ಲಖನೌ: ಗ್ಯಾಸ್ ಅಥವಾ ಒಲೆಯ ಮೇಲೆ ಅಡುಗೆ / ಹಾಲು ಇಟ್ಟು ಮರೆತು ಹೋಗಿ ಅಯ್ಯೋ ಪಾತ್ರೆ ಸೀದು ಹೋಯ್ತು ಎಂದು ಪರಿತಪಿಸುವವರನ್ನು ನೋಡಿರುತ್ತೇವೆ. ಆದರೆ ಇಲ್ಲಿಬ್ಬರು ಯುವಕರು ಒಲೆಯ ಮೇಲೆ ಚೋಲೆ (ಚನ್ನಾ) ಮಸಾಲೆ ಮಾಡುವುದಕ್ಕೆ ಇಟ್ಟು ದುರಂತವಾಗಿ ಸಾವಿಗೀಡಾಗಿದ್ದಾರೆ. ಉತ್ತರ ಪ್ರದೇಶದ (UP Shocker) ನೋಯ್ಡಾದ ಸೆಕ್ಟರ್ 70ರಲ್ಲಿ ಇಬ್ಬರು ಯುವಕರು ತಮ್ಮ ಬಾಡಿಗೆ ಮನೆಯಲ್ಲಿ ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ ಭೀಕರ ಘಟನೆ ಹೃದಯ ತಲ್ಲಣಿಸುವಂತೆ ಮಾಡಿದೆ.
ಬಲಿಪಶುಗಳನ್ನು ಫುಡ್‌ಕಾರ್ಟ್ ಮಾರಾಟಗಾರರು ಎಂದು ಗುರುತಿಸಲಾಗಿದೆ. ಮೃತರನ್ನು ಉಪೇಂದ್ರ (22) ಮತ್ತು ಶಿವಂ (23) ಎಂದು ಗುರುತಿಸಲಾಗಿದ್ದು, ಅವರು ಚೋಲೆ ಕುಲ್ಚೆ ಮತ್ತು ಭಟುರಾ ಮಾರಾಟ ಮಾಡುವ ಫುಡ್ ಕಾರ್ಟ್ ನಡೆಸುತ್ತಿದ್ದರು.
ಮುಂಜಾನೆ ಅವರ ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಗಾಬರಿಗೊಂಡು ಬಾಗಿಲು ಒಡೆದು ನೋಡಿದಾಗ, ಇಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಅವರನ್ನು ತಕ್ಷಣ ಸೆಕ್ಟರ್ 39ರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರು ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ರಾತ್ರಿ ಮಲಗುವ ಮೊದಲು ಇವರು ಚೋಲೆ ಮಸಾಲೆ ಮಾಡುವುದಕ್ಕೆ ಪಾತ್ರೆಯನ್ನು ಗ್ಯಾಸ್ ಒಲೆಯ ಮೇಲೆ ಇಟ್ಟು ನಿದ್ದೆಗೆ ಜಾರಿದ್ದರು. ಪಾತ್ರೆಯಲ್ಲಿದ್ದ ಆಹಾರ ಸುಟ್ಟು ಕೋಣೆಯ ತುಂಬಾ ಹೊಗೆ ತುಂಬಿತ್ತು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ:ಚಿತ್ರ ಬಿಡಿಸಲು ಬಣ್ಣವಿಲ್ಲವೆಂದ ಅಭಿಮಾನಿಗೆ ಈ ಕಲಾವಿದನ ರಿಯಾಕ್ಷನ್ ಹೇಗಿತ್ತು ಗೊತ್ತಾ? ನೆಟ್ಟಿಗರು ಫುಲ್ ಶಾಕ್!
“ಗಾಳಿಯಾಡದ ಕೋಣೆಯಲ್ಲಿ ಹೊಗೆ ಮತ್ತು ಇಂಗಾಲದ ಮಾನಾಕ್ಸೈಡ್ ಸಂಗ್ರಹದಿಂದ ಉಂಟಾದ ಉಸಿರುಗಟ್ಟುವಿಕೆಯು ಅವರ ಸಾವಿಗೆ ಕಾರಣವಾಯಿತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ” ಎಂದು ನೋಯ್ಡಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾವಿಗೆ ನಿಖರವಾದ ಕಾರಣವನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಶವಗಳನ್ನು ಶವಪರೀಕ್ಷೆಗೆ ಕಳುಹಿಸಿದ್ದಾರೆ. ದೇಹಗಳ ಮೇಲೆ ಯಾವುದೇ ಗಾಯಗಳಿಲ್ಲ. ಮರಣೋತ್ತರ ಪರೀಕ್ಷೆಯ ನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.