ಡೆಹ್ರಾಡೂನ್: ಉತ್ತರಾಖಂಡದಲ್ಲಿ ದುರಂತವೊಂದು ನಡೆದಿದೆ. ಪೌರಿ ಗರ್ವಾಲ್ ಜಿಲ್ಲೆಯ ಶ್ರೀನಗರ ಪ್ರದೇಶದಲ್ಲಿ ಬಸ್ ಒಂದು ಕಂದಕಕ್ಕೆ ಉರುಳಿದ ಪರಿಣಾಮ 6 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 22 ಜನರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 28 ಪ್ರಯಾಣಿಕರಿದ್ದ ಬಸ್ ಪೌರಿಯಿಂದ ಡೆಹಲ್ಚೌರಿಗೆ ತೆರಳುತ್ತಿತ್ತು. (Uttarakhand Accident)
ಮೂಲಗಳ ಪ್ರಕಾರ, ಭಾನುವಾರ ಸಂಜೆ 4.30 ರ ಸುಮಾರಿಗೆ ಬಸ್ ನಿಯಂತ್ರಣ ತಪ್ಪಿ 100 ಮೀಟರ್ ದೂರದ ಕಮರಿಗೆ ದೆಹಲ್ಚೌರಿ ಬಳಿ ಪಲ್ಟಿಯಾಗಿದೆ. ಪಲ್ಟಿಯಾದ ಪರಿಣಾಮ ಬಸ್ನಲ್ಲಿದ್ದ ಐದು ಮಂದಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದರು. ಮತ್ತೊಬ್ಬರು ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಪೌರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಾಯಗೊಂಡವರಲ್ಲಿ ಎಂಟು ಮಂದಿ ಗಂಭೀರ ಸ್ಥಿತಿಯಲ್ಲಿ ಶ್ರೀನಗರದ ಉನ್ನತ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ. ಮಾಹಿತಿ ಪಡೆದ ಶ್ರೀನಗರ ಮತ್ತು ಸತ್ಪುಲಿ ಪೋಸ್ಟ್ಗಳ ಎಸ್ಡಿಆರ್ಎಫ್ ತಂಡಗಳು, ಪೊಲೀಸರೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದ್ದಾರೆ.
Pauri, Uttarakhand: An accident occurred on the Pauri-Satkhol road when a private bus fell into a 100-meter gorge. Five people died and over 15 were injured pic.twitter.com/J1LrrxRYlJ
— IANS (@ians_india) January 12, 2025
ಮೃತರನ್ನು ಸುನೀತಾ (25), ಪ್ರಮೀಳಾ, ಪ್ರಿಯಾಂಶು (17), ನಾಗೇಂದ್ರ, ಸುಲೋಚನಾ ಮತ್ತು ಪ್ರೇಮ್ (70) ಎಂದು ಗುರುತಿಸಲಾಗಿದೆ. ಪೌರಿ ಜಿಲ್ಲಾಧಿಕಾರಿ ಆಶಿಶ್ ಚೌಹಾಣ್ ಅವರು ಸ್ಥಳಕ್ಕೆ ಧಾವಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಪಘಾತದ ಕಾರಣಗಳ ಬಗ್ಗೆ ತನಿಖೆ ನಡೆಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಪಘಾತದ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಅಪಘಾತದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ದುಃಖದಲ್ಲಿರುವ ಕುಟುಂಬಗಳಿಗೆ ಈ ಅಪಾರ ನಷ್ಟವನ್ನು ಭರಿಸುವ ಶಕ್ತಿ ನೀಡಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಸ್ಥಳೀಯ ಆಡಳಿತವು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳು ಶೀಘ್ರ ಗುಣಮುಖರಾಗಲೆಂದು ಬಾಬಾ ಕೇದಾರರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ : ಪೂಂಚ್ ಘಟನೆ ಮಾಸುವ ಮುನ್ನವೇ ಮತ್ತೊಂದು ಅಘಾತ; ಸೇನಾ ವಾಹನ ಅಪಘಾತಕ್ಕೀಡಾಗಿ ಇಬ್ಬರು ಯೋಧರು ಹುತಾತ್ಮ