ನವದೆಹಲಿ: ಇಂದು (ಅಕ್ಟೋಬರ್ 3) ನಡೆದ ವಿಶೇಷ ಕೇಂದ್ರ ಸಚಿವ ಸಂಪುಟ ಸಭೆ (Union Cabinet)ಯಲ್ಲಿ ರೈಲ್ವೆ ಉದ್ಯೋಗಿಗಳಿಗೆ ಪ್ರಾಡಕ್ಟಿವಿಟಿ-ಲಿಂಕ್ಡ್ ಬೋನಸ್ (Productivity Linked Bonus-PLB) ನೀಡಲು ಅನುಮೋದನೆ ನೀಡಲಾಗಿದೆ. ಜತೆಗೆ ಪ್ರಮುಖ ಬಂದರು ಪ್ರಾಧಿಕಾರಗಳಿಗೆ ಪರಿಷ್ಕೃತ ಪ್ರಾಡಕ್ಟಿವಿಟಿ-ಲಿಂಕ್ಡ್ ರಿವಾರ್ಡ್ ಯೋಜನೆ (Revised productivity-linked reward)ಗೂ ಒಪ್ಪಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರೈಲ್ವೆ ನೌಕರರಿಗೆ 78 ದಿನಗಳ ವೇತನಕ್ಕೆ ಸಮಾನವಾದ ಪ್ರಾಡಕ್ಟಿವಿಟಿ-ಲಿಂಕ್ಡ್ ಬೋನಸ್ ನೀಡಲು 2,029 ಕೋಟಿ ರೂ.ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ವರದಿಯೊಂದು ತಿಳಿಸಿದೆ. ಇದರಿಂದ ಸುಮಾರು 12 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಈ ಬೋನಸ್ ಅನ್ನು ದಸರಾ ಮತ್ತು ದೀಪಾವಳಿ ರಜಾದಿನಗಳ ಮೊದಲು ವಿತರಿಸುವ ಸಾಧ್ಯತೆಯಿದೆ.
#WATCH | Union Minister Ashwini Vaishnaw says, "Productivity Linked Bonus for Railway employees of Rs 2,029 cr has been approved by the cabinet for the good performance of railways which will benefit 11,72,240 employees… The recruitment process for the vacancy of 58,642 is… pic.twitter.com/wpPpxuD2cG
— ANI (@ANI) October 3, 2024
2023ರಲ್ಲಿ ಭಾರತೀಯ ರೈಲ್ವೆ ಎಲ್ಲ ಗೆಜೆಟೆಡ್ ಅಲ್ಲದ ಉದ್ಯೋಗಿಗಳಿಗೆ 78 ದಿನಗಳ ವೇತನಕ್ಕೆ ಸಮಾನವಾದ ಬೋನಸ್ ನೀಡಿತ್ತು. ಈ ಬೋನಸ್ ಲೆಕ್ಕಾಚಾರವು ಸಾಮಾನ್ಯವಾಗಿ ಗ್ರೂಪ್ ಡಿ ನೌಕರರ ಕನಿಷ್ಠ ವೇತನವನ್ನು ಆಧರಿಸಿದೆ. ಆರನೇ ವೇತನ ಆಯೋಗದ ಪ್ರಕಾರ, ಕನಿಷ್ಠ ವೇತನ 7,000 ರೂ., ಇದರ ಪರಿಣಾಮವಾಗಿ ಸರಾಸರಿ ಬೋನಸ್ ಪಾವತಿ ಸುಮಾರು 18,000 ರೂ. ಆದಾಗ್ಯೂ ಏಳನೇ ವೇತನ ಆಯೋಗದ ಅಡಿಯಲ್ಲಿ ಕನಿಷ್ಠ ವೇತನವನ್ನು 18,000 ರೂ.ಗೆ ಹೆಚ್ಚಿಸಲಾಯಿತು.
ಹಿಂದಿನ ವರ್ಷ ಅಂದರೆ 2022ರಲ್ಲಿ ಸರ್ಕಾರವು 1,832 ಕೋಟಿ ರೂ.ಗಳ ದೀಪಾವಳಿ ಬೋನಸ್ ಅನ್ನು ಮಂಜೂರು ಮಾಡಿತ್ತು. ಭಾರತೀಯ ರೈಲ್ವೆಯ 11 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳಿಗೆ 78 ದಿನಗಳ ವೇತನಕ್ಕೆ ಸಮಾನಾಗಿ 17,951 ರೂ.ಗಳನ್ನು ವಿತರಿಸಿತ್ತು. ಹಬ್ಬದ ಋತುವಿನಲ್ಲಿ ಕಾರ್ಮಿಕರಿಗೆ ಉತ್ತೇಜನ ನೀಡುವ ಮತ್ತು ಅವರ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶವನ್ನು ಇದು ಹೊಂದಿದೆ.
