ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿತದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನಗಳು ಹನ್ನೊಂದನೇ ದಿನಕ್ಕೆ ಮುಂದುವರಿದಿದ್ದು, ರಕ್ಷಣಾ ಕಾರ್ಯಾಚರಣೆಗಳು ನಿರ್ಣಾಯಕ ಹಂತವನ್ನು ಪ್ರವೇಶಿಸಿವೆ.
ಈ ನಡುವೆ ಮಂಗಳವಾರ ರಾತ್ರಿ ರಕ್ಷಣಾ ತಂಡವು ರಾತ್ರಿಯ ಊಟದಲ್ಲಿ ಈ ಕಾರ್ಮಿಕರಿಗೆ ವೆಜ್ ಪುಲಾವ್, ಮಟರ್ ಪನೀರ್ ಮತ್ತು ಬೆಣ್ಣೆಯ ಚಪಾತಿ ಯಂತಹ ಘನ ಆಹಾರವನ್ನು ನೀಡಿತು.
ಸೋಮವಾರ ಸಂಜೆ ಸುರಂಗದೊಳಗೆ ಅಳವಡಿಸಲಾದ 6 ಇಂಚು ಅಗಲದ ಪೈಪ್ ಮೂಲಕ ಈ ಎಲ್ಲಾ ಆಹಾರವನ್ನು ಒಳಗೆ ಸಿಕ್ಕಿಬಿದ್ದ ಕಾರ್ಮಿಕರಿಗೆ ಕಳುಹಿಸಲಾಗಿದೆ. ಸದ್ಯ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರು ಸುರಕ್ಷಿತವಾಗಿದ್ದು ಕುಟುಂಬದವರ ಜೊತೆ ಸಂವಹನ ನಡೆಸಿದ್ದಾರೆ ಎನ್ನಲಾಗಿದೆ.
ಒಳಗೆ ಸಿಕ್ಕಿಬಿದ್ದಿರುವ ಕೂಲಿ ಕಾರ್ಮಿಕರಿಗೆ ರಾತ್ರಿ ಊಟಕ್ಕೆ ವೈದ್ಯರ ಮೇಲ್ವಿಚಾರಣೆಯಲ್ಲಿ ವೆಜ್ ಪುಲಾವ್, ಮಟರ್ ಪನೀರ್, ಬೆಣ್ಣೆ ಚಪಾತಿ ಕಡಿಮೆ ಎಣ್ಣೆ ಹಾಕಿ ಮಸಾಲೆ ತಯಾರಿಸಿದ್ದೇವೆ ಎಂದು ಸ್ಥಳೀಯ ಹೋಟೆಲ್‌ನಲ್ಲಿ ಅಡುಗೆ ಕೆಲಸ ಮಾಡುವ ಸಂಜೀತ್ ರಾಣಾ ಹೇಳಿದ್ದಾರೆ.
ಹಿಂದಿನ ದಿನ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಲೆಫ್ಟಿನೆಂಟ್ ಜನರಲ್ ಸೈಯದ್ ಅಟಾ ಹಸ್ನೇನ್ ಅವರು ಸಿಲಕ್ಯಾರಾ ಸುರಂಗ ದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಪ್ರಯತ್ನಗಳು ಐದು ಕಡೆಯಿಂದ ನಡೆಯುತ್ತಿವೆ, ಆದರೆ ಅತ್ಯುತ್ತಮ ವಿಧಾನವೆಂದರೆ ಆಗರ್ ಯಂತ್ರದಿಂದ ಲಂಬವಾಗಿ ಕೊರೆಯುವುದು.
ರಕ್ಷಣಾ ಯೋಜನೆಯ ಪ್ರಕಾರ, ಸಿಕ್ಕಿಬಿದ್ದ ಕಾರ್ಮಿಕರಿಗೆ ತಪ್ಪಿಸಿಕೊಳ್ಳುವ ಮಾರ್ಗವನ್ನು ರಚಿಸಲು ಲಂಬ ಡ್ರಿಲ್ಲಿಂಗ್ ಉಪಕರಣಗಳನ್ನು ಬಳಸಿಕೊಂಡು 900 ಎಂಎಂ ಪೈಪ್‌ಗಳನ್ನು ಸೇರಿಸಲಾಗುತ್ತದೆ ಎಂದು ಹೇಳಿದ್ದಾರೆ.