Monday, 13th January 2025

Venkatesh Daggubati: ತೆಲುಗು ನಟ ವೆಂಕಟೇಶ್ ದಗ್ಗುಬಾಟಿ, ರಾಣಾ ದಗ್ಗುಬಾಟಿ ವಿರುದ್ಧ ದೂರು ದಾಖಲು

Venkatesh Daggubati

ಹೈದರಾಬಾದ್‌: ತೆಲುಗು ನಟ ವೆಂಕಟೇಶ್ ದಗ್ಗುಬಾಟಿ, ರಾಣಾ ದಗ್ಗುಬಾಟಿ (Venkatesh Daggubati, Rana Daggubati) ಸೇರಿದಂತೆ ಅವರ ಕುಟುಂಬದ ನಾಲ್ವರು ಸದಸ್ಯರ ವಿರುದ್ಧ ಹೈದರಾಬಾದ್ ಪೊಲೀಸರು ಭಾನುವಾರ (ಜ. 12) ದೂರು ದಾಖಲಿಸಿದ್ದಾರೆ. ಲೀಸ್‌ಗೆ ನೀಡಿದ ಹೋಟೆಲ್‌ ಅನ್ನು ಅಕ್ರಮವಾಗಿ ನೆಲಸಮಗೊಳಿಸಿದ ಆರೋಪದ ಮೇಲೆ ಇವರ ವಿರುದ್ಧ ದೂರು ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.

ವೆಂಕಟೇಶ್ ದಗ್ಗುಬಾಟಿ, ಅವರ ಸಹೋದರ ಮತ್ತು ನಿರ್ಮಾಪಕ ಸುರೇಶ್ ದಗ್ಗುಬಾಟಿ, ಸುರೇಶ್ ಅವರ ಪುತ್ರ, ನಟ ರಾಣಾ ದಗ್ಗುಬಾಟಿ ಮತ್ತು ರಾಣಾ ಅವರ ಸಹೋದರ ಮತ್ತು ನಿರ್ಮಾಪಕ ಅಭಿರಾಮ್ ದಗ್ಗುಬಾಟಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 448, 452, 458 ಮತ್ತು 120 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸದ್ಯ ವೆಂಕಟೇಶ್‌ ಮತ್ತು ಇತರರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಳೆದ ವರ್ಷದ ಜನವರಿಯಲ್ಲಿ ದಗ್ಗುಬಾಟಿ ಕುಟುಂಬವು ಹೈದರಾಬಾದ್‌ನ ಫಿಲ್ಮ್ ನಗರದಲ್ಲಿರುವ ಡೆಕ್ಕನ್ ಕಿಚನ್ ಹೋಟೆಲ್ ಅನ್ನು ನೆಲಸಮಗೊಳಿಸಿದ ಪ್ರಕರಣ ಇದಾಗಿದೆ. ಈ ಆಸ್ತಿಯು ದಗ್ಗುಬಾಟಿ ಕುಟುಂಬದ ಒಡೆತನದಲ್ಲಿದೆ. ಆದರೆ 2022ರಲ್ಲಿ ಇದನ್ನು ನಂದ ಕುಮಾರ್ ಎಂಬ ವ್ಯಕ್ತಿಗೆ ಗುತ್ತಿಗೆ ನೀಡಲಾಗಿತ್ತು.

ಸಿಟಿ ಸಿವಿಲ್ ಕೋರ್ಟ್‌ ಮತ್ತು ತೆಲಂಗಾಣ ಹೈಕೋರ್ಟ್‌ನ ಆದೇಶಗಳಿಗೆ ವಿರುದ್ಧವಾಗಿ ಡೆಕ್ಕನ್ ಕಿಚನ್ ಅನ್ನು ನೆಲಸಮಗೊಳಿಸಲಾಗಿದೆ ಎಂದು ನಂದ ಕುಮಾರ್ ನಾಂಪಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಹೋಟೆಲ್‌ ನೆಲಸಮದಿಂದಾಗಿ ತನಗೆ 20 ಕೋಟಿ ರೂ.ಗಳ ನಷ್ಟವಾಗಿದೆ ಎಂದು ನಂದ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದರು. ನಂತರ ಸ್ಥಳೀಯ ನ್ಯಾಯಾಲಯವು ಈ ಬಗ್ಗೆ ತನಿಖೆ ನಡೆಸುವಂತೆ ಆದೇಶ ಹೊರಡಿಸಿತ್ತು. ವಿಚಾರಣೆ ನಡೆಸಿದ ಕೋರ್ಟ್‌ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚಿಸಿತ್ತು.

ಈ ಸುದ್ದಿಯನ್ನೂ ಓದಿ: Nagarjuna Akkineni: ನಟ ನಾಗಾರ್ಜುನ ವಿರುದ್ಧ ದೂರು ದಾಖಲು

Leave a Reply

Your email address will not be published. Required fields are marked *