Saturday, 4th January 2025

Facebook ಗೆಳತಿಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ತೆರಳಿ ಜೈಲು ಪಾಲಾದ ಭಾರತದ ಯುವಕ!

Uttar Pradesh's man lands in Pakistan jail after illegally crossing border to marry ‘Facebook’ lover

ನವದೆಹಲಿ: ಫೇಸ್‌ಬುಕ್‌ನಲ್ಲಿ (Facebook) ಪರಿಚಯವಾದ ಗೆಳತಿಯನ್ನು ಮದುವೆಯಾಗಲು ಅಕ್ರಮವಾಗಿ ಪಾಕಿಸ್ತಾನಕ್ಕೆ ಬಂದಿದ್ದ 30ರ ವಯಸ್ಸಿನ ಭಾರತದ ಯುವಕನನ್ನು ಬಂಧಿಸಲಾಗಿದೆ. ತಮ್ಮ ಪುತ್ರನನ್ನು ಬಿಡುಗಡೆಗೆ ನೆರವು ನೀಡುವಂತೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಯುವಕನ ಪೋಷಕರು ಮನವಿ ಮಾಡಿಕೊಂಡಿದ್ದಾರೆ.

ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಬಾದಲ್ ಬಾಬು ಎಂಬಾತನನ್ನು ಕಳೆದ ವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಂಡಿ ಬಹೌದ್ದೀನ್ ಜಿಲ್ಲೆಯಲ್ಲಿ (ಲಾಹೋರ್‌ನಿಂದ ಸುಮಾರು 240 ಕಿಲೋಮೀಟರ್ ದೂರ) ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಬಾಬು ತಾನು ಮದುವೆಯಾಗಲು ಬಯಸಿದ್ದ ಫೇಸ್‌ಬುಕ್ ಗೆಳತಿಯನ್ನು ಭೇಟಿಯಾಗಲು ಅಕ್ರಮವಾಗಿ ಗಡಿ ದಾಟಿದ್ದ. ಬಾಬು ಅವರ ಫೇಸ್‌ಬುಕ್ ಗೆಳತಿ 21ರ ವಯಸ್ಸಿನ ಸನಾ ರಾಣಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ, ಆಕೆ ಆತನನ್ನು ಮದುವೆಯಾಗಲು ಬಯಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಎರಡೂವರೆ ವರ್ಷಗಳ ಸ್ನೇಹ

“ಬಾದಲ್‌ ಬಾಬು ಮತ್ತು ತಾನು ಕಳೆದ ಎರಡೂವರೆ ವರ್ಷಗಳಿಂದ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದೇವೆ. ಆದರೆ ಅವನನ್ನು ಮದುವೆಯಾಗಲು ನನಗೆ ಇಷ್ಟವಿಲ್ಲ ಎಂದು ಪಾಕಿಸ್ತಾನದ ಯುವತಿ ಸನಾ ರಾಣಿ ಹೇಳಿಕೆ ನೀಡಿದ್ದಾರೆ. ಬಾಬು ಅಕ್ರಮವಾಗಿ ಗಡಿ ದಾಟಿ ಮಂಡಿ ಬಹೌದ್ದೀನ್‌ನ ಸನಾ ರಾಣಿಯ ಮಾಂಗ್ ಗ್ರಾಮವನ್ನು ತಲುಪಿದ್ದಾನೆ, ಅಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ,” ಎಂದು ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಪೊಲೀಸ್‌ ಅಧಿಕಾರಿ ನಾಸೀರ್‌ ಶಾ ಮಾಹಿತಿ ನೀಡಿದ್ದಾರೆ.

14 ದಿನಗಳ ನ್ಯಾಯಾಂಗ ಬಂಧನ

ಪೊಲೀಸರಿಗೆ ಹೇಳಿಕೆ ನೀಡುವಾಗ ಮತ್ತು ಬಾಬು ಅವರನ್ನು ಮದುವೆಯಾಗಲು ನಿರಾಕರಿಸಿದಾಗ ಸನಾ ರಾಣಿ ಯಾವುದಾದರೂ ಒತ್ತಡಕ್ಕೆ ಒಳಗಾಗಿದ್ದರು ಎಂಬುದನ್ನು ಸ್ವತಂತ್ರವಾಗಿ ದೃಢಪಡಿಸಲಾಗಿಲ್ಲ. ಆದಾಗ್ಯೂ, ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಬಾಬು ಜೊತೆಗಿನ ಸಂಬಂಧದ ಬಗ್ಗೆ ರಾಣಿ ಮತ್ತು ಅವರ ಕುಟುಂಬದ ಇತರ ಸದಸ್ಯರನ್ನು ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಂಧನದ ನಂತರ, ಬಾಬು ತನ್ನ “ಪ್ರೇಮ ಕಥೆ” ಯನ್ನು ಪೊಲೀಸರಿಗೆ ವಿವರಿಸಿದ್ದಾನೆ. ಯಾವುದೇ ಕಾನೂನು ದಾಖಲೆಗಳಿಲ್ಲದೆ ಪ್ರಯಾಣಿಸುತ್ತಿದ್ದ ಕಾರಣ ಬಾಬು ಅವರನ್ನು ಪಾಕಿಸ್ತಾನದ ವಿದೇಶಿ ಕಾಯಿದೆಯ ಸೆಕ್ಷನ್ 13 ಮತ್ತು 14 ರ ಅಡಿಯಲ್ಲಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜನವರಿ 10 ರಂದು ನಡೆಯಲಿದೆ.

