Thursday, 19th December 2024

Viral News: ಥಂಡಿ ಹವಾಗೆ ‘ಥಂಡಿ’ ಹೊಡೆದ ವರ; ಮಂಟಪದಲ್ಲೇ ಮದುವೆ ಬೇಡವೆಂದ ವಧು! ಇದು ಮುರಿದ ಮದುವೆಯ ಕ(ವ್ಯ)ಥೆ!

ರಾಂಚಿ: ಇತ್ತೀಚಿನ ಮದುವೆ ಕಾರ್ಯಕ್ರಮಗಳಲ್ಲಿ ಏನೇನೋ ವಿಚಿತ್ರ ಘಟನೆಗಳು ನಡೆಯುತ್ತಿರುವುದು ವರದಿಯಾಗುತ್ತಲೇ ಇರುತ್ತದೆ. ವರ ತಲೆಸುತ್ತು ಬಂದು ಬಿದ್ದ ಕಾರಣ ವಧು ಆತನನ್ನು ವರಿಸಲು ನಿರಾಕರಿಸಿ ಮದುವೆಯನ್ನೇ ಮುರಿದುಕೊಂಡ ವಿಚಿತ್ರ ಘಟನೆಯೊಂದು ಇದೀಗ ವೈರಲ್ (Viral News) ಸುದ್ದಿಯಾಗುತ್ತಿದೆ.

ಜಾರ್ಖಂಡ್‌ನ (Jharkhand) ಧಿಯೋಘರ್‌ನಲ್ಲಿ (Deoghar) ಈ ಅನಿರೀಕ್ಷಿತ ಅಚ್ಚರಿಯ ಘಟನೆ ನಡೆದಿದ್ದು, ಇಲ್ಲಿನ ಘೋರ್ಮಾರದ (Ghormara) ಅರ್ನವ್ ಎಂಬ ಯುವಕನ ಮದುವೆ ಬಿಹಾರದ (Bihar) ಭಾಗಲ್ಪುರದ (Bhagalpur) ಅಂಕಿತಾ ಎಂಬ ಯುವತಿ ಜೊತೆ ನಡೆಯುತ್ತಿತ್ತು. ಕಳೆದ ಭಾನುವಾರ ಈ ಘಟನೆ ನಡೆದಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.

ವರನ ಊರಿನಲ್ಲಿ ನಡೆಯಬೇಕಿದ್ದ ಈ ಮದುವೆ ಸಮಾರಂಭದಲ್ಲಿ ಕೆಲವೊಂದು ಅನಿರಿಕ್ಷಿತ ಘಟನೆಗಳು ನಡೆಯಿತು. ಸಾಂಪ್ರದಾಯಿಕವಾಗಿ, ವಧುವಿನ ಕುಟುಂಬ ಬಾರಾತ್ ಅಥವಾ ಮದುವೆ ಮೆರವಣಿಗೆ ಎದುರುಗೊಳ್ಳಬೇಕಿತ್ತು. ಆದರೆ ಅಂಕಿತಾ ಕುಟುಂಬವು ಅರ್ನವ್ ಮನೆಗೆ ಮದುವೆ ದಿಬ್ಬಣದಲ್ಲಿ ಬಂದಿತ್ತು. ಈ ರೀತಿ ಸಂಪ್ರದಾಯ ಉಲ್ಟಾ-ಪಲ್ಟಗೊಂಡಿರುವ ವಿಚಾರಕ್ಕೆ ಯುವತಿಗೆ ಅಸಮಧಾನವಿತ್ತು ಎಂದು ವರದಿಗಳು ತಿಳಿಸಿವೆ.

ಯೋಜನೆಯಂತೆ ಎಲ್ಲಾ ಸಂಪ್ರದಾಯಗಳ ರೀತಿಯಲ್ಲೇ ವಿವಾಹ ಸಮಾರಂಭ ನಡೆಯುತ್ತಿತ್ತು. ವರ ಮಾಲಾ ಅಥವಾ ಹಾರ ಬದಲಾವಣೆ ಕ್ರಮವು ಹೊರಗಡೆ ಚಳಿಯಿಂದ ನಡುಗುವ ವಾತಾವರಣದಲ್ಲಿ ನಡೆಯುತ್ತಿತ್ತು. ಎರಡೂ ಕಡೆಯವರೂ ವಧು ಮತ್ತು ವರನೊಂದಿಗೆ ಊಟವನ್ನೂ ಸವಿದಾಗಿತ್ತು. ಬಳಿಕ ಪವಿತ್ರ ಸಪ್ತಪದಿ ಕ್ರಮ ನಡೆಯಬೆಕಿತ್ತು. ಪುರೋಹಿತರು ಈ ಪವಿತ್ರ ಕ್ರಮದ ಮಂತ್ರಗಳನ್ನೂ ಸಹ ಹೇಳಲಾರಂಭಿಸಿದ್ದರು. ಈ ಸಂದರ್ಭದಲ್ಲಿ ವರ ಇದ್ದಕ್ಕಿದ್ದಂತೆ ಚಳಿಯಿಂದ ನಡುಗಲಾರಂಭಿಸಿ ಬಯಲು ಮಂಟಪದಲ್ಲೇ ಕುಸಿದು ಬಿದ್ದಿದ್ದಾನೆ.

ಕೂಡಲೇ ಆತನನ್ನು ಅಲ್ಲೇ ಇದ್ದ ಕೋಣೆಯೊಂದಕ್ಕೆ ಕರೆದೊಯ್ದು ಉಪಚರಿಸಲಾಗಿದೆ. ಆತನ ಅಂಗೈ ಮತ್ತು ಪಾದಗಳನ್ನು ತಿಕ್ಕಿ ಬೆಚ್ಚಗಾಗಿಸುವ ಯತ್ನವನ್ನು ಮಾಡಿದ್ದಾರೆ. ಮತ್ತು ಇದೇ ಸಂದರ್ಭದಲ್ಲಿ ಸ್ಥಳೀಯ ವೈದ್ಯರು ಆಗಮಿಸಿ ಅಸ್ವಸ್ಥ ವರನನ್ನು ಪರೀಕ್ಷಿಸಿದ್ದಾರೆ.

ಇತ್ತ ಕಡೆ ವರನ ಈ ದಿಢೀರ್ ಅಸ್ವಸ್ಥತೆ ಕಂಡು ವಧು ಅಂಕಿತಾ ಆತಂಕಗೊಂಡಿದ್ದಾಳೆ. ವರನಿಗೆ ಬೇರಿನ್ಯಾವುದೋ ಕಾಯಿಲೆ ಇದ್ದು ಅದರಿಂದಾಗಿ ಆತ ಈ ಚಳಿ ವಾತಾವರಣವನ್ನು ತಡೆಯಲಾಗದೆ ಕುಸಿದುಬಿದ್ದಿದ್ದಾನೆ ಎಂದು ವಧು ಅಂದುಕೊಂಡಿದ್ದಾಳೆ.

ಇದನ್ನೂ ಓದಿ: Viral News: ಪಾಗಲ್‌ ಪ್ರೇಮಿಯ ಹುಚ್ಚಾಟಕ್ಕೆ ಧಗ ಧಗಿಸಿದ ಪ್ರೇಯಸಿಯ ಮನೆ; ಮದುವೆಗೆ ಒಲ್ಲೆ ಎಂದಳೆಂದು ಬೆಂಕಿ ಇಟ್ಟ ಕಿರಾತಕ!

ಮಾತ್ರವಲ್ಲದೇ, ನಾವ್ಯಾಕೆ ದಿಬ್ಬಣವನ್ನು ವರನ ಮನೆಗೆ ತೆಗೆದುಕೊಂಡು ಹೋಗಬೇಕು ಎಂದು ಪ್ರಶ್ನಿಸಿದ್ದಾಳೆ. ಇದು ಎರಡೂ ಕುಟುಂಬಗಳ ನಡುವೆ ಇನ್ನಷ್ಟು ಗೊಂದಲಕ್ಕೆ ಕಾರಣವಾಗಿದೆ.

ಈ ಎಲ್ಲಾ ಗೊಂದಲ, ಭೀತಿಗಳ ನಡುವೆ ಅಂಕಿತಾ ಮದುವೆಯನ್ನು ಮುಂದುವರಿಸಲು ನಿರಾಕರಿಸಿದ್ದಾಳೆ. ಇದರಿಂದ ಗೊಂದಲಕ್ಕೊಳಗಾದ ವರನ ಕಡೆಯವರು ಈ ಸಮಸ್ಯೆಯನ್ನು ಪರಿಹರಿಸಲು ಸ್ಥಳಿಯ ಪೊಲೀಸರ ನೆರವನ್ನು ಕೇಳಿದ್ದಾರೆ. ಮಧ್ಯಪ್ರವೇಶಿಸಿದ ಪೊಲೀಸರೂ ಸಹ ಮದುವೆ ಕ್ರಮಗಳನ್ನು ಮುಂದುವರಿಸುವಂತೆ ಎರಡು ಕಡೆಯವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಆದರೆ ಪೊಲೀಸರ ಈ ರಾಜಿ ಸಂಧಾನವೂ ವಿಫಲವಾಗಿದೆ ಎಂದು ತಿಳಿದುಬಂದಿದೆ.

ಒಟ್ಟಿನಲ್ಲಿ, ಮದುವೆಯಾಗಿ ಸಂತೋಷದಿಂದ ಬಾಳಿ ಬದುಕಬೇಕಾಗಿದ್ದ ವಧು-ವರರು ಮತ್ತು ಈ ಖುಷಿಯಲ್ಲಿ ಇರಬೇಕಾಗಿದ್ದ ಎರಡೂ ಕುಟುಂಬಗಳು ಇದೀಗ ವಧುವಿನ ಈ ಒಂದು ನಿರ್ಧಾರದಿಂದ ದುಃಖದಲ್ಲಿ ಕಾಲ ಕಳೆಯುವಂತಾಗಿದೆ.