ನವದೆಹಲಿ: ದೇಶಾದ್ಯಂತ ಕೋವಿಡ್-19 ಹರಡುವಿಕೆ ಹೆಚ್ಚಳದ ಪರಿಣಾಮ ಆಕ್ಸಿಜನ್ ಲಭ್ಯತೆ ಸೇರಿದಂತೆ ರೋಗಿಗಳ ಜೀವ ರಕ್ಷಕ ಉಪಕರಣ, ಔಷಧಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಇವುಗಳ ಪೂರೈಕೆಯನ್ನು ಖಾತರಿಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಏ.24 ರಂದು ಹಲವಾರು ಕ್ರಮಗಳನ್ನು ಘೋಷಿಸಿದೆ.
ಆಕ್ಸಿಜನ್ ಹಾಗೂ ಸಂಬಂಧಿಸಿದ ಉಪಕರಣಗಳು, ಔಷಧಗಳ ಮೇಲೆ ವಿಧಿಸಲಾಗುವ ಸೀಮಾ ಸುಂಕ, ಹಾಗೂ ಆರೋಗ್ಯ ಸೆಸ್ ನ್ನು ಮುಂದಿನ ಮೂರು ತಿಂಗಳ ವರೆಗೆ ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ ನೀಡಿದ್ದು, ತಕ್ಷಣದಿಂದಲೇ ಜಾರಿಗೆ ಬರಲಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕೋವಿಡ್-19 ಲಸಿಕೆ ಆಮದು ಮಾಡಿಕೊಳ್ಳುವುದಕ್ಕೂ ಮೂರು ತಿಂಗಳ ವರೆಗೆ ಈ ವಿನಾಯಿತಿ ಅನ್ವಯವಾಗಲಿದೆ. ಇದೇ ವೇಳೆ ಈ ಆದೇಶದ ವ್ಯಾಪ್ತಿಯಲ್ಲಿ ಬರುವ ಉಪಕರಣಗಳ ಕಸ್ಟಮ್ ಕ್ಲಿಯರೆನ್ಸ್ ತಡೆರಹಿತ ಮತ್ತು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ.
ಆಕ್ಸಿಜನ್ ಕಾನ್ಸಂಟ್ರೇಟರ್, ಫ್ಲೋ ಮೀಟರ್ , ಟ್ಯೂಬಿಂಗ್ ವ್ಯಾಕ್ಯೂಂ ಪ್ರೆಷರ್ ಸ್ವಿಂಗ್ ಅಲಾಬ್ಸರ್ಪ್ಷನ್ (ವಿಪಿಎಸ್ಎ) ಪ್ರೆಷರ್ ಸ್ವಿಂಗ್ ಅಬ್ಸಾರ್ಬ್ಷನ್ (ಪಿಎಸ್ಎ) ಆಕ್ಸಿಜನ್ ಘಟಕಗಳು, ಲಿಕ್ವಿಡ್/ ಅನಿಲ ಆಕ್ಸಿಜನ್ ನ್ನು ಉತ್ಪಾದಿಸುವ ಕ್ರಯೋಜನಿಕ್ ಆಕ್ಸಿಜನ್ ಏರ್ ಸಪರೇಷನ್ ಯುನಿಟ್ (ಎಎಸ್ ಯು) ಮುಂತಾದವುಗಳಿಗೆ ವಿನಾಯಿತಿ ಲಭ್ಯವಾಗಲಿದೆ.