Your email address will not be published. Required fields are marked *