“2023-2024ರಲ್ಲಿ ರೈಲ್ವೆಯ ಕಾರ್ಯಕ್ಷಮತೆ ತುಂಬಾ ಉತ್ತಮವಾಗಿತ್ತು. ರೈಲ್ವೆ 1,588 ಮಿಲಿಯನ್ ಟನ್ ದಾಖಲೆಯ ಸರಕುಗಳನ್ನು ಲೋಡ್ ಮಾಡಿದೆ ಮತ್ತು ಸುಮಾರು 6.7 ಬಿಲಿಯನ್ ಪ್ರಯಾಣಿಕರು ಸಂಚರಿಸಿದ್ದಾರೆ. 78 ದಿನಗಳ ವೇತನಕ್ಕೆ ಸಮಾನವಾದ ಪಿಎಲ್ಬಿ ಮೊತ್ತವನ್ನು ಟ್ರ್ಯಾಕ್ ನಿರ್ವಹಣೆದಾರರು, ಲೋಕೋ ಪೈಲಟ್ಗಳು, ರೈಲು ವ್ಯವಸ್ಥಾಪಕರು (ಗಾರ್ಡ್ಗಳು), ಸ್ಟೇಷನ್ ಮಾಸ್ಟರ್ಗಳು, ಮೇಲ್ವಿಚಾರಕರು, ತಂತ್ರಜ್ಞರು, ತಂತ್ರಜ್ಞ ಸಹಾಯಕರು, ಸಚಿವಾಲಯದ ಸಿಬ್ಬಂದಿ ಮತ್ತು ಇತರ ಗ್ರೂಪ್ ಎಕ್ಸ್ಸಿ ಸಿಬ್ಬಂದಿಯಂತಹ ವಿವಿಧ ವರ್ಗದ ಉದ್ಯೋಗಿಗಳಿಗೆ ನೀಡಲಾಗುವುದು” ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.
ಪಿಎಲ್ಬಿ ಪಾವತಿಯು ರೈಲ್ವೆಯ ಕಾರ್ಯಕ್ಷಮತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ರೈಲ್ವೆ ಉದ್ಯೋಗಿಗಳನ್ನು ಪ್ರೇರೇಪಿಸಲು ಪ್ರೋತ್ಸಾಹಕವಾಗಿ ಕಾರ್ಯನಿರ್ವಹಿಸುತ್ತದೆ.
ಆಯ್ಕೆ ಹೇಗೆ?
ರೈಲ್ವೆ ಉದ್ಯೋಗಿಗಳ ಬೋನಸ್ ಅವರ ಕಾರ್ಯಕ್ಷಮತೆಯನ್ನು ಆಧರಿಸಿದ್ದರೂ ಅಂತಿಮ ನಿರ್ಧಾರವನ್ನು ರೈಲ್ವೆಯ ಆದಾಯ ಮತ್ತು ವೆಚ್ಚಗಳು ಸೇರಿದಂತೆ ಆರ್ಥಿಕ ಕಾರ್ಯಕ್ಷಮತೆಗೆ ಅನುಗುಣವಾಗಿ ಕೈಗೊಳ್ಳಲಾಗುತ್ತದೆ. ಅಲ್ಲದೆ ಇತರ ಸರ್ಕಾರಿ ನೌಕರರು ದೀಪಾವಳಿಗೆ ಮುಂಚಿತವಾಗಿ ಬೋನಸ್ ಪಡೆಯುವ ಸಾಧ್ಯತೆಯಿದೆ.
ಈ ಸುದ್ದಿಯನ್ನೂ ಓದಿ: Small Savings Schemes: ಹನಿಗೂಡಿದರೆ ಹಳ್ಳ ; ಇಲ್ಲಿವೆ ನೋಡಿ ಆಕರ್ಷಕ ಬಡ್ಡಿಯ ಉಳಿತಾಯ ಯೋಜನೆಗಳು