ನವದೆಹಲಿ: ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಉತ್ತರಪ್ರದೇಶ ಸರ್ಕಾರ ರದ್ದುಗೊಳಿಸಿರುವುದಾಗಿ ಗುರುವಾರ ತಿಳಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ ಡಿಸಿಎಂ ದಿನೇಶ್ ಶರ್ಮಾ ಮತ್ತು ಲಕ್ನೋದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಪಿಯುಸಿ ಪರೀಕ್ಷೆ ಸಂಬಂಧಿಸಿದ ವರದಿಯನ್ನು ಶಿಕ್ಷಣ ಮಂಡಳಿ ಸಿದ್ಧಪಡಿಸಿ ಮುಖ್ಯಮಂತ್ರಿಗೆ ವರದಿಯನ್ನು ಸಲ್ಲಿಸಿತ್ತು. ಇದರಲ್ಲಿ ಪರೀಕ್ಷೆ ರದ್ದುಗೊಳಿಸಿದ ನಂತರ ಅಭ್ಯರ್ಥಿಗಳಿಗೆ ಇತರ ಆಯ್ಕೆಗಳ ಸಲಹೆಗಳನ್ನು ನೀಡಲಾಗಿದೆ ಎಂದು ವರದಿ ತಿಳಿಸಿದೆ.
ಉತ್ತರಪ್ರದೇಶದಲ್ಲಿ 26,09,501 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಹೆಸರನ್ನು ನೋಂದಾಯಿಸಿದ್ದರು. ಆದರೆ ಕೋವಿಡ್ 19 ಸೋಂಕು ಹಿನ್ನೆಲೆಯಲ್ಲಿ ಉತ್ತರಪ್ರದೇಶ ಶಿಕ್ಷಣ ಮಂಡಳಿ ಪ್ರೌಢಶಾಲೆ ಪರೀಕ್ಷೆಯನ್ನೂ ರದ್ದುಪಡಿಸಿತ್ತು.