Friday, 22nd November 2024

Viral News: ರಾತ್ರಿ ಓವರ್ ಟೈಮ್ ಮಾಡಿ ಮರುದಿನ ಕಚೇರಿಗೆ ತಡವಾಗಿ ಬರುತ್ತೇನೆ ಎಂದ ಉದ್ಯೋಗಿ-ಭಾರೀ ವೈರಲಾಗ್ತಿದೆ ಆತ ಮಾಡಿದ ಮೆಸೇಜ್‌!

Viral News

ನವದೆಹಲಿ: ರಾತ್ರಿ ಓವರ್ ಟೈಮ್ ಕೆಲಸ ಮಾಡಿದ ಉದ್ಯೋಗಿಯೊಬ್ಬರು ಮರುದಿನ ಕೆಲಸಕ್ಕೆ ತಡವಾಗಿ ಬರುವ ಬಗ್ಗೆ ಬಾಸ್ ಗೆ ಹಾಕಿರುವ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral News) ಆಗಿದ್ದು, ಕೆಲಸ- ಜೀವನದ ಸಮತೋಲನದ ಬಗ್ಗೆ ಚರ್ಚೆಯನ್ನು ಉಂಟು ಮಾಡಿದೆ. ರಾತ್ರಿ ಕೆಲಸದ ಶಿಫ್ಟ್ ಮುಗಿದ ಬಳಿಕ ಮರುದಿನ ಕಚೇರಿಗೆ ತಡವಾಗಿ ಬರುವ ಬಗ್ಗೆ ಬಾಸ್‌ಗೆ ಸಂದೇಶ ಕಳುಹಿಸಿದ್ದನ್ನು ವಕೀಲರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ಆಗಿರುವ ಪೋಸ್ಟ್ ಗೆ ಕಾಮೆಂಟ್ ಮಾಡಿರುವ ಅನೇಕರು ಉದ್ಯೋಗಿಯನ್ನು ಸಮರ್ಥಿಸಿಕೊಂಡಿದ್ದಾರೆ. ಆತ ಸರಿಯಾದ ಕೆಲಸವನ್ನು ಮಾಡಿದ ಎಂದು ಹೇಳಿದ್ದಾರೆ. ಜೂನಿಯರ್ ಒಬ್ಬರು ಕಳುಹಿಸಿರುವ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿರುವ ಅಡ್ವೊಕೇಟ್ ಆಯುಷಿ ದೋಷಿ, ನನ್ನ ಜೂನಿಯರ್ ನನಗೆ ಇದನ್ನು ಕಳುಹಿಸಿದ್ದಾರೆಂದು ನನಗೆ ನಂಬಲಾಗುತ್ತಿಲ್ಲ. ಇಂದಿನ ಮಕ್ಕಳು ಬೇರೆಯೇ ಆಗಿದ್ದಾರೆ. ಅವರು ತಡವಾಗಿ ಬರುವುದಕ್ಕೆ ಸಮರ್ಥನೆಯನ್ನು ನೀಡುತ್ತಾರೆ. ಎಂತಹ ನಡೆ! ನಾನು ಮೂಕನಾಗಿದ್ದೇನೆ ಎಂದು ಶೀರ್ಷಿಕೆಯಲ್ಲಿ ಹೇಳಿದ್ದಾರೆ.