ಪ್ರಧಾನಿ ಮೋದಿಗೆ ಮನವಿ ಮಾಡಿದ ಕುಟುಂಬ

“ನಮ್ಮಿಂದ ನಂಬಲು ಸಾಧ್ಯವಾಗಲಿಲ್ಲ. ನಮಗೆ ಈ ಕ್ಷಣದವರೆಗೂ ಅವನು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದಿದ್ದೆವು, ಆದರೆ ಮುಂದಿನ ಕ್ಷಣದಲ್ಲಿ ಅವನು ಪಾಕಿಸ್ತಾನ ಜೈಲಿನಲ್ಲಿರುವುದನ್ನು ಕಂಡು ನಾವು ಆಘಾತಕ್ಕೊಳಗಾಗಿದ್ದೇವೆ. ಇದು ಯಾವುದೋ ಸಿನಿಮಾದಂತಿದೆ,” ಎಂದು ಬಾರ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಖಿತ್ಕಾರಿ ಗ್ರಾಮದಲ್ಲಿ ವಾಸಿಸುವ ಬಾಬು ತಂದೆ ಕಿರ್ಪಾಲ್‌ ಸಿಂಗ್‌ ಹೇಳಿದ್ದಾರೆ.

“ನಮಗೆ ನಮ್ಮ ಮಗನನ್ನು ಹಿಂತಿರುಗಿಸಬೇಕಾಗಿದೆ ಮತ್ತು ಅವನನ್ನು ಹೇಗೆ ಮನೆಗೆ ಕರೆತರಬೇಕೆಂದು ನಮಗೆ ತಿಳಿದಿಲ್ಲ. ನಮಗೆ ಸಹಾಯ ಮಾಡುವಂತೆ ನಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತಿದ್ದೇವೆ. ಅವನು ತುಂಬಾ ಸರಳವಾದ ಹುಡುಗ. ಎಂದಿಗೂ ಈ ರೀತಿ ನಡೆದುಕೊಂಡಿಲ್ಲ,” ಎಂದು ಬಾಬು ಅವರ ತಾಯಿಯ ಹೇಳಿಕೆಯನ್ನು ಪಿಟಿಐ ವರದಿ ಮಾಡಿದೆ.

ಪ್ರೇಮಿಗಾಗಿ ಗಡಿ ದಾಟಿರುವುದು ಇದೇ ಮೊದಲೇನಲ್ಲ

ಸೋಷಿಯಲ್ ಮೀಡಿಯಾದ ಮೂಲಕ ಪ್ರೀತಿಯಲ್ಲಿ ಸಿಲುಕಿದ ನಂತರ ಯಾರಾದರೂ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ಗಡಿ ದಾಟಿದ್ದು ಇದೇ ಮೊದಲಲ್ಲ. ಈ ಹಿಂದೆ ಅಂಜು ಎಂಬ ಭಾರತೀಯ ಮಹಿಳೆ ತನ್ನ ಪ್ರಿಯಕರನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಬಂದಿದ್ದಳು. ಆಕೆ ಇಸ್ಲಾಂಗೆ ಮತಾಂತರಗೊಂಡು ಪಾಕಿಸ್ತಾನದ ತನ್ನ ಗೆಳೆಯನನ್ನು ಮದುವೆಯಾಗಿದ್ದಳು.

ಕಳೆದ ವರ್ಷ ಸೀಮಾ ಹೈದರ್ ಎಂಬ ಪಾಕಿಸ್ತಾನಿ ಮಹಿಳೆ ‘PUBG’ ಗೇಮ್ ಮೂಲಕ ಭಾರತೀಯ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದಳು. ಆಕೆ ತನ್ನ ನಾಲ್ಕು ಮಕ್ಕಳೊಂದಿಗೆ ನೇಪಾಳದ ಮೂಲಕ ಭಾರತಕ್ಕೆ ಬಂದಿದ್ದಳು ಮತ್ತು ನಂತರ ತನ್ನ ಗೆಳೆಯನನ್ನು ಮದುವೆಯಾಗಿ ಭಾರತದಲ್ಲಿ ನೆಲೆಸಿದ್ದಳು. ಅದೇ ರೀತಿ, ಕಳೆದ ವರ್ಷ 19 ವರ್ಷದ ಪಾಕಿಸ್ತಾನಿ ಹುಡುಗಿ ಇಕ್ರಾ ಜಿವಾನಿ ಆನ್‌ಲೈನ್ ಗೇಮ್ ಮೂಲಕ 25 ವರ್ಷದ ಭಾರತೀಯ ಪ್ರಜೆ ಮುಲಾಯಂ ಸಿಂಗ್ ಯಾದವ್ ಜೊತೆ ಸ್ನೇಹ ಬೆಳೆಸಿದ್ದಳು. ನಂತರ ಇಕ್ರಾ ಮತ್ತು ಮುಲಾಯಂ ನೇಪಾಳದಲ್ಲಿ ವಿವಾಹವಾಗಿದ್ದರು.

ಈ ಸುದ್ದಿಯನ್ನು ಓದಿ: Viral Video: ಕೊರಿಯನ್ ಮಹಿಳೆಯ ಮನಗೆದ್ದ ಆಲೂ ಪೂರಿ – ಈ ವಿಡಿಯೋ ಇದೀಗ ಪೂರಿಯಷ್ಟೇ ಫೇಮಸ್!