ಮುಂಬೈ: 14 ವರ್ಷಗಳ ಅನುಭವ ಹೊಂದಿರುವ ಗ್ರಾಫಿಕ್ ಡಿಸೈನರ್(Graphic Designer) ಕಮಲೇಶ್ ಕಾಮ್ಟೇಕರ್(Kamlesh Kamtekar) ಎಂಬ ವ್ಯಕ್ತಿ ಈಗ ಜೀವನೋಪಾಯಕ್ಕಾಗಿ ಮುಂಬೈನ ರಸ್ತೆಗಳಲ್ಲಿ ಆಟೋರಿಕ್ಷಾವನ್ನು ಓಡಿಸುತ್ತಿದ್ದಾರೆ. 2024 ರ ಆರಂಭದಲ್ಲಿ ವ್ಯಕ್ತಿ ತನ್ನ ಕೆಲಸ ಕಳೆದುಕೊಂಡಿದ್ದು, ಇದೀಗ ಆಟೋ ಡ್ರೈವರ್ ಆಗಿ ಜೀವನ ನಡೆಸುತ್ತಿದ್ದಾರೆ. ಈ ಕುರಿತ ಸುದ್ದಿ ಈಗ ಎಲ್ಲೆಡೆ ಸಾಕಷ್ಟು ವೈರಲ್ ಆಗಿದೆ.(Viral News)
ಕ್ರಿಯೇಟಿವ್ ಮ್ಯಾನೇಜರ್ ಮತ್ತು ಗ್ರಾಫಿಕ್ ಡಿಸೈನರ್ ಉದ್ಯೋಗಿಯಾಗಿ ಒಳ್ಳೆಯ ಸಂಬಳ ಗಳಿಸುತ್ತಿದ್ದ ಕಮಲೇಶ್ ಕಾಮ್ಟೇಕರ್ ಇತ್ತೀಚೆಗೆ ತಮ್ಮ ಉದ್ಯೋಗದಿಂದ ವಜಾಗೊಂಡಿದ್ದರು. ಐದು ತಿಂಗಳುಗಳ ಕಾಲ ನಿರುದ್ಯೋಗಿಯಾಗಿದ್ದ ಅವರು ಕೆಲಸಕ್ಕಾಗಿ ಸಾಕಷ್ಟು ಹುಡುಕಾಡಿದ್ದು, ಕೊನೆಗೆ ಬೇರೆ ದಾರಿ ಕಾಣದೆ ಆಟೋ ಡ್ರೈವರ್ ಆಗಿ ಜೀವನ ನಡೆಸುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ಕೆಲಸವಿಲ್ಲದೆ ಇತ್ತ ಬಿಡಿಗಾಸು ಆದಾಯವೂ ಇಲ್ಲದೆ ಬದುಕು ದುಸ್ತರ ಅನ್ನಿಸಿದಾಗ ಕಮಲೇಶ್ ಅನಿವಾರ್ಯವಾಗಿ ಈ ಕೆಲಸವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಎಸಿ ರೂಮಿನಲ್ಲಿ ಕಂಪ್ಯೂಟರ್ ಎದುರು ಕೂತು ಆರಾಮವಾಗಿ ಕೆಲಸ ಮಾಡುತ್ತಿದ್ದ ಅವರಿಗೆ ಹೊಸ ಬದುಕು ಬೇರೆಯದ್ದೇ ಅನುಭವವನ್ನು ನೀಡಿದೆ.
ಈ ಕುರಿತು ಸ್ವತಃ ಕಮಲೇಶ್ ತಮ್ಮ ಲಿಂಕ್‌ಡ್ ಇನ್ ಖಾತೆಯಲ್ಲಿ ವಿವರವಾಗಿ ಬರೆದಿದ್ದು, ಈ ಹಿಂದಿನ ಅವರ ಆಫೀಸಿನಲ್ಲಿ ತೆದುಕೊಂಡ ಫೋಟೊ ಮತ್ತು ಆಟೋ ಎದುರು ನಿಂತು ತೆಗೆಸಿಕೊಂಡಿರುವ ಫೋಟೊದೊಂದಿಗೆ ಪೋಸ್ಟ್ ಶೇರ್ ಮಾಡಿದ್ದಾರೆ. ಕಮಲೇಶ್ ಅವರ ಪೋಸ್ಟ್ ಈಗ ಭಾರೀ ವೈರಲ್ ಆಗಿದ್ದು ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಲಿಂಕ್ಡಿನ್ ನಲ್ಲಿ 28 ಸಾವಿರಕ್ಕೂ ಹೆಚ್ಚು ಫಾಲೊವರ್ಸ್ ಅನ್ನು ಕಮಲೇಶ್ ಹೊಂದಿದ್ದಾರೆ.
83ರ ಇಳಿ ವಯಸ್ಸಿನಲ್ಲಿ ಬೀದಿ ಕಸ ಗುಡಿಸುವ ಅಜ್ಜ
ನಾವು ಮತ್ತು ನಮ್ಮ ಮನೆಯವರು ಚೆನ್ನಾಗಿದ್ದರೆ ಸಾಕು, ಊರಿನ ಉಸಾಬರಿ ನಮಗ್ಯಾಕೆ? ಎನ್ನುವ ಜನರೇ ನಮ್ಮ ನಡುವೆ ಹೆಚ್ಚಿದ್ದಾರೆ. ಅವ್ಯವಸ್ಥೆಗಳ ವಿರುದ್ಧ ಉದ್ದುದ್ದ ಭಾಷಣ ಮಾಡುತ್ತಾರೆಯೇ ವಿನಾ ಅವ್ಯವಸ್ಥೆಯ ಸಮಾಜವನ್ನು ವ್ಯವಸ್ಥಿತ ಸಮಾಜವಾಗಿಸುವ ಲವಲೇಶ ಪ್ರಯತ್ನವನ್ನೂ ಮಾಡುವುದಿಲ್ಲ. ಪ್ರತಿ ದಿನ ಅಡ್ಡಾಡುವ ರಸ್ತೆಯಲ್ಲಿ ಕಸದ ರಾಶಿ ಬಿದ್ದು, ಗಬ್ಬು ನಾರುತ್ತಿದ್ದರೂ ಅದನ್ನು ನೋಡಿಕೊಂಡು ಕ್ಯಾರೆ ಎನ್ನದೆ ಹೋಗುವವರಿದ್ದಾರೆ. ಆದರೆ ಇಲ್ಲೊಬ್ಬರು ತಮ್ಮ 83ನೇ ಇಳಿ ವಯಸ್ಸಿನಲ್ಲಿ ಮನೆ ಮಾತ್ರವಲ್ಲ ಇಡೀ ವಾತಾವರಣ ಸ್ವಚ್ಛವಾಗಿರಿಸಬೇಕೆಂದು ಪ್ರತಿ ದಿನವೂ ಬೀದಿ ಹಾಗೂ ಚರಂಡಿಯನ್ನು ಸ್ವಚ್ಛಗೊಳಿಸುವಂಥ ಕೆಲಸವನ್ನು ಮಾಡುತ್ತಿದ್ದಾರೆ. ಈ ಕುರಿತ ವಿಡಿಯೊವೊಂದು ಇದೀಗ ಸಾಕಷ್ಟು ವೈರಲ್ ಆಗುತ್ತಿದ್ದು, ಅವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬೆಂಗಳೂರಿನ ಎಚ್.ಎಸ್.ಆರ್ ಲೇಔಟ್‌ನಲ್ಲಿ(HSR Layout) ವಾಸವಿರುವ 83ರ ಹರೆಯದ ಸೂರ್ಯ ನಾರಾಯಣ್ ಎಂಬುವವರು ಪ್ರತಿದಿನ ಸುಮಾರು 1ರಿಂದ 2 ಗಂಟೆಗಳ ಕಾಲ ತಮ್ಮ ಮನೆಯ ಸುತ್ತಮುತ್ತಲಿನ ಬೀದಿಯನ್ನು ಸ್ವಚ್ಛಗೊಳಿಸುವ ಕೆಲಸವನ್ನು ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ. ಬಿಬಿಎಂಪಿ ಇಲ್ಲಿನ ಪರಿಸರದ ಸ್ವಚ್ಛತೆಯ ಬಗ್ಗೆ ಯಾವುದೇ ಕ್ರಮವನ್ನು ಕೈಗೊಳ್ಳದಿರುವ ಕಾರಣ ಹಲವು ವರ್ಷಗಳಿಂದ ಸ್ವತಃ ಸೂರ್ಯ ನಾರಾಯಣ್ ಅವರೇ ತಮ್ಮ ಮನೆಯ ಸುತ್ತಲಿನ ಬೀದಿಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಸೇವೆಯ ಮನೋಭಾವವಿರುವ ಇವರು ಪ್ರತಿದಿನ ಬೀದಿಯಲ್ಲಿರುವ ಕಸ ಕಡ್ಡಿಗಳನ್ನು ಗುಡಿಸುವುದರಿಂದ ಹಿಡಿದು, ಚರಂಡಿಗಳಲ್ಲಿ ಬಿದ್ದಂತಹ ಕಸಗಳನ್ನು ಸಹ ಗುಡಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ:Israel Construction Work: ಇಸ್ರೇಲ್‌ನಲ್ಲಿ ಪ್ಯಾಲೆಸ್ತೀನ್ ಕಾರ್ಮಿಕರಿಗೆ ನಿರ್ಬಂಧ- 16,000 ಭಾರತೀಯರಿಗೆ ಉದ್ಯೋಗ ಭಾಗ್ಯ!