ಲಖನೌ: ಉತ್ತರಪ್ರದೇಶದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 3ರ ಕಾರ್ಗೋ ಪ್ರದೇಶದಲ್ಲಿ ಫ್ಲೋರಿನ್ ಸೋರಿಕೆಯಾಗಿದೆ ಎಂದು ಶನಿವಾರ ವರದಿಯಾಗಿದೆ. ಈ ಘಟನೆಯಲ್ಲಿ ವಿಮಾನ ನಿಲ್ದಾಣದ ನೌಕರರು ಪ್ರಜ್ಞಾಹೀನರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಥಳದಲ್ಲಿದ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಧಿಕಾರಿಗಳ ಮಾಹಿತಿ ಮೇರೆಗೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ. ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳನ್ನೂ ಸ್ಥಳಕ್ಕೆ ಕರೆಸಲಾಗಿದೆ. ವಿಮಾನ ನಿಲ್ದಾಣದ ಕಾರ್ಗೋ ಪ್ರದೇಶದಿಂದ ಎಲ್ಲ ಜನರನ್ನು ದೂರವಿರಿಸಲು ಸೂಚನೆ ಗಳನ್ನು ನೀಡಲಾಗಿದೆ.
ವಿಮಾನ ನಿಲ್ದಾಣದ ಒಳಗಿನ 1.5 ಕಿಲೋಮೀಟರ್ ಪ್ರದೇಶವನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಖನೌ ವಿಮಾನ ನಿಲ್ದಾಣದಲ್ಲಿ ಈ ಘಟನೆಯ ನಂತರ, ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಈ ಫ್ಲೋರಿನ್ ಅನಿಲವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಬಳಸಲಾಗುತ್ತದೆ. ವಿಮಾನ ನಿಲ್ದಾಣದ ಟರ್ಮಿನಲ್ 3ರ ಕಾರ್ಗೋ ಪ್ರದೇಶದಲ್ಲಿ ಫ್ಲೋರಿನ್ ಸೋರಿಕೆ ವರದಿಯಾಗಿದೆ.
ಅಗ್ನಿಶಾಮಕ ಸೇವೆ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ಸ್ಥಳದಲ್ಲಿವೆ. ಮೂರೂ ತಂಡಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಕೆಲವು ಔಷಧಗಳ ಪ್ಯಾಕೇಜಿಂಗ್ ನಿಂದ ಫ್ಲೋರಿನ್ ಸೋರಿಕೆಯಾಗಿದ್ದು, ಅದನ್ನು ಪತ್ತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಫ್ಲೋರಿನ್ ಆಕ್ಸಿಡೈಸರ್ ಆಗಿ ಕಾರ್ಯನಿರ್ವಹಿಸುವುದರಿಂದ ಬೆಂಕಿಯನ್ನು ಉಂಟುಮಾಡುತ್ತದೆ. ಒತ್ತಡದ ಅನಿಲವನ್ನು ಹೊಂದಿರುವುದರಿಂದ ಬಿಸಿ ಉಂಟಾದರೆ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚು. ಫ್ಲೋರಿನ್ ಅನಿಲವನ್ನು ನಾವು ಉಸಿರಾಡಿದರೆ ಮಾರಣಾಂತಿಕ ಹಾಗೂ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಸುಟ್ಟ ಗಾಯಗಳು ಹಾಗೂ ಕಣ್ಣಿಗೆ ಅಪಾಯ ಉಂಟುಮಾಡುತ್ತದೆ.