ಇದಕ್ಕೆ ಕಾಮೆಂಟ್ ಮಾಡಿರುವ ಎಲ್ಲರಿಗೂ ನಾನು ಪರಿಸ್ಥಿತಿಯನ್ನು ಸ್ಪಷ್ಟಪಡಿಸುತ್ತೇನೆ. ಸಾಮಾನ್ಯವಾಗಿ ಕನಿಷ್ಠ ಒಂದು ಪೂರ್ಣ ದಿನದ ಕೆಲಸದ ಅಗತ್ಯವಿರುವ ಕೆಲಸವನ್ನು ಪೂರ್ಣಗೊಳಿಸಲು ಅವರಿಗೆ 3 ದಿನಗಳ ಗಡುವು ನೀಡಲಾಗಿತ್ತು. ಅವರ ಕೆಲಸದ ಸಮಯವು ಬೆಳಗ್ಗೆ 10 ರಿಂದ ಸಂಜೆ 7 ರವರೆಗೆ ಇತ್ತು. ಆದರೆ ಆ ಸಮಯದೊಳಗೆ ಅವರಿಗೆ ಅದನ್ನು ಮುಗಿಸಲು ಸಾಧ್ಯವಾಗಲಿಲ್ಲ. ಅವರು ಕೆಲಸವನ್ನು ಪೂರ್ಣಗೊಳಿಸಲು ಕೇವಲ 1.5 ಗಂಟೆಗಳ ಕಾಲ ಕಳೆಯಬೇಕಾಗಿತ್ತು. ಸಮಸ್ಯೆಯೆಂದರೆ ಅವರು ಕೆಲಸದ ಮೇಲೆ ಗಮನ ಕೇಂದ್ರೀಕರಿಸುವ ಬದಲು ತಮ್ಮ ಫೋನ್‌ನಲ್ಲಿ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದಾರೆ. ಹೀಗಾಗಿ ಗಡುವಿನೊಳಗೆ ಕೆಲಸವನ್ನು ಪೂರ್ಣಗೊಳಿಸಲು ಹೆಚ್ಚುವರಿ ಸಮಯ ತೆಗೆದುಕೊಂಡಿರುವುದಾಗಿ ದೋಷಿ ಹೇಳಿದ್ದಾರೆ.

ಉದ್ಯೋಗಿಯು ಕಳುಹಿಸಿರುವ ಸಂದೇಶದಲ್ಲಿ ಹಾಯ್ ಸರ್ ಮತ್ತು ಮೇಡಮ್, ನಾನು ನಾಳೆ ಬೆಳಗ್ಗೆ 11.30ಕ್ಕೆ ಬರುತ್ತೇನೆ. ಯಾಕೆಂದರೆ ನಾನು ಈಗ ಕಚೇರಿಯಿಂದ ರಾತ್ರಿ 8.30ಕ್ಕೆ ಹೊರಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಒಬ್ಬ ವ್ಯಕ್ತಿ, ಜೂನಿಯರ್ ಗಳನ್ನು ತಡವಾಗಿ ಕೆಲಸ ಮಾಡುವಂತೆ ಒತ್ತಾಯಿಸಬೇಡಿ ಎಂದಿದ್ದಾರೆ. ಇನ್ನೊಬ್ಬರು ತಡವಾಗಿ ಕೆಲಸ ಮಾಡಲು ಒತ್ತಾಯಿಸಿ ಬಳಿಕ ಮೆಚ್ಚುಗೆ ಗಳಿಸಲು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಎಂದಿದ್ದಾರೆ.

ಮತ್ತೊಬ್ಬರು, ಜೂನಿಯರ್ ಇದನ್ನು ನಿರೀಕ್ಷಿಸುತ್ತಿರುವುದರಲ್ಲಿ ತಪ್ಪೇನೂ ಇಲ್ಲ. ಅವರು ಹಾಕುವ ಗಂಟೆಗಳಿಗೆ ಮಾತ್ರ ನೀವು ಪಾವತಿಸುತ್ತೀರಿ. ಅವರು ಸರಿಯಾಗಿ ಕೆಲಸ ಮಾಡದೇ ಇದ್ದರೆ ನೀವು ತಪ್ಪಾದ ಜೂನಿಯರ್ ಅನ್ನು ನೇಮಿಸಿಕೊಂಡಿದ್ದೀರಿ ಎಂದು ಹೇಳಿದ್ದಾರೆ.

Viral News: ಎಡಗಣ್ಣಿನ ಬದಲು ಬಲಗಣ್ಣಿಗೆ ಸರ್ಜರಿ; ವೈದ್ಯರ ಎಡವಟ್ಟಿಗೆ 7 ವರ್ಷದ ಬಾಲಕನ ಸ್ಥಿತಿ ಏನಾಗಿದೆ ಗೊತ್ತಾ?

ಇನ್ನೊಬ್ಬರು, ಅವರು ಸರಿಯಾದ ಕೆಲಸ ಮಾಡಿದ್ದಾರೆ. ಇತರರು ಅವರಿಂದ ಕಲಿಯುತ್ತಾರೆ ಎಂದು ಭಾವಿಸುತ್ತೇವೆ ಎಂದಿದ್ದಾರೆ.