Thursday, 19th September 2024

UPI Lite: ಯುಪಿಐ ಲೈಟ್‌ ಬಳಕೆದಾರರಿಗೆ ಗುಡ್‌ನ್ಯೂಸ್‌; ಶೀಘ್ರದಲ್ಲೇ ಆಟೋ ಟಾಪ್‌-ಅಪ್‌ ಫೀಚರ್‌ ಲಭ್ಯ: ಏನಿದರ ವೈಶಿಷ್ಟ್ಯ?

UPI Lite

ಬೆಂಗಳೂರು: ಪ್ರಸ್ತುತ ಡಿಜಿಟಲ್‌ ಪಾವತಿ (Digital payment) ವಿಧಾನ ಜನಪ್ರಿಯವಾಗುತ್ತಿದ್ದು, ನೀವು ಕಡಿಮೆ ಮೊತ್ತದ ವಹಿವಾಟುಗಳಿಗೆ ಯುಪಿಐ ಲೈಟ್ (UPI Lite) ಬಳಸುತ್ತಿದ್ದರೆ ಇಲ್ಲಿದೆ ಗುಡ್‌ನ್ಯೂಸ್‌. ಅಕ್ಟೋಬರ್ 31ರಿಂದ ಯುಪಿಐ ಲೈಟ್ ಖಾತೆಯಲ್ಲಿ ನಿಮ್ಮ ಆಯ್ಕೆಯ ಮೊತ್ತವನ್ನು ಮರುಭರ್ತಿ ಮಾಡಲು ನೀವು ಆಟೋ ಟಾಪ್-ಅಪ್ ಆಯ್ಕೆ (Auto top-up option)ಯನ್ನು ಬಳಸಬಹುದಾಗಿದೆ.

ಅಟೋ ಟಾಪ್-ಅಪ್ ಆಯ್ಕೆಯ ವೈಶಿಷ್ಟ್ಯ

ಈ ಬಗ್ಗೆ ಆಗಸ್ಟ್ 27ರಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್‌ ಆಫ್ ಇಂಡಿಯಾ (National Payments Corporation of India-NPCI) ಸುತ್ತೋಲೆ ಹೊರಡಿಸಿದ್ದು, ಈ ಫೀಚರ್‌ ಅಕ್ಟೋಬರ್ 31ರಿಂದ ಬಳಕೆದಾರರಿಗೆ ದೊರೆಯಲಿದೆ ಎಂದು ತಿಳಿಸಿದೆ. ಈ ಫೀಚರ್‌ ಮೂಲಕ ನೀವು ಆಯ್ಕೆ ಮಾಡಿದ ಮೊತ್ತ ಸ್ವಯಂಚಾಲಿತವಾಗಿ ನಿಮ್ಮ ಯುಪಿಐ ಲೈಟ್ ಖಾತೆಗೆ ಮರುಭರ್ತಿ ಆಗಲಿದೆ. ಯುಪಿಐ ಲೈಟ್ ಅಕೌಂಟ್​ನಲ್ಲಿ 2,000 ರೂ.ವರೆಗೆ ಹಣ ತುಂಬಿಡಬಹುದು. ಈಗ ಆ ಹಣ ಖಾಲಿಯಾದರೆ ನಾವು ಬ್ಯಾಂಕ್ ಅಕೌಂಟ್​ನಿಂದ ಅದಕ್ಕೆ ಮ್ಯಾನುವಲ್ ಆಗಿ ತುಂಬಬೇಕಾಗುತ್ತದೆ. ಈ ವ್ಯವಸ್ಥೆಯನ್ನು ಆಟೊ ಟಾಪ್‌-ಅಪ್‌ ಫೀಚರ್‌ ಬದಲಾಯಿಸಲಿದೆ. ಯುಪಿಐ ಲೈಟ್ ಅಕೌಂಟ್​ನಲ್ಲಿ ಹಣ ಖಾಲಿಯಾದರೆ ಬ್ಯಾಂಕ್ ಅಕೌಂಟ್​ನಿಂದ ನೀವು ಉಲ್ಲೇಖಿಸಿದ ಮೊತ್ತ ತನ್ನಿಂದ ತಾನೇ ವರ್ಗಾವಣೆಯಾಗುವ ಫೀಚರೇ ಆಟೊ ಟಾಪ್‌-ಅಪ್‌.

ಗರಿಷ್ಠ 2,000 ರೂ.ಗಳ ಯುಪಿಐ ಲೈಟ್ ಬ್ಯಾಲೆನ್ಸ್ ಮಿತಿಯೊಂದಿಗೆ 500 ರೂ.ಗಿಂತ ಕಡಿಮೆ ಮೊತ್ತವನ್ನು ಯುಪಿಐ ಪಿನ್ ಅನ್ನು ನಮೂದಿಸದೆಯೇ ಪಾವತಿ ಮಾಡಲು ಅನುಮತಿ ಇದೆ. ಅದಾಗ್ಯೂ ಯುಪಿಐ ಲೈಟ್ ಬ್ಯಾಲೆನ್ಸ್ ಮಿತಿಯನ್ನು 2,000 ರೂ.ಗೆ ಸೀಮಿತಗೊಳಿಸಲಾಗಿದೆ. ಹೆಚ್ಚುವರಿಯಾಗಿ, ಬಳಕೆದಾರರು ಯಾವುದೇ ಸಮಯದಲ್ಲಿ ಆಟೋ ಟಾಪ್-ಅಪ್ ಆಯ್ಕೆಯನ್ನು ಹಿಂತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಏನಿದು ಯುಪಿಐ ಲೈಟ್?

ಸಾಧಾರವಣಾಗಿ ಯುಪಿಐ ಮಾದರಿಯಲ್ಲಿಯೇ ಕಾರ್ಯನಿರ್ವಹಿಸುವ ಯುಪಿಐ ಲೈಟ್‌ ಅದಕ್ಕಿಂತಲೂ ಸರಳವಾಗಿ ಸೇವೆಗಳನ್ನು ಒದಗಿಸುತ್ತದೆ. ಇದರ ಸಹಾಯದಿಂದ ಇಂಟರ್‌ನೆಟ್‌ ಇಲ್ಲದಿದ್ದರೂ ವೇಗವಾಗಿ ಮತ್ತು ಸರಳವಾಗಿ ಹಣ ಪಾವತಿ ಮಾಡಬಹುದು. ಜತೆಗೆ ಇದರಲ್ಲಿ ನೀವು ಹಣ ಪಾವತಿ ಮಾಡುವಾಗ ಯುಪಿಐ ಪಿನ್‌ ನಮೂದಿಸಬೇಕಾದ ಅವಶ್ಯಕತೆಯಿಲ್ಲ. ಇದು ನಿಮ್ಮ ಬ್ಯಾಂಕ್ ಖಾತೆಯನ್ನು ನೇರವಾಗಿ ಪ್ರವೇಶಿಸುವುದಿಲ್ಲ. ಬದಲಾಗಿ ನಿಮ್ಮ ಹಣವನ್ನು ವ್ಯಾಲೆಟ್‌ನಲ್ಲಿ ಇಟ್ಟುಕೊಂಡು, ಹಣವನ್ನು ಕಳುಹಿಸುತ್ತದೆ. ಅಂದರೆ ಇದಕ್ಕಾಗಿ ನೀವು ಮೊದಲೇ ಹಣವನ್ನು ವ್ಯಾಲೆಟ್‌ನಲ್ಲಿ ಸೇರಿಸಬೇಕಾಗುತ್ತದೆ. ಯುಪಿಐ ಲೈಟ್‌ ಮೂಲಕ ಸಣ್ಣ ಮೌಲ್ಯದ ವಹಿವಾಟುಗಳನ್ನು (500 ರೂ.ಗಿಂತ ಕಡಿಮೆ) ನಡೆಸಬಹುದು.

ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ?

  • ಎಲ್ಲಾ ಬ್ಯಾಂಕ್‌ಗಳು ಯುಪಿಐ ಲೈಟ್‌ ಅಟೋ ಟಾಪ್-ಅಪ್ ಆಯ್ಕೆಗೆ ಬೆಂಬಲ ನೀಡಬೇಕು. ಪಿಎಸ್‌ಪಿ / ಅಪ್ಲಿಕೇಶನ್‌ನಿಂದ ವಿನಂತಿ ಬಂದಾಗಲೆಲ್ಲಾ ಡೆಬಿಟ್‌ಗಳಿಗೆ ಅನುಮತಿ ನೀಡಬೇಕು.
  • ಗ್ರಾಹಕರು ಯುಪಿಐ ಲೈಟ್‌ನಲ್ಲಿ ಆಟೋ ಟಾಪ್-ಅಪ್ ಬಳಸಲು ಅನುಕೂಲವಾಗುವಂತೆ ಅಪ್ಲಿಕೇಶನ್‌ನಲ್ಲಿ ಬದಲಾವಣೆ ತರಬೇಕು.
  • ಪ್ರತಿ ಯುಪಿಐ ಲೈಟ್ ಖಾತೆಯ ಆಟೋ ಟಾಪ್-ಅಪ್ ವಹಿವಾಟುಗಳ ಸಂಖ್ಯೆಯನ್ನು ಪ್ರತಿದಿನಕ್ಕೆ 5ಕ್ಕೆ ಸೀಮಿತಗೊಳಿಸಬೇಕು ಎಂದು ಎನ್‌ಪಿಸಿಐ ಸೂಚಿಸಿದೆ

ಯುಪಿಐ ಲೈಟ್‌ ಒಂದು ರೀತಿಯ ಡಿಜಿಟಲ್‌ ವ್ಯಾಲೆಟ್ ಆಗಿರುವುದರಿಂದ ಬಳಕೆದಾರರು ಆನ್‌ಲೈನ್‌ನಲ್ಲಿರುವಾಗ ಇದಕ್ಕೆ ಹಣ ಸೇರಿಸಿ ಬಳಿಕ ಇಂಟರ್‌ನೆಟ್‌ ಇಲ್ಲದಿದ್ದರೂ ತಕ್ಷಣ ಯಾರಿಗಾದರೂ ಹಣವನ್ನು ಕಳುಹಿಸಬಹುದು. ಇದರಲ್ಲಿ ನೀವು ದಿನವೊಂದಕ್ಕೆ ಎಷ್ಟು ವಹಿವಾಟುಗಳನ್ನು ಬೇಕಾದರೂ ನಡೆಸುವುದಕ್ಕೆ ಅವಕಾಶವಿದೆ. ಹೀಗಾಗಿಯೇ ಈ ತಂತ್ರಜ್ಞಾನ ಇಂದು ಜನಪ್ರಿಯವಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Money Tips: ಗೂಗಲ್‌ ಪೇ ಅಥವಾ ಫೋನ್‌ ಪೇಯಿಂದ ತಪ್ಪಾದ ನಂಬರ್‌ಗೆ ಹಣ ಪಾವತಿಸಿದರೆ ಏನು ಮಾಡಬೇಕು?

Leave a Reply

Your email address will not be published. Required fields are marked *