ನವದೆಹಲಿ: ಒಂಟಿ ಪುರುಷರನ್ನು ವಂಚಿಸುವ ದಂಧೆ ನಡೆಸುತ್ತಿದ್ದ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಉತ್ತರ ಪ್ರದೇಶದ (Uttar Pradesh) ಬಾಂದ ಎಂಬಲ್ಲಿ ಬಂಧಿಸಲಾಗಿದೆ ಹಾಗೂ ಅವರ ಮನೆಗಳಲ್ಲಿ ನಗದು ಮತ್ತು ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಧುವಿನ ರೀತಿ ಪೂನಮ್ ಮಿಶ್ರಾ ಹಾಗೂ ಅವರ ತಾಯಿಯಾಗಿ ಸಂಜನಾ ಗುಪ್ತಾ ಪುರುಷರ ಎದುರು ನಟಿಸುತ್ತಿದ್ದರು. ಮದುವೆಗೆ ಆಸಕ್ತಿ ಇರುವ ಪುರುಷರನ್ನು ಪೂನಮ್ ಮಿಶ್ರಾಳಿಗೆ ವಿಮಲೇಶ್ ವರ್ಮಾ ಮತ್ತು ಧರ್ಮೇಂದ್ರ ಪ್ರಜಾಪತಿ ಪರಿಚಯ ಮಾಡಿಸುತ್ತಿದ್ದರು. ಅದರಂತೆ ಹುಡುಗಿಯರನ್ನು ಪರಿಚಯ ಮಾಡಿಸಿಕೊಡುತ್ತೇವೆಂದು ಹೇಳಿ ಈ ಇಬ್ಬರೂ, ಪುರುಷರ ಬಳಿ ಹಣವನ್ನು ನಿರಂತರವಾಗಿ ಪೀಕುತ್ತಿದ್ದರು. ಸರಳ ವಿವಾಹದ ನಂತರ ಪೂನಮ್ ವರನ ಮನೆಗೆ ಹೋಗುತ್ತಿದ್ದಳು. ಅವಕಾಶ ಸಿಕ್ಕಾಗ ಆತನ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ಕದ್ದು ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೂರುದಾರ ಶಂಕರ್ ಉಪಾಧ್ಯಾಯ ಎಂಬುವವರನ್ನು ಟಾರ್ಗೆಟ್ ಮಾಡುವುದಕ್ಕೂ ಮುನ್ನ ಪೂನಮ್ ಮಿಶ್ರಾ ಆರು ಮಂದಿ ಪುರುಷರನ್ನು ವಂಚಿಸಿ ಅವರಿಂದ ನಗದು ಹಾಗೂ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೂರುದಾರ ಒಬ್ಬಂಟಿಯಾಗಿದ್ದು, ಮದುವೆಗಾಗಿ ಹುಡುಗಿಯನ್ನು ಹುಡುಕುತ್ತಿದ್ದರು. ಈ ವೇಳೆ ದೂರುದಾರ ಶಂಕರ್ ಉಪಾಧ್ಯಾಯ ಅವರ ಬಳಿ ತೆರಳಿದ್ದ ವಿಮಲೇಶ್, ನಿಮಗೆ ಮದುವೆ ಮಾಡಿಸುತ್ತೇನೆ, ಇದಕ್ಕಾಗಿ ನೀವು 1.5 ಲಕ್ಷ ರೂ. ನೀಡಬೇಕೆಂದು ಆಗ್ರಹಿಸಿದ್ದ. ಅದರಂತೆ ಇದಕ್ಕೆ ಶಂಕರ್ ಕೂಡ ಒಪ್ಪಿಕೊಂಡಿದ್ದರು ಎಂಬ ಮಾಹಿತಿಯನ್ನು ಪೊಲೀಸರು ಹಂಚಿಕೊಂಡಿದ್ದಾರೆ.
ಶನಿವಾರ ಶಂಕರ್ ಉಪಾಧ್ಯಯ ಅವರನ್ನು ನ್ಯಾಯಾಲಯಕ್ಕೆ ಕರೆಸಿಕೊಂಡಿದ್ದ ವಿಮಲೇಶ್, ಪೂನಮ್ ಅವರನ್ನು ಪರಿಚಯ ಮಾಡಿಕೊಟ್ಟಿದ್ದರು ಹಾಗೂ ಒಂದೋವರೆ ಲಕ್ಷ ರೂ. ಗಳನ್ನು ಕೇಳಿದ್ದರು. ಈ ವೇಳೆ ವಧು ಪೂನಮ್ ಮಿಶ್ರಾ ಹಾಗೂ ಇವರ ತಾಯಿಯಾಗಿದ್ದ ಸಂಜನಾ ಅವರನ್ನು ನೋಡಿ ಅನುಮಾನ ವ್ಯಕ್ತಪಡಿಸಿದ್ದ ಶಂಕರ್, ಆಧಾರ್ ಕಾರ್ಡ್‌ಗಳನ್ನು ಕೇಳಿದ್ದರು.
“ಪೂನಮ್ ಮತ್ತು ತಾಯಿ ಸಂಜನಾರ ಹಾವಭಾವದಿಂದ ಅವರು ನನ್ನನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಅನುಮಾನ ನನಗೆ ಬಂದಿತ್ತು. ನಾನು ಮದುವೆಯಾಗಲು ನಿರಾಕರಿಸಿದಾಗ, ಅವರು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು ಮತ್ತು ನನ್ನನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುತ್ತೇನೆಂದು ಧಮ್ಕಿ ಹಾಕಿದ್ದರು. ಈ ಬಗ್ಗೆ ಯೋಚಿಸಲು ನನಗೆ ಸಮಯಬೇಕೆಂದು ಹೇಳಿ ಅಲ್ಲಿಂದ ಹೊರಟುಹೋದೆ,” ಎಂದು ಉಪಾಧ್ಯಾಯ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿಗಳು ಮದುವೆಯ ಹೆಸರಿನಲ್ಲಿ ಪುರುಷರನ್ನು ವಂಚಿಸುತ್ತಿದ್ದ ಬಗ್ಗೆ ದೂರು ಬಂದಿರುವುದಾಗಿ ಬಾಂದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವರಾಜ್ ತಿಳಿಸಿದ್ದಾರೆ. “ನಾವು ತಕ್ಷಣ ನಮ್ಮ ತಂಡಗಳಿಗೆ ಸೂಚನೆ ನೀಡಿದ್ದೆವು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರನ್ನು ಬಂಧಿಸಿದ್ದೇವೆ. ಬಂಧಿತರು ಒಂಟಿ ಪುರುಷರನ್ನು ಮದುವೆಯಾಗಲು ವಂಚಿಸುತ್ತಾರೆ ಮತ್ತು ಮದುವೆಯಾದ ಬಳಿಕ ಆಭರಣಗಳು ಮತ್ತು ಹಣವನ್ನು ಕದಿಯುತ್ತಾರೆ. ಇವರ ವಿರುದ್ದ ಕಾನೂನು ಕ್ರಮ ಜರುಗಿಸುತ್ತೇವೆ,” ಎಂದು ಬಾಂದ ಎಸ್‌ಪಿ ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಇಬ್ಬರು ಯುವಕರನ್ನು ಬೈಕ್ ಸಹಿತ 300 ಮೀಟರ್ ಎಳೆದೊಯ್ದ ಟ್ರಕ್!