Saturday, 4th January 2025

Viral News: ಕೊರಿಯಾ ಪಾಪ್‌ ತಾರೆಯರ ಭೇಟಿಗೆ ಹಣ ಹೊಂದಿಸಲು ಖತರ್ನಾಕ್ ಬಾಲಕಿಯರು ಮಾಡಿದ್ದೇನು ಗೊತ್ತಾ? ಪೊಲೀಸರೇ ಶಾಕ್‌

ಮುಂಬೈ: ದಕ್ಷಿಣ ಕೊರಿಯಾದ(South Korea) ಪ್ರಸಿದ್ಧ ಪಾಪ್ ಬ್ಯಾಂಡ್(Pop Band) ಬಿಟಿಎಸ್‌ನ(Bulletproof Boyscoucts in Korean) ಸದಸ್ಯರನ್ನು ಭೇಟಿಯಾಗಲು ಬೇಕಾದ ಹಣ ಹೊಂದಿಸಲು ಮೂವರು ಅಪ್ರಾಪ್ತ ಬಾಲಕಿಯರು ತಮ್ಮದೇ ಅಪಹರಣದ ನಾಟಕವಾಡಿದ್ದಾರೆ ಎಂದು ಪೊಲೀಸರು ಸೋಮವಾರ( ಡಿ.29) ತಿಳಿಸಿದ್ದಾರೆ.(Maharashtra)

ಈ ಮೂವರೂ ವಿದ್ಯಾರ್ಥಿಗಳು ಮಹಾರಾಷ್ಟ್ರದ ಧಾರಾಶಿವ ಜಿಲ್ಲೆಯವರಾಗಿದ್ದು, ಒಬ್ಬಳು 11 ಹಾಗೂ ಇನ್ನಿಬ್ಬರು 13 ವರ್ಷದವರು ಎಂದು ತಿಳಿದು ಬಂದಿದೆ. ತಮ್ಮ ನೆಚ್ಚಿನ ಕೆ–ಪಾಪ್ ಬ್ಯಾಂಡ್ ಸದಸ್ಯರನ್ನು ಭೇಟಿ ಮಾಡಲು ದಕ್ಷಿಣ ಕೊರಿಯಾಗೆ ತೆರಳುವ ಯೋಜನೆ ಹಾಕಿಕೊಂಡಿದ್ದ ಬಾಲಕಿಯರು, ಹಣ ಗಳಿಸಲು ಪುಣೆಗೆ ತೆರಳಲು ಸಿದ್ಧತೆ ನಡೆಸಿದ್ದರು ಎಂದು ಒಮೆರ್ಗಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಒಮೆರ್ಗಾ ತಾಲೂಕಿನಲ್ಲಿ ಮೂವರು ಬಾಲಕಿಯರನ್ನು ಶಾಲಾ ವಾಹನದಿಂದ ಅಪಹರಿಸಲಾಗಿದೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಡಿ.27ರಂದು ಕರೆ ಬಂದಿತ್ತು. ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಕರೆ ಬಂದ ಫೋನ ನಂಬರ್‌ ಅನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಒಮೆರ್ಗಾದಿಂದ ಪುಣೆಗೆ ತೆರಳುತ್ತಿದ್ದ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಸೇರಿದ ನಂಬರ್‌ ಎಂಬುದು ತಕ್ಷಣವೇ ಗೊತ್ತಾಗಿದೆ.

ಸೋಲಾಪುರ ಜಿಲ್ಲೆಯ ಮೊಹೊಲ್ ಪ್ರದೇಶದಲ್ಲಿ ಬಸ್ ತೆರಳುತ್ತಿರುವಾಗ ಬಸ್‌ ಅನ್ನು ಪೊಲೀಸರು ಟ್ರ್ಯಾಕ್ ಮಾಡಿದ್ದಾರೆ. ಒಮೆರ್ಗಾ ಪೊಲೀಸರು ಅಲ್ಲಿನ ಪೊಲೀಸರು ಹಾಗೂ ಮೊಹೊಲ್ ಬಸ್‌ ನಿಲ್ದಾಣದಲ್ಲಿ ಅಂಗಡಿ ನಡೆಸುತ್ತಿರುವ ಮಹಿಳೆಯೊಬ್ಬರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ನೀಡಿದ್ದಾರೆ. ಮಹಿಳೆಯ ನೆರವಿನಿಂದ ಮಕ್ಕಳನ್ನು ಬಸ್ಸಿನಿಂದ ಕೆಳಗೆ ಇಳಿಸಿ, ಸ್ಥಳೀಯ ಪೊಲೀಸ್ ಠಾಣೆಗೆ ಕರೆತರಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಲಕಿಯರ ಪೋಷಕರ ಜೊತೆಗೆ ಒಮೆರ್ಗಾ ಪೊಲೀಸರು ಅಲ್ಲಿಗೆ ತೆರಳಿದ್ದಾರೆ.

“ದಕ್ಷಿಣ ಕೊರಿಯಾಗೆ ಹೋಗಿ ತಮ್ಮ ನೆಚ್ಚಿನ ಬಿಟಿಎಸ್‌ ಪಾಪ್ ಬ್ಯಾಂಡ್‌ನ ಸದಸ್ಯರ ಭೇಟಿಯಾಗಲು ಬೇಕಾದ ಹಣ ಹೊಂದಿಸಲು ಪುಣೆಗೆ ಹೋಗಿ, ಅಲ್ಲಿ ಏನಾದರೂ ಕೆಲಸ ಮಾಡಲು ಯೋಜನೆ ಹಾಕಿಕೊಂಡಿದ್ದೆವು” ಎಂದು ವಿಚಾರಣೆ ವೇಳೆ ಬಾಲಕಿಯರು ಒಪ್ಪಿಕೊಂಡಿದ್ದು ಅವರು ಅಪಹರಣದ ನಾಟಕವಾಡಿದ್ದಾರೆ ಎಂದು ಅಧಿಕಾರಿಗಳು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News: ಹೈ ಫೈ ಕಂಪನಿಯಲ್ಲಿ 14 ವರ್ಷ ಗ್ರಾಫಿಕ್‌ ಡಿಸೈನರ್‌ ಆಗಿದ್ದವ ಈಗ ಆಟೋ ಡ್ರೈವರ